ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಧುನಿಕ ಜೀವನ ಶೈಲಿ, ಬೊಜ್ಜು ಮತ್ತು ಸಮತೋಲನ ಆಹಾರ

ಪ್ರಸ್ತುತ ದಿನಮಾನಗಳಲ್ಲಿ ಬಹುತೇಕ ಜನರು ಆರೋಗ್ಯದ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನ ಮಕ್ಕಳು ಕೂಡಾ ಮಧುಮೇಹ, ಬೊಜ್ಜು, ಒತ್ತಡದ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಕಾರಣ ಬಹಳ ಸ್ಪಷ್ಟ ಮತ್ತು ಸರಳವಾಗಿದೆ. ಅತ್ಯಂತ ಕಡಿಮೆ ಶ್ರಮದ ಬದುಕು ಮತ್ತು ಅಧಿಕ ಜಿಡ್ಡನ್ನು ಹೊಂದಿರುವ ಜಂಕ್ ಫುಡ್ ನ ಸೇವನೆ.

ಅದರಲ್ಲೂ ಇತ್ತೀಚಿಗಿನ ದಿನಮಾನಗಳಲ್ಲಿ ಪ್ರತಿ ಶಹರ, ಪಟ್ಟಣ ಮತ್ತು ಹಳ್ಳಿಗಳಲ್ಲೂ ವಿವಿಧ ಬಗೆಯ ತಿಂಡಿ ತೀರ್ಥಗಳನ್ನು ಮಾಡುವ ಮತ್ತು ಮಾರಾಟ ಮಾಡುವ ಸ್ಟಾಲ್ಗಳು ಜನರ ನಾಲಿಗೆಯ ಚಟವನ್ನು ತೀರಿಸಲು ನಾ ಮುಂದು ತಾ ಮುಂದು ಎಂದು ಠಿಕಾಣಿ ಹೂಡಿದ್ದಾರೆ… ಅವರನ್ನು ನಿರಾಸೆ ಮಾಡಲು ಬಯಸದ ಜನರು ಸಾಲುಗಟ್ಟಿ ಅವರಲ್ಲಿ ತಿಂಡಿಯನ್ನು ಖರೀದಿಸಿ ತಮ್ಮ ಬಾಯಿ ಚಪಲವನ್ನು ತೀರಿಸಿಕೊಳ್ಳುತ್ತಾರೆ. ಯಾವಾಗಲೋ ಒಂದು ದಿನ ಈ ರೀತಿ ತಿಂದರೆ ತೊಂದರೆ ಇಲ್ಲ ನಿಜ, ಆದರೆ ಪ್ರತಿದಿನವೂ ‘ಅದೇ ರಾಗ ಅದೇ ಹಾಡು’ ಎಂಬಂತೆ ಆದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ…. ಜೊತೆಗೆ ಅನವಶ್ಯಕ ಜಿಡ್ಡು ದೇಹವನ್ನು ಸೇರಿ ಬೊಜ್ಜಿಗೆ ಕಾರಣವಾಗುತ್ತದೆ.

ಈ ಬೊಜ್ಜು ತುಂಬಾ ಘಾಟಿ ಕಣ್ರೀ! ತಾನೊಬ್ನೇ ದೇಹದಲ್ಲಿ ಸೇರಿಕೊಳ್ಳುವುದಲ್ಲದೇ ಜೊತೆಗೆ ರಕ್ತದೊತ್ತಡ ಮಧುಮೇಹಗಳನ್ನು ತನ್ನೊಂದಿಗೆ ಇರಲು ದೇಹಕ್ಕೆ ಆಹ್ವಾನ ನೀಡುತ್ತದೆ. ಇನ್ನು ಇವರೆಲ್ಲರೂ ಸೇರಿ ನಮ್ಮ ದೇಹದ ಮೇಲೆ ದಾಳಿ ಇಟ್ಟಾಗ ದೇಹದ ಸ್ಥಿತಿ ಅಧೋಗತಿ.

ಬರುವಾಗ ಮೆಲ್ಲಮೆಲ್ಲನೆ ಒಂದೊಂದೇ ಅಡಿ ಇಟ್ಟು ಬಂದಂತೆ ಭಾಸವಾದರೂ ತೂಕವೆಂಬ ಪರ್ವತ ನಮ್ಮ ದೇಹವನ್ನು ಹೊಕ್ಕಾಗ ಕಾಲುಗಳ ಮೇಲೆ ವಿಪರೀತ ಭಾರ ಬಿದ್ದು ನಡೆಯುವಾಗ ಏದುಸಿರು ಹೊಮ್ಮುತ್ತದೆ. ವಿಪರೀತ ಬೊಜ್ಜು ದೈಹಿಕವಾಗಿ ನಮ್ಮನ್ನು ಹೈರಾಣ ಮಾಡುತ್ತದೆ. ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಲು ಕೂಡ ತೊಂದರೆ ಎನಿಸುತ್ತದೆ. ದೇಹವು ತನ್ನ ಆಕಾರವನ್ನು ಕಳೆದುಕೊಳ್ಳುತ್ತದೆ. ನಮ್ಮ ಶರೀರ ಕಾಯಿಲೆಗಳ ಗೂಡಾಗಿ ಎಲ್ಲದರ ಮೇಲೂ ಆಸಕ್ತಿಯನ್ನು ಕಳೆದುಕೊಳ್ಳುತ್ತೇವೆ.

ಹಾಗಿದ್ದರೆ ಬದುಕೆಲ್ಲಾ ಈ ರೀತಿ ಬೊಜ್ಜಿನ ಅನಾರೋಗ್ಯದ ಸಮಸ್ಯೆಯಿಂದ ಬಳಲಬೇಕೇ?. ಹೆಜ್ಜೆಯನ್ನು ಕಿತ್ತಿಡಲು ಒದ್ದಾಡಿ ಬೇಸರ ಪಡಬೇಕೇ?
ಜೀವನವೇ ಸಾಕಾಯ್ತು ಎಂಬಂತಹ ಭಾವದಿಂದ ಬದುಕಬೇಕೆ? ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ. ಹಿತಮಿತವಾದ ಆಹಾರ ಸೇವನೆ ವ್ಯಾಯಾಮ ನಡಿಗೆ ಮತ್ತು ಉತ್ತಮ ಹವ್ಯಾಸಗಳನ್ನು ನಮ್ಮದಾಗಿಸಿಕೊಳ್ಳುವ ಮೂಲಕ ಬೊಜ್ಜಿನ ಪರ್ವತವನ್ನು ಸಹನೀಯ ಎನ್ನುವಷ್ಟರ ಮಟ್ಟಿಗಾದರೂ ಇಳಿಸಿಕೊಳ್ಳಬಹುದು. ಆದರೆ ಇದೊಂದು ನಿರಂತರ ಪ್ರಕ್ರಿಯೆ. ನಮ್ಮ ಬದುಕಿನ ಕೊನೆಯವರೆಗೂ ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ಒಳ್ಳೆಯ ಹವ್ಯಾಸಗಳನ್ನು ನಮ್ಮದಾಗಿಸಿಕೊಳ್ಳುವ ಮೂಲಕ ಸುಸ್ಥಿರ ಆರೋಗ್ಯವನ್ನು ಕಾಯ್ದುಕೊಳ್ಳಬಹುದು.

ಏನಿದು ಸಮತೋಲನ ಆಹಾರ? ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಅತ್ಯಂತ ಸರಳ.
ನಮ್ಮ ಊಟದ ತಟ್ಟೆಯಲ್ಲಿ ತಲಾ ನಾಲ್ಕನೇ ಒಂದು ಭಾಗ ವಿವಿಧ ಬಗೆಯ ಹಣ್ಣುಗಳು, ತರಕಾರಿಗಳು, ಧಾನ್ಯ ಮತ್ತು ಬೇಳೆಕಾಳುಗಳು ಮತ್ತು ಪ್ರೋಟೀನ್ ಭರಿತ ಆಹಾರ ಪದಾರ್ಥಗಳನ್ನು ಹೊಂದಿರುವುದು ಸಮತೋಲನ ಆಹಾರ ಎಂದು ಕರೆಸಿಕೊಳ್ಳುತ್ತದೆ.

ಪ್ರತಿದಿನವೂ ಕಡ್ಡಾಯವಾಗಿ ಒಂದು ಬಾರಿ ತಿಂಡಿಯನ್ನು ಮತ್ತು ಎರಡು ಬಾರಿ ಊಟವನ್ನು ನಾವು ಮಾಡುತ್ತೇವಷ್ಟೇ.. ಒಬ್ಬ ಆರೋಗ್ಯವಂತ ವ್ಯಕ್ತಿ ಕನಿಷ್ಠ ಎರಡು ಬಾರಿ ಊಟವನ್ನಾದರೂ ಮಾಡಲೇಬೇಕು. ಆತನ ಊಟದ ತಟ್ಟೆಯಲ್ಲಿ ತರಕಾರಿಯಿಂದ ತಯಾರಿಸಿದ ಪಲ್ಯ, ಸೌತೆಕಾಯಿ ಗಜ್ಜರಿ ಮೂಲಂಗಿ ಮೆಂತೆ ಸೊಪ್ಪಿನಂತಹ ಹಸಿ ತರಕಾರಿಗಳ ಸಲಾಡ್, ಬೇಳೆ ಮತ್ತು ಕಾಳಿನ ಪದಾರ್ಥಗಳು, ಗೋಧಿ ಹಿಟ್ಟಿನ ಚಪಾತಿ ಇಲ್ಲವೇ ಜೋಳದ ಹಿಟ್ಟಿನ ರೊಟ್ಟಿ ಮತ್ತು ಒಂದು ಚಿಕ್ಕ ಬಟ್ಟಲು ಅನ್ನ ಮತ್ತು ಆಯಾ ಸಮಯದಲ್ಲಿ ದೊರೆಯುವ ತಾಜಾ ಹಣ್ಣುಗಳು, ಹಾಲು ಮತ್ತು ಹಾಲಿನ ಪದಾರ್ಥಗಳು ಕೂಡಾ ಇರಲೇಬೇಕು.

ಸ್ಥಳೀಯವಾಗಿ ಬೆಳೆಸಿದ ತರಕಾರಿ ಮತ್ತು ಹಣ್ಣುಗಳು ಹೆಚ್ಚು ಶ್ರೇಷ್ಠ. ಹೆಚ್ಚಿದ ಹಸಿ ಸೌತೆ, ಗಜ್ಜರಿ, ಮೂಲಂಗಿಯ ಹೋಳುಗಳು, ಹಸಿರು ಸೊಪ್ಪಿನ ಪದಾರ್ಥಗಳು ಮತ್ತು ಹಣ್ಣುಗಳು ಪೌಷ್ಟಿಕತೆಯ ಖಜಾನೆಯನ್ನು ತಮ್ಮಲ್ಲಿ ಹೊಂದಿವೆ. ಹಣ್ಣುಗಳು ಕೂಡ ನೈಸರ್ಗಿಕ ರುಚಿಕಾರಕವಾಗಿದ್ದು ನಾರಿನ ಅಂಶವನ್ನು ಹೊಂದಿರುತ್ತವೆ. ಸುಲಭವಾಗಿ ಜೀರ್ಣವಾಗುವಂತಹ ಹಣ್ಣುಗಳ ಸೇವನೆಯಿಂದ ಹೊಟ್ಟೆಯನ್ನು ತುಂಬಿಸಿಕೊಳ್ಳಬಹುದು.

ಈ ಹಿಂದೆ ಅತಿಯಾದ ರಕ್ತದೊತ್ತಡಕ್ಕೆ ಉಪ್ಪು, ಎಣ್ಣೆ, ಮತ್ತು ತುಪ್ಪದಂತಹ ಜಿಡ್ಡಿನ ಪದಾರ್ಥಗಳು ಕಾರಣ ಎಂದು ಹೇಳುತ್ತಿದ್ದರೆ ಇದೀಗ ನಮ್ಮ ದೇಹವನ್ನು ಸೇರುವ ಅತಿಯಾದ ಕಾರ್ಬೋಹೈಡ್ರೇಟ್ ಗಳು ಕಾರಣ ಎಂದು ಹೇಳಲಾಗುತ್ತಿದೆ. ಒಂದಕ್ಕಿಂತ ಹೆಚ್ಚು ಧಾನ್ಯಗಳ ಬಳಕೆ ಮಾಡುವುದನ್ನು ಪಟ್ಟಣಗಳಲ್ಲಿ ಪ್ರೋತ್ಸಾಹಿಸಲಾಗುತ್ತದೆ ಆದರೆ ಹಳ್ಳಿಗಳಲ್ಲಿ ತುಸು ಹೆಚ್ಚೇ ವೈವಿಧ್ಯಮಯ ಧಾನ್ಯಗಳನ್ನು ಬಳಸುತ್ತಾರೆ.

ಭಾರತದಂತಹ ಬಹು ಸಂಸ್ಕೃತಿಯ ವೈವಿಧ್ಯಮಯ ಆಹಾರ ಪದ್ಧತಿಯ ರಾಷ್ಟ್ರದಲ್ಲಿ ಪ್ರತಿಯೊಂದು ಜಿಲ್ಲೆ, ತಾಲೂಕುಗಳಲ್ಲಿ ಆಹಾರ ಸೇವನೆಯ ವಿಧಾನದಲ್ಲಿ ಬದಲಾವಣೆಗಳನ್ನು ನಾವು ಕಾಣುತ್ತೇವೆ. ಉತ್ತರ ಕರ್ನಾಟಕದಲ್ಲಿ ರೊಟ್ಟಿ ಪ್ರಧಾನ ಆಹಾರವಾದರೆ ಮೈಸೂರು ಭಾಗದಲ್ಲಿ ರಾಗಿಯ ಮುದ್ದೆ ರಾಗಿ ರೊಟ್ಟಿಗಳು ಪ್ರಧಾನ ಆಹಾರವಾಗಿವೆ. ಬೆಂಗಳೂರು ಮತ್ತು ಉತ್ತರ ದಕ್ಷಿಣ ಕನ್ನಡ ಭಾಗಗಳಲ್ಲಿ ವಿವಿಧ ಬಗೆಯ ಅನ್ನದ ಖಾದ್ಯಗಳನ್ನು ಮತ್ತು ಗಂಜಿ ಆಹಾರ ಪದಾರ್ಥವಾಗಿದೆ. ಈ ಮೊದಲು ಕೆಲವೇ ಪ್ರಾಂತಗಳಲ್ಲಿ ಗೋಧಿ ಹಿಟ್ಟಿನಿಂದ ಮಾಡುವ ಚಪಾತಿಯನ್ನು ಮಾಡುತ್ತಿದ್ದರೆ ಇದೀಗ ಸಾರ್ವತ್ರಿಕವಾಗಿ ಎಲ್ಲೆಡೆ ಗೋದಿ ಹಿಟ್ಟನ್ನು ಚಪಾತಿ ಪರೋಟ ಪುಲ್ಕ ಎಂಬ ವಿವಿಧ ಹೆಸರುಗಳಲ್ಲಿ ಆಹಾರವಾಗಿ ಬಳಸಲಾಗುತ್ತದೆ.

ಆಹಾರ ಯಾವುದಾದರೇನು? ಹಿತಮಿತವಾದ ಸ್ಥಳೀಯವಾಗಿ ಬೆಳೆದ ಧಾನ್ಯಗಳಿಂದ ತಯಾರಿಸಿದ, ತಾಜಾವಾಗಿ ತಯಾರಿಸಿದ ಆಹಾರ ಸೇವನೆ ಮುಖ್ಯ. ಒತ್ತಡದ ಇಂದಿನ ಬದುಕಿನಲ್ಲಿ ಪ್ರತಿ ಹೊತ್ತಿನ ಆಹಾರವನ್ನು ತಯಾರಿಸುವುದು ಕಷ್ಟ ಎಂದು ಹೇಳುವವರಿಗೆ ಮುಂಜಾನೆ ಮತ್ತು ರಾತ್ರಿಯ ಆಹಾರವನ್ನಾದರೂ ಬಿಸಿಬಿಸಿಯಾಗಿ ತಯಾರಿಸಿ ಸೇವಿಸುವುದು ಅಪೇಕ್ಷಣೀಯ. ಆಹಾರವನ್ನು ತಯಾರಿಸಿದ ಕೆಲ ಗಂಟೆಗಳ ನಂತರ ಅದು ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ… ಮತ್ತು ಕೆಡಲೂಬಹುದು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡು ಆಹಾರವನ್ನು ತಯಾರಿಸಿ ಮತ್ತು ಸೇವಿಸುವುದು ಒಳ್ಳೆಯದು.

ಮತ್ತೆ ಕೆಲವರು ಒಂದು ಬಾರಿ ಅಡುಗೆಯನ್ನು ತಯಾರಿಸಿ ಅದನ್ನೇ ಪದೇ ಪದೇ ಬಿಸಿ ಮಾಡಿ ಉಣ ಬಡಿಸುತ್ತಾರೆ… ಇದು ಸರ್ವಥಾ ತಪ್ಪು. ಆಹಾರವನ್ನು ಪದೇ ಪದೇ ಬಿಸಿ ಮಾಡುವುದರಿಂದ ಅದರಲ್ಲಿರುವ ಪೌಷ್ಟಿಕ ಅಂಶಗಳು ನಷ್ಟವಾಗುತ್ತವೆ.

ಒಟ್ಟಿನಲ್ಲಿ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೌಷ್ಟಿಕಾಂಶಗಳನ್ನು ಒಳಗೊಂಡ ಸಮತೋಲನ ಆಹಾರವನ್ನು ನಮ್ಮ ದೈನಂದಿನ ಬದುಕಿನ ಭಾಗವನ್ನಾಗಿಸಿ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳೋಣ. ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಮರೆಯದೆ ನಮ್ಮ ಮನೋದೈಹಿಕ ಸ್ವಾಸ್ಥ್ಯದ ಕುರಿತ ಕಾಳಜಿಯನ್ನು ಹೆಚ್ಚು ಕಾರ್ಯಗತಗೊಳಿಸೋಣ.
ಏನಂತೀರಾ ಸ್ನೇಹಿತರೆ?
ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!