ನವದೆಹಲಿ/ಬೆಂಗಳೂರು : ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ. 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಬಿ.ವಿ.ಶ್ರೀನಿವಾಸರೆಡ್ಡಿ ಮತ್ತು ಇತರರನ್ನು ಕೂಡ ಅಪರಾಧಿ ಎಂದು ಘೋಷಿಸಲಾಗಿದೆ. ಈ ತೀರ್ಪಿನಿಂದ ಗಾಲಿ ಜನಾರ್ದನ ರೆಡ್ಡಿ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಯಿದೆ. 884 ಕೋಟಿ ರೂಪಾಯಿಗಳ ಅಕ್ರಮ ಲಾಭ ಗಳಿಸಲಾಗಿದೆ ಎಂದು ಸಾಬೀತಾಗಿದೆ.
ಓಬಳಾಪುರಂ ಮೈನಿಂಗ್ ಕಂಪನಿ (OMC) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಪರಾಧಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಓಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದ ಬಿ.ವಿ.ಶ್ರೀನಿವಾಸರೆಡ್ಡಿ ಮತ್ತು ಓಬಳಾಪುರಂ ಮೈನಿಂಗ್ ಕಂಪನಿಯ ಮುಖ್ಯಸ್ಥನಾಗಿದ್ದ ಜನಾರ್ದನ ರೆಡ್ಡಿ ಅಪರಾಧಿ ಎಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ (CBI Court) ತೀರ್ಪು ಪ್ರಕಟಿಸಿದೆ.
ಜನಾರ್ದನ್ ರೆಡ್ಡಿಗೆ ಜೈಲು ಫಿಕ್ಸ್
ಶಾಸಕ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟವಾಗಿದ್ದು, 3 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಆಗಿರುವುದರಿಂದ ಜೈಲು ಸೇರುವುದು ಖಚಿತವಾಗಿದೆ. ಜಾಮೀನಿಗಾಗಿ ಹೈದರಾಬಾದ್ನ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕು, ಹೈಕೋರ್ಟ್ ಜಾಮೀನು ನೀಡುವವರೆಗೆ ಜೈಲಿನಲ್ಲಿರಬೇಕು.
ಶಿಕ್ಷೆ ಪ್ರಮಾಣ ಕಡಿಮೆಗೊಳಿಸುವಂತೆ ರೆಡ್ಡಿ ಮನವಿ
“ಬಳ್ಳಾರಿ ಮತ್ತು ಗಂಗಾವತಿಯ ಜನರು ನನ್ನನ್ನು ಭಾರಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ
ನಾನು ಸಾರ್ವಜನಿಕ ಸೇವೆಗೆ ಸಮರ್ಪಿತನಾಗಿದ್ದೇನೆ. ಸಾರ್ವಜನಿಕರಿಂದ ನನಗೆ ಸಿಗುವ ಬೆಂಬಲವು ಆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ದಯವಿಟ್ಟು ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಿ ಎಂದು ಜನಾರ್ದನ್ ರೆಡ್ಡಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ಜನಾರ್ಧನ ರೆಡ್ಡಿ ಮನವಿಯನ್ನು ತಿರಸ್ಕರಿಸಿ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ವರದಿ : ಜಿಲಾನಸಾಬ್ ಬಡಿಗೇರ್
