
ಕೋಲಾರ: ಜಿಲ್ಲೆಯಲ್ಲಿ ಟೊಮೆಟೊ ಬೆಲೆ ದಿಢೀರನೆ ಕುಸಿತವಾಗಿದೆ. ಇದರಿಂದ ಕೋಲಾರ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಕಳೆದ 4-5 ವರ್ಷಗಳಿಂದ ಟೊಮೆಟೊ ಬೆಳೆಗೆ ವೈರಸ್ ರೋಗ ತಗುಲಿದ್ದರಿಂದ ಉತ್ಪಾದನೆ ಕುಂಠಿತವಾಗಿತ್ತು. ಕಷ್ಟಪಟ್ಟು ಬೆಳೆ ಬೆಳೆದಿದ್ದ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದರು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಕೂಡಾ ಉತ್ತಮ ಬೆಳೆ ಬಾರದ ಪರಿಣಾಮ ರೈತರು ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದರು. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಟೊಮೆಟೊ ಬೆಳೆ ರೋಗಕ್ಕೆ ತುತ್ತಾಗಿ ಹೋಗುತ್ತಿತ್ತು.
ಕೋಲಾರ ಜಿಲ್ಲೆಯಾದ್ಯಂತ ಉತ್ತಮ ಟೊಮೆಟೊ ಬೆಳೆ ಬಂದಿದೆ. ಆದರೆ, ರೈತರ ದುರಾದೃಷ್ಟವೋ ಏನೋ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊಗೆ ಬೆಲೆ ಕುಸಿತಗೊಂಡಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಟೊಮೆಟೊ ಕೇವಲ 50, 80 ಮತ್ತು 100 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ, ಹಾಕಿದ ಬಂಡವಾಳ ಕೂಡಾ ಬಾರದ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ತೋಟದಲ್ಲೇ ಬಿಡುತ್ತಿದ್ದಾರೆ.
ಇನ್ನು, ಕೆಲವು ರೈತರು ಟೊಮೆಟೊ ಅನ್ನು ರಸ್ತೆ ಬದಿಯಲ್ಲಿ ಸುರಿದು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಸರ್ಕಾರ ಟೊಮೆಟೊ ಬೆಳೆದ ರೈತರಿಗೆ ಕೆಜಿಗೆ ಕನಿಷ್ಠ ಹತ್ತು ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ ಮಾಡಿ ಆಗ್ರಹಿಸಿದೆ.
ವರದಿ : ಜಿಲಾನಸಾಬ್ ಬಡಿಗೇರ್
