ಬೆಂಗಳೂರು: ಕಳೆದ 36 ಗಂಟೆಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆ ಇಂದು ಮಂಗಳವಾರವೂ ಮುಂದುವರಿದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ಮೊಣಕಾಲು ಆಳದ ನೀರಿನಲ್ಲಿ ಜನರು ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದ್ದು, ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ.
ಮಳೆಗೆ ಸಂಬಂಧಿಸಿದ ಅನಾಹುತಗಳಿಗೆ ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಸಾಯಿ ಲೇಔಟ್ ದ್ವೀಪದಂತಿದೆ. ಇಲ್ಲಿನ ಮನೆಗಳ ನೆಲ ಮಹಡಿ ಅರ್ಧ ಮುಳುಗಿದ್ದು, ಜನರು ಮನೆಗಳಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.
ನಿನ್ನೆ ಸುಮಾರು 150 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಾಯಿ ಲೇಔಟ್‌ನಲ್ಲಿ ಜನರಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿತ್ತು.
ನಿನ್ನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಂಪನಿಯಲ್ಲಿ ಗುಡಿಸುವಾಗ ಶಶಿಕಲಾ (35) ಅವರ ಮೇಲೆ ಕಾಂಪೌಂಡ್ ಗೋಡೆ ಬಿದ್ದು ಮೃತಪಟ್ಟರು. ರಾಯಚೂರು ಮತ್ತು ಕಾರವಾರದಲ್ಲಿ ಸಿಡಿಲಿಗೆ ಇಬ್ಬರು ಮೃತಪಟ್ಟಿದ್ದಾರೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಸುಮಾರು 30 ಮಿ.ಮೀ ಮಳೆಯಾಗಿದೆ. ಮೊನ್ನೆ ಭಾನುವಾರ ಮತ್ತು ನಿನ್ನೆ ಸೋಮವಾರ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ನಗರದಲ್ಲಿ 105 ಮಿ.ಮೀ ಮಳೆ ದಾಖಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್
