ಗದಗ: ಮೇ 20 ಬಡ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರ ನಡೆಸುತ್ತಿರುವುದು ಸಾರ್ಥಕ ಸೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ ವಿ. ನಡುವಿನಮನಿ ಅಭಿಪ್ರಾಯ ಪಟ್ಟಿರುತ್ತಾರೆ.
ತಾಲೂಕಿನ ಬಳಗನೂರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 134 ನೇ ಹಾಗೂ ಡಾ.ಬಾಬು ಜಗಜೀವನ ರಾಮ್ ಅವರ 118ನೇ ಜನ್ಮ ಜಯಂತ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡ ಬಡ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಬಡ ವಿದ್ಯಾರ್ಥಿಗಳಿಗೆ ಉಚಿತ ಬೇಸಿಗೆ ಶಿಬಿರ ಹಮ್ಮಿಕೊಂಡು ಮಕ್ಕಳು ಶೈಕ್ಷಣಿಕವಾಗಿ ಸದೃಢವಾಗಲು ಸಹಕಾರಿಯಾಗುವ ಈ ಕಾರ್ಯ ಇತರರಿಗೆ ಮಾದರಿಯಾಗಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಂಡಂತಹ ಕನಸ್ಸು ಕೂಡಾ ಇದೇ ಆಗಿರುತ್ತದೆ, ಬಡವರು ನಿಮ್ಮ ವರ್ಗದ ಜನ ಶೈಕ್ಷಣಿಕವಾಗಿ ಮುಂದೆ ಬಂದರೆ ಮಾತ್ರ ಪ್ರಗತಿಯಾಗಲು ಸಾಧ್ಯ ಆ ನಿಟ್ಟಿನಲ್ಲಿ ಶೈಕ್ಷಣಿಕ ವಿಷಯಕ್ಕೆ ಸಂಬಂಧ ಪಟ್ಟಂತೆ ದಲಿತ ವಿದ್ಯಾರ್ಥಿ ಪರಿಷತ್‌ನ ಕಾರ್ಯ ಶ್ಲಾಘನೀಯವಾಗಿದ್ದು ಎಂದು ಹೇಳಿದರು.
ಸಮಾರಂಭದ ಪ್ರಾಸ್ತಾವಿಕವಾಗಿ ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕಾ ಉಪಾಧ್ಯಕ್ಷ ಮಂಜುನಾಥ ದೊಡ್ಡಮನಿ ಮಾತನಾಡಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಬೇಸಿಗೆ ಸಮಯದಲ್ಲಿ ಬಡ ಮಕ್ಕಳಿಗೆ ಸಾಕಷ್ಟು ಹಣ ನೀಡಿ ಟ್ಯೂಷನ್ ಪಡೆಯಲು ಕಷ್ಟವಾಗುತ್ತದೆ ಆದ ಕಾರಣ ಬಡವರಿಗೆ ಹೊರೆಯಾಗಬಾರದು ಎಂಬ ಉದ್ದೇಶದಿಂದ ಬಡವರ ಮಕ್ಕಳು ಕೂಡಾ ಗುಣ ಮಟ್ಟದ ಶಿಕ್ಷಣವನ್ನು ಪಡೆಯುವಲ್ಲಿ ಯಶಸ್ವಿಯಾಗಬೇಕೆಂದು ನುರಿತ ಶಿಕ್ಷಕರಿಂದ ಸತತ ಒಂದು ತಿಂಗಳುಗಳ ಕಾಲ ಉಚಿತ ಶಿಕ್ಷಣವನ್ನು ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಯಶಸ್ವಿಯಾಗಿ ನೆರವೇರಿಸಿಕೊಂಡು ಬಂದಿರುತ್ತೇವೆ. ಬೇಸಿಗೆ ಶಿಬಿರ ಯಶಸ್ವಿಯಾಗಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಗ್ರಾಮದ ಹಿರಿಯರಿಗೆ ಸ್ನೇಹ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಸೈನಿಕ ಉಮೇಶ ಕರಿಗಣ್ಣನವರ ಮಾತನಾಡಿ ನಮ್ಮ ಗ್ರಾಮದಲ್ಲಿ ಇಂತಹ ಉಚಿತ ಶಿಕ್ಷಣವನ್ನು ನೀಡಿ ಮಕ್ಕಳಿಗೆ ಶೈಕ್ಷಣಿಕವಾಗಿ ಶಕ್ತಿ ತುಂಬುವಂತಹ ಕಾರ್ಯ ಮಾಡುತ್ತಿರುವ ದಲಿತ ವಿದ್ಯಾರ್ಥಿ ಪರಿಷತ್ತಿನ ಸ್ನೇಹ ಬಳಗಕ್ಕೆ ಧನ್ಯವಾದಗಳು, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಅವರಂತಹ ಮಹನೀಯರ ಜನ್ಮ ಜಯಂತ್ಯೋತ್ಸವದ ನಿಮಿತ್ಯ ಇಂತಹ ಕಾರ್ಯವನ್ನು ನಮ್ಮ ಗ್ರಾಮದಲ್ಲಿ ಹಮ್ಮಿಕೊಂಡಿರುವದು ಹೆಮ್ಮೆಯ ವಿಷಯವೆಂದು ಹೇಳಿದರು.
ಸಂಗೀತ ಶಿಕ್ಷಕರು ಹಾಗೂ ಗ್ರಾಮದ ದಲಿತ ಮುಖಂಡರಾದ ಸೋಮಯ್ಯ ದೊಡ್ಡಮನಿ ಮಾತನಾಡಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣ ಪಡೆಯುವಲ್ಲಿ ಪಟ್ಟಂತಹ ಕಷ್ಟ ಅಷ್ಟಿಷ್ಟಲ್ಲ. ತಮ್ಮ ಜೀವನದುದ್ದಕ್ಕೂ ಸಾಕಷ್ಟು ಕಷ್ಟಪಟ್ಟು ಶೋಷಿತ ಸಮುದಾಯದ ಪ್ರಗತಿಗಾಗಿ ಶ್ರಮಿಸಿದ್ದಾರೆ. ಆದ ಕಾರಣ ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಬಡ ಮಕ್ಕಳಿಗೆ ಇಂತಹ ಉಚಿತ ಶಿಕ್ಷಣ ನೀಡುವುದರೊಂದಿಗೆ ಪ್ರೋತ್ಸಾಹಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡೋಣವೆಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಚಿತ ಬೇಸಿಗೆ ಶಿಬಿರದ ಗೌರವಾನ್ವಿತ ಶಿಕ್ಷಕರಾದ ಶ್ರೀ ಗಿರೀಶ ಚನ್ನಪ್ಪಗೌಡ್ರ.ಶ್ರೀ ಶರಣಪ್ಪ ಅಸೂಟಿ.ಕುಮಾರಿ ಗಾಯಿತ್ರಿ ವಗ್ಗನವರ.ಶ್ರೀ ಲೋಕೇಶ ಇಬ್ರಾಹಿಂಪೂರ ಶ್ರೀ ಗಂಗಾಧರ ಅವರು ವಹಿಸಿಕೊಂಡಿದ್ದರು.
ಸಮಾರಂಭದ ಅತಿಥಿಗಳಾಗಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಶಂಕರ ಹಡಗಲಿ (ಗಾಂಧಿ ವೇಷಧಾರಿ) ಹಾಗೂ ಸಮಾಜ ಚಿಂತಕರಾದ ತಿಪ್ಪಣ್ಣ ತಿರ್ಲಾಪೂರ, ಎಸ್‌ಡಿಎಂಸಿ ಅಧ್ಯಕ್ಷರಾದ ಮುತ್ತಪ್ಪ ಕಂಬಳಿ ದಲಿತ ಸಮುದಾಯದ ಹಿರಿಯರಾದ ಹುಲಗಪ್ಪ ದೊಡ್ಡಮನಿ, ಬಸವರಾಜ ಚಲವಾದಿ, ಹನಮಂತ ಚಲವಾದಿ, ರಾಜು ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.
ಸಮಾರಂಭವನ್ನು ಗ್ರಾಮದ ಯುವ ಮುಖಂಡ ಮಹಾಂತೇಶ ಅಡೂರ ನಿರೂಪಿಸಿ ವಂದಿಸಿದರು, ಸಮಾರಂಭದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪಾಲಕರು, ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು.
- ಕರುನಾಡ ಕಂದ
