ಬೆಂಗಳೂರು : ಕರ್ನಾಟಕ ಪೊಲೀಸ್ ಇಲಾಖೆಯ ಹೊಸ ಮುಖ್ಯಸ್ಥರಾಗಿ 1993ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಎಂ. ಎ. ಸಲೀಂ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಬುಧವಾರ ಹೊರಡಿಸಿದ ಅಧಿಸೂಚನೆಯಲ್ಲಿ, ಸಲೀಂ ಅವರನ್ನು ಮುಂದಿನ ಆದೇಶದವರೆಗೆ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರ್ದೇಶಕರ (ಡಿಜಿ ಮತ್ತು ಐಜಿಪಿ) ಏಕಕಾಲಿಕ ಉಸ್ತುವಾರಿಯಾಗಿ ನೇಮಕ ಮಾಡಿದೆ. ರಾಜ್ಯದ ನೂತನ ಪೊಲೀಸ್ ಎಂ.ಎ. ಸಲೀಂ ಅವರು ಬುಧವಾರ ಸಂಜೆ ರಾಜ್ಯದ ಹೊಸ ಡಿಜಿ ಮತ್ತು ಐಜಿಪಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ಬೆಂಗಳೂರಿನ ಅಪರಾಧ ತನಿಖಾ ಇಲಾಖೆ (ಸಿಐಡಿ), ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ಡಿಜಿಪಿಯಾಗಿ ಮುಂದುವರಿಯಲಿದ್ದಾರೆ. ಮೇ 21ರಂದು ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿರುವ ಡಾ. ಅಲೋಕ್‌ಮೋಹನ್ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಜೂನ್ 25, 1966 ರಂದು ಜನಿಸಿದ ಸಲೀಂ ಅವರು ಉತ್ತರ ಬೆಂಗಳೂರಿನ ಚಿಕ್ಕಬಾಣಾವರ ಮೂಲದವರವಾಗಿದ್ದಾರೆ. ಅವರು ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಂಚಾರ ನಿರ್ವಹಣೆಯಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಿದ್ದಕ್ಕಾಗಿ ಗುರುತಿಸಲ್ಪಟ್ಟ ಅವರು, ಮೊದಲಿಗೆ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಟ್ರಾಫಿಕ್, ಈಸ್ಟ್), ನಂತರ ಅಡಿಷನಲ್ ಕಮಿಷನರ್ ಆಫ್ ಪೊಲೀಸ್ (ಟ್ರಾಫಿಕ್ ಮತ್ತು ಸೆಕ್ಯೂರಿಟಿ) ಮತ್ತು ಕೊನೆಯದಾಗಿ ಸ್ಪೆಷಲ್ ಕಮಿಷನರ್ ಆಫ್ ಪೊಲೀಸ್ (ಟ್ರಾಫಿಕ್) ಆಗಿ ಕಾರ್ಯನಿರ್ವಹಿಸಿದ್ದಾರೆ.
ಅವರು ಗುಲ್ಬರ್ಗಾದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಕುಶಾಲನಗರ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಸಾಗರ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಂಗಳೂರು ನಗರದಲ್ಲಿ ಅಪರಾಧ ವಿಭಾಗದಲ್ಲಿ ಸಹಾಯಕ ಪೊಲೀಸ್ ಮಹಾನಿರ್ದೇಶಕರಾಗಿ, ಮೈಸೂರು ನಗರದಲ್ಲಿ ಉಪ ಪೊಲೀಸ್ ಆಯುಕ್ತರಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್
