ಬಳ್ಳಾರಿ / ಕಂಪ್ಲಿ : 2025ರ ಎಸ್ ಎಸ್ ಎಲ್ ಸಿ ಫಲಿತಾಂಶ ಇತ್ತೀಚೆಗೆ ಪ್ರಕಟಗೊಂಡಿದ್ದು, ಈ ಫಲಿತಾಂಶದಲ್ಲಿ ತಾಲೂಕಿನ ರಾಮಸಾಗರ ಬಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಯಶ್ವಂತ್ ಸಿ. ಜಿ. ಎಂಬ ವಿದ್ಯಾರ್ಥಿ 625ಕ್ಕೆ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಮತ್ತು ಕಲ್ಯಾಣ ಕರ್ನಾಟಕಕ್ಕೆ ಪ್ರಥಮ ಸ್ಥಾನದ ಹೆಗ್ಗಳಿಕೆ ಪಡೆದಿದ್ದಾನೆ. ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮೊರಾರ್ಜಿ ದೇಸಾಯಿ ವಸತಿ ಶಾಲೆಯು ನೂರಕ್ಕೆ 98ರಷ್ಟು ಫಲಿತಾಂಶ ಪಡೆಯುವ ಮೂಲಕ ವಿದ್ಯಾರ್ಥಿಗಳು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಪ್ರಾಚಾರ್ಯರಾದ ಮರಿಯಪ್ಪ ತಿಳಿಸಿದರು.
ಸದರಿ ಶಾಲೆಯಿಂದ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಗೆ ಹಾಜರಾದ 46 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇದರಲ್ಲಿ 23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 12 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಸಾಧನೆಯೊಂದಿಗೆ ಶಾಲೆಯ ಕೀರ್ತಿಗೆ ಪಾತ್ರರಾಗಿದ್ದಾರೆ. ಶಾಲೆಯ ವಿದ್ಯಾರ್ಥಿ ಯಶ್ವಂತ್ ಸಿ.ಜಿ 624(ಶೇ 99.84%), ಸಹನಾ ಬಿ.ಜಿ 616(ಶೇ 98.56%), ಕೆ.ತನುಶ್ರೀ, ಪ್ರಿಯಾಂಕಾ ತಳಕಲ್ ತಲಾ 615(ಶೇ 98.40%), ಕೀರ್ತನಾ 612(ಶೇ 97.92%), ಪ್ರಭಾಕರ್ ಎಂ 607(ಶೇ 97.12), ಶಶಾಂಕ್ ಜಿ 605 (ಶೇ.96.80), ಉತ್ತಂಗಿ ಗೌತಮ್ 600(ಶೇ96) ಅಂಕಗಳ ಸಾಧನೆ ಮಾಡಿದ್ದಾರೆ. ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆಯುವ ಜತೆಗೆ ಶಾಲೆಗೆ ನೂರಕ್ಕೆ 98ರಷ್ಟು ಫಲಿತಾಂಶವನ್ನು ತಂದ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಪ್ರಾಚಾರ್ಯ ಹಾಗೂ ಸಹ ಶಿಕ್ಷಕ ವೃಂದದವರು ಮತ್ತು ಪೋಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್
