ಕೊಪ್ಪಳ/ ಗಂಗಾವತಿ : ಕರ್ನಾಟಕದ ‘ಭತ್ತದ ಕಣಜ’ ಎಂದೇ ಕರೆಯಲಾಗುವ ಗಂಗಾವತಿಯಲ್ಲಿ 1989, 1994 ಹಾಗೂ 1999ರ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಶ್ರೀರಂಗದೇವರಾಯಲು ಸತತ ಮೂರು ಬಾರಿ ಜಯಗಳಿಸಿ ದಾಖಲೆ ಬರೆದರು.
2004ರಿಂದ ಹೊಸ ತಲೆಮಾರು ರಾಜಕೀಯ ಪ್ರವೇಶ ಮಾಡಿತು. ಅಂದಿನಿಂದ ಕ್ಷೇತ್ರದಲ್ಲಿ ಇಕ್ಬಾಲ್ ಅನ್ಸಾರಿ ಮತ್ತು ಪರಣ್ಣ ಈಶ್ವರಪ್ಪ ಮುನವಳ್ಳಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಒಮ್ಮೆ ಇಕ್ಬಾಲ್ ಅನ್ಸಾರಿ ಗೆದ್ದರೆ, ಮತ್ತೊಮ್ಮೆ ಪರಣ್ಣ ಈಶ್ವರಪ್ಪ ಮುನವಳ್ಳಿ ಗೆಲ್ಲುತ್ತಾ ಬರುತ್ತಿದ್ದಾರೆ. ಲಿಂಗಾಯತರ ಪ್ರಾಬಲ್ಯದ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯೊಬ್ಬರು ಗೆದ್ದಿರುವುದು ವಿಶೇಷವಾಗಿದೆ.
ಕಳೆದ 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಫುಟ್‌ಬಾಲ್ ಆಡಿ ಜನಾರ್ಧನ ರೆಡ್ಡಿ ಗೆಲವು ಸಾಧಿಸಿದರು.
ಅದರೆ ಈಗ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ತೀರ್ಪಿನಿಂದಾಗಿ ಶಾಸಕ ಜನಾರ್ಧನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟವಾಗಿದ್ದು, 3 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಆಗಿರುವುದರಿಂದ ಜೈಲು ಸೇರುವುದು ಖಚಿತವಾಗಿದೆ.
ಜಾಮೀನಿಗಾಗಿ ಹೈದರಾಬಾದ್ನ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕು, ಹೈಕೋರ್ಟ್ ಜಾಮೀನು ನೀಡುವವರೆಗೆ ಜೈಲಿನಲ್ಲಿರಬೇಕು.
ಹೈಕೋರ್ಟ್ ಜಾಮೀನು ನೀಡದಿದ್ದ ಪಕ್ಷದಲ್ಲಿ ಈಗ ನೀಡಿರುವ ತೀರ್ಪಿನ ಪ್ರಕಾರ ಶಾಸಕ ಸ್ಥಾನ ರದ್ದಾಗುವ ಸಾಧ್ಯತೆ ಇದೆ. ಹೀಗಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ.
ಜನಾರ್ದನ ರೆಡ್ಡಿ ಸ್ಥಾಪಿತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಯಿಂದ ಗೆದ್ದು ಮಾತೃ ಪಕ್ಷವಾದ ಬಿಜೆಪಿಗೆ ಮರಳಿದ್ದರು.
ಒಂದು ವೇಳೆ ಶಾಸಕ ಸ್ಥಾನ ರದ್ದಾದರೆ ? ಮುಂದಿನ ಚುನಾವಣೆಗೆ ಈಗನಿಂದಲೇ ರಾಜಕೀಯ ಲೆಕ್ಕಾಚಾರ ಗರಿ-ಗದರಿದೆ.
ವರದಿ : ಜಿಲಾನಸಾಬ್ ಬಡಿಗೇರ್
