ಚಾಮರಾಜನಗರ/ ಗುಂಡ್ಲುಪೇಟೆ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಮೇ.26ರಂದು ನಡೆಯುವ ಭೀಮೋತ್ಸವ-2025ರ ಪೋಸ್ಟರ್ ಅನ್ನು ಶಾಸಕ ಎಚ್.ಎಂ.ಗಣೇಶಪ್ರಸಾದ್ ಹಾಗೂ ಮಾಜಿ ಶಾಸಕ ಸಿ.ಎಸ್. ನಿರಂಜನಕುಮಾರ್ ಬಿಡುಗಡೆಗೊಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಭೀಮೋತ್ಸವ-2025ರ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದ ಶಾಸಕ ಎಚ್.ಎಂ.ಗಣೇಶಪ್ರಸಾದ್, ಪಕ್ಷಾತೀತವಾಗಿ ಭೀಮೋತ್ಸವ ಆಚರಣೆ ಮಾಡುತ್ತಿರುವುದರಿಂದ ತಾಲೂಕಿನ ಹೆಚ್ಚಿನ ಮಂದಿ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು. ಅಂಬೇಡ್ಕರ್ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರು ಬರೆದ ಸಂವಿಧಾನವನ್ನು ಇಡೀ ದೇಶ ಒಪ್ಪಿದೆ. ಜೊತೆಗೆ ಸಂವಿಧಾನದ ಆಧಾರದ ಮೇಲೆ ಎಲ್ಲರೂ ಬದುಕು ನಡೆಸುತ್ತಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ ಹಾಕಿಕೊಟ್ಟ ಸಮಾನತೆ ಸಿದ್ದಾಂತವನ್ನು ಪ್ರಸ್ತುತ ಪಾಲನೆ ಮಾಡಲು ಅಂಬೇಡ್ಕರ್ ಸಂವಿಧಾನ ಕಾರಣವೇ ಎಂದು ತಿಳಿಸಿದರು.
ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜಕುಮಾರ್ ಮಾತನಾಡಿ, ಜಾತ್ಯಾತೀತ, ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳ ಜೊತೆಗೂಡಿ ಭೀಮೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ. ಈ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ಕೊಡಲಾಗುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬ ಭಾರತೀಯನು ನೆನಪು ಮಾಡಿಕೊಂಡು ಗೌರವ ಸಲ್ಲಿಸಬೇಕು. ದೇಶ ಅಭಿವೃದ್ಧಿಯತ್ತ ಇಂದು ವೇಗವಾಗಿ ಸಾಗಲು ಸಂವಿಧಾನ ಕಾರಣವಾಗಿದ್ದು, ಇಡೀ ವಿಶ್ವವೇ ಭಾರತದ ಸಂವಿಧಾನ ಮೆಚ್ಚಿದೆ. 29 ವರ್ಷದ ಹಿಂದೆ ನಡೆದಂತೆ ಆನೆ ಮೇಲೆ ಅಂಬೇಡ್ಕರ್ ಮೆರವಣಿಗೆ ಮಾಡಲು ಉದ್ದೇಶಿಸಲಾಗಿದ್ದು, ಎಲ್ಲಾ ಧರ್ಮ, ವರ್ಗ, ಜಾತಿ, ಪಕ್ಷದವರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು
ಆನೆಯ ಮೇಲೆ ಭೀಮನ ಮೆರವಣಿಗೆ: ಡಾ.ನವೀನ್ ಮೌರ್ಯ
ಗುಂಡ್ಲುಪೇಟೆ: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಮೇ 26ರಂದು ಹಮ್ಮಿಕೊಂಡಿರುವ ಭೀಮೋತ್ಸವ-2025ರಲ್ಲಿ ವಿಶೇಷವಾಗಿ ‘ಆನೆಯ ಮೇಲೆ ಭೀಮನ ಮೆರವಣಿಗೆ’ ನಡೆಯಲಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಆಚರಣಾ ಸಮಿತಿ ಉಸ್ತುವಾರಿ ಡಾ.ನವೀನ್ ಮೌರ್ಯ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಚ್.ಎಂ.ಗಣೇಶಪ್ರಸಾದ್ ವಹಿಸಲಿದ್ದು, ಸಂಸದ ಸುನೀಲ್ ಬೋಸ್ ಮೆರವಣಿಗೆ ಉದ್ಘಾಟನೆ ಮಾಡಲಿದ್ದಾರೆ. ಆನೆಗೆ ಪುಷ್ಪಾರ್ಚನೆಯನ್ನು ರಾಜವಂಶಸ್ಥರಾದ ಸಂಸದ ಯಧುವೀರ್ ಒಡೆಯರ್ ನೆರವೇರಿಸಲಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಜಿ ಶಾಸಕ ಸಿ.ಎಸ್. ನಿರಂಜನಕುಮಾರ್ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್, ಕಾಂಗ್ರೆಸ್ ಮುಖಂಡ ಧೀರಜ್ ಪ್ರಸಾದ್, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು.
ಮೇ.26ರಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಆನೆಯ ಮೇಲೆ ಭೀಮನ ಮೆರವಣಿಗೆಯು ಹೆದ್ದಾರಿ ಮೂಲಕ ಸಾಗಿ ಊಟಿ ಸರ್ಕಲ್ ಕೊನೆಗೊಳ್ಳಲಿದೆ. ವಿವಿಧ ಜಾನಪದ ಕಲಾತಂಡಗಳು, 100 ಮಂದಿ ಅಂಬೇಡ್ಕರ್ ವೇಷಧಾರಿಗಳು ಪಟ್ಟಣದ ಹಳೇ ಬಸ್ ನಿಲ್ದಾಣ, ಕೊಡಹಳ್ಳಿ ಸರ್ಕಲ್, ಐಬಿ ವೃತ್ತದ ಮೂಲಕ ಸಂಚರಿಸಲಿವೆ. ವಿವಿಧ ಪ್ರಗತಿಪರ ಸಂಘಟನೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು, ಮಹಿಳೆಯರು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಆಚರಣಾ ಸಮಿತಿ ಅಧ್ಯಕ್ಷ ಸುಭಾಷ್ ಮಾಡ್ರಹಳ್ಳಿ, ಕಾಂಗ್ರೆಸ್ ಮುಖಂಡ ಧೀರಜ್ ಪ್ರಸಾದ್, ರಾಘವಾಪುರ ಗ್ರಾಪಂ ಅಧ್ಯಕ್ಷ ಆರ್.ಡಿ.ಉಲ್ಲಾಸ್, ತಾಪಂ ಮಾಜಿ ಸದಸ್ಯ ಕಬ್ಬಹಳ್ಳಿ ರೇವಣ್ಣ, ಅಗತಗೌಡನಹಳ್ಳಿ ಬಸವರಾಜು, ಗ್ರಾಪಂ ಸದಸ್ಯ ನಾಗುಸ್ವಾಮಿ, ಕಿಲಗೆರೆ ಬಸವಣ್ಣ, ವಡ್ಡಗೆರೆ ಸುರೇಶ್, ಕಬ್ಬಹಳ್ಳಿ ನಂದೀಶ್, ಪಿಎಸಿಸಿ ಉಪಾಧ್ಯಕ್ಷ ಸದಾಶಿವಮೂರ್ತಿ, ಪಿಎಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಪ್ರಸಾದ್, ಗ್ರಾ. ಪಂ. ಅಧ್ಯಕ್ಷ ಬೆರಂಬಾಡಿ ಮಲ್ಲಿಕಾರ್ಜುನ, ವಕೀಲ ಹಂಗಳ ರಾಜೇಶ್, ಮಂಚಹಳ್ಳಿ ವಿರುಪಾಕ್ಷ, ಹೋರಾಟಗಾರ ಬ್ರಹ್ಮಾನಂದ ಸೇರಿದಂತೆ ಹಲವು ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಅಂಬೇಡ್ಕರ್ ಅನುಯಾಯಿಗಳು ಹಾಜರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್
