ಬಾಗಲಕೋಟೆ/ ಹುನಗುಂದ: ತಾಲೂಕಿನ ಚಿತ್ತರಗಿ ಗ್ರಾಮದ ಲಿಂಗೈಕ್ಯ ವಿಜಯ ಮಹಾಂತೇಶ್ವರ ಮೂಲಮಠದಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿದ್ದ ಡಾ. ಮಹಾಂತಪ್ಪಗಳ್ಳವರ 7ನೇ ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು 19.05.2025 ರಂದು ಸೋಮವಾರದoದು ಶ್ರೀಮಠದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು ಯುವಕರು ಮಹಿಳೆಯರು ಪಾಲ್ಗೊಂಡಿದ್ದರು.
ನಾಡಿನ ಆರಾಧ್ಯ ದೈವ,ಬಸವ ತತ್ವದ ಹರಿಕಾರ,ಜಾತಿ ಮತ ಪಂಥಗಳ ಎಲ್ಲೆಯನ್ನು ಮೀರಿ ಬಸವ ತತ್ವದ ತಿರುಳನ್ನು ಜಗತ್ತಿಗೆ ಸಾರಿದ್ದಲ್ಲದೇ ನಾಡಿನ ಭಕ್ತರ ಮನದಲ್ಲಿ ನಿತ್ಯ ಹಚ್ಚ ಹಸಿರಾಗಿ ಉಳಿದ ಪರಮಪೂಜ್ಯ ಶ್ರೀ ವಿಜಯ ಮಹಾಂತ ಅಪ್ಪಗಳ ಪುಣ್ಯಸ್ಮರಣೆ ನಿಮಿತ್ಯ ಅವರ ಕಿರು ಪರಿಚಯ
ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಲು ಪ್ರೇರಕ ಶಕ್ತಿಯಾಗಿದ್ದವರು ಪರಮಪೂಜ್ಯ ಶ್ರೀಗಳು. ಜಗಜ್ಯೋತಿ ಬಸವಣ್ಣ 12ನೇ ಶತಮಾನದಲ್ಲಿಯೇ ಅನುಭವ ಮಂಟಪದಲ್ಲಿ ಎಲ್ಲ ಜಾತಿ, ವರ್ಗದ ಜನರನ್ನು ಒಂದುಗೂಡಿಸಿ ಸಮಾನತೆಯ ಮೂಲಕ ಸಾಮಾಜಿಕ ಪಿಡುಗುಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಿದ ಮಹಾನ್ ದಾರ್ಶನಿಕ, ಅವರ ತತ್ವ ಸಿದ್ಧಾಂತಗಳು 12ನೇ ಶತಮಾನದಲ್ಲಿಯೇ ಅನುಷ್ಠಾನಗೊಳಿಸಿದರೆ ಜಾತಿ, ಭೇದ, ಅಸಮಾನತೆ ಗಂಡು-ಹೆಣ್ಣು ಎಂಬ ತಾರತಮ್ಯವೇ ಇರುತ್ತಿರಲಿಲ್ಲ ಎಂದು ಅವರ ಆಶಯಗಳಂತೆ ಪೀಠಾಧ್ಯಕ್ಷರಾಗಿ ನಿತ್ಯ ಬದುಕಿನಲ್ಲಿ ಅನುಕರಿಸಿ, ಅನುಸರಿಸಿ ನಡೆದವರು ನಮ್ಮ ಪೂಜ್ಯರು.
ಚಿತ್ತರಗಿ ಇಲಕಲ್ಲ ಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಪೂಜ್ಯ ಶ್ರೀಗಳು ವ್ಯಸನ ಮುಕ್ತ ಸಮಾಜ ನಿರ್ಮಾಣದ ಹರಿಕಾರರಾಗಿದ್ದವರು. ಜನತೆ ದುಶ್ಚಟಗಳನ್ನು ದೂರ ಮಾಡಲು “ಮಹಾಂತ ಜೋಳಿಗೆ” ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿ ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಲು ಬಹುದೊಡ್ಡ ಕ್ರಾಂತಿಯನ್ನೇ ಮಾಡಿದವರು. ರಾಜ್ಯಘನ ಸರ್ಕಾರವು ಕೂಡಾ ಶ್ರೀಗಳ ಜನ್ಮದಿನದಂದು ವ್ಯಸನ ಮುಕ್ತ ದಿನಾಚರಣೆ ಸರ್ಕಾರದ ನೇತೃತ್ವದಲ್ಲಿಯೇ ನಡೆದು ಬರುತ್ತಿರುವುದು ಹೆಮ್ಮೆಯ ವಿಚಾರ.
ಬಸವ ತತ್ವ ಪ್ರತಿಪಾದಕರಾಗಿ ನಾಡಿಗೆ ಬೆಳಕು ನೀಡಿ ಪ್ರಜ್ವಲಿಸಿದ ಪರಮಪೂಜ್ಯ ಶ್ರೀಗಳಿಗೆ ನಾಡಿನ ಸಮಸ್ತ ಭಕ್ತರ ಪರವಾಗಿ ಭಕ್ತಿ ಪೂರ್ವಕ ಗೌರವ ನಮನಗಳು.
- ಕರುನಾಡ ಕಂದ



















