ಬಳ್ಳಾರಿ / ಕಂಪ್ಲಿ : ಬಡವರ, ಶೋಷಿತರ ಪರವಾಗಿ ಪ್ರೋ.ಬಿ.ಕೃಷ್ಣಪ್ಪ ಅವರು ಸಂಘಟನೆ ಕಟ್ಟಿದ್ದು, ಈ ಸಂಘಟನೆಯ ಏಳಿಗೆಗೆ ಹೊಸ ಸಮಿತಿಯ ನೂತನ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ.ಕೃಷ್ಣಪ್ಪ ಸ್ಥಾಪಿತ)ಯ ಜಿಲ್ಲಾ ಸಂಚಾಲಕ ಗೋವರ್ಧನ ಹೇಳಿದರು.
ಸ್ಥಳೀಯ ಸಕ್ಕರೆ ಕಾರ್ಖಾನೆಯ ಕೋದಂಡರಾಮ ದೇವಸ್ಥಾನ ಆವರಣದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕೆ.ಮಲ್ಲಿಕಾರ್ಜುನ ಮತ್ತು ಕಂಪ್ಲಿ ತಾಲೂಕು ಮಾಜಿ ಸಂಚಾಲಕ ಲಕ್ಷ್ಮೀಪತಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಪದಾಧಿಕಾರಿಗಳ ಆಯ್ಕೆ ಸಮಿತಿ ಸಭೆಯಲ್ಲಿ ಮಾತನಾಡಿ, ಸಂಘಟನೆಯು ವೈಚಾರಿಕೆ ಚಳುವಳಿಯಾಗಿದೆ. ರಾಜ್ಯಾದ್ಯಂತ ಜನರ ಧ್ವನಿಯಾಗಿ ಕೆಲಸ ಮಾಡುವ ಜತೆಗೆ ಶೋಷಿತರಿಗೆ ನ್ಯಾಯ ಒದಗಿಸಿಕೊಡುತ್ತಾ ಬಂದಿದೆ. ಎಲ್ಲರೂ ಒಟ್ಟಿಗೆ ಸೇರಿ ಸಂಘಟನೆ ಬಲಪಡಿಸುವ ಜತೆಗೆ ಜನರ ಧ್ವನಿಯಾಗಿ ಕೆಲಸ ಮಾಡಬೇಕು ಎಂದರು.
ನಂತರ ರಾಜ್ಯ ಸಂಘಟನಾ ಸಂಚಾಲಕ ಕೆ.ಮಲ್ಲಿಕಾರ್ಜುನ ಮಾತನಾಡಿ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಸಂಘಟನೆಯಲ್ಲಿ ಸೇವಕರಿಗೆ ಒಳ್ಳೆಯ ಸ್ಥಾನಗಳು ಲಭಿಸಲಿವೆ. ಯಾರು ಅಸಮಾಧಾನ ಮಾಡಿಕೊಳ್ಳದೆ ತಾಲೂಕು ನೂತನ ಸಂಚಾಲಕರಿಗೆ ಬೆಂಬಲವಾಗಿ ನಿಲ್ಲುವಂತಹ ಕೆಲಸ ಮಾಡಬೇಕು. ಸಂಘಟನೆಯ ಸಿದ್ದಾಂತಗಳಿಗೆ ತಕ್ಕಂತೆ ಸ್ವಾಭಿಮಾನಿಯಾಗಿ ಸೇವೆ ಸಲ್ಲಿಸುವ ಪ್ರವೃತಿ ಹೊಂದಬೇಕು. ಇತ್ತೀಚಿನ ಸಾಮಾಜಿಕ ಜಾಲತಾಣ ಬಳಕೆ ಮಾಡಿಕೊಂಡು, ಸಂಘಟನೆಯ ಬಲವರ್ಧನೆಗೆ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಸಣ್ಣ ನಾಗರಾಜ, ನಟರಾಜಗೌಡ, ತೋಟರಾಜು, ವೀರಭದ್ರ, ಕಾರ್ಯಕಾರಿ ಸಮಿತಿ ಸದಸ್ಯ ಎಮ್ಮಿಗನೂರು ಜಡೆಪ್ಪ ಸೇರಿದಂತೆ ಇತರರು ಇದ್ದರು.
ಆಯ್ಕೆ: ಕಂಪ್ಲಿ ತಾಲೂಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಹೆಚ್.ಗುಂಡಪ್ಪ (ತಾಲೂಕು ಸಂಚಾಲಕ), ಮರಿಯಪ್ಪ ಸಣಾಪುರ, ಚಂದ್ರಶೇಖರ ಎಮ್ಮಿಗನೂರು, ಮಹೇಶ ಮೆಟ್ರಿ, ಬಾಳಪ್ಪ ಹೊನ್ನಳ್ಳಿ, ಈರಣ್ಣ ರಾಮಸಾಗರ, ಪಕ್ಕೀರಪ್ಪ ಎಮ್ಮಿಗನೂರು, ಬಾಲು ಶುಗರ್ ಫ್ಯಾಕ್ಟರಿ (ತಾಲೂಕು ಸಂಘಟನಾ ಸಂಚಾಕರು) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸಪ್ಪ ಮೆಟ್ರಿ, ಹುಲುಗಪ್ಪ ಹಂಪಾದೇವನಹಳ್ಳಿ, ಪರಶುರಾಮ ದೇವಲಾಪುರ ಇವರು ಆಯ್ಕೆಗೊಂಡರು.
ವರದಿ : ಜಿಲಾನಸಾಬ್ ಬಡಿಗೇರ್
