ಎಷ್ಟೋ ಬಾರಿ ಬದುಕಿನಲ್ಲಿ ನಾವು ಹೊಂದಿರುವ ಗುರಿಯ ಕುರಿತು ನಮಗೆ ಅರಿವೇ ಇರುವುದಿಲ್ಲ. ಅಥವಾ ಆ ಗುರಿಯನ್ನು ಹೊಂದಲು ಬೇಕಾದ ಅವಶ್ಯಕ ಮಾಹಿತಿ ಇರುವುದಿಲ್ಲ, ಇನ್ನೂ ಹೇಳಬೇಕೆಂದರೆ ನಮ್ಮ ಬದುಕಿಗೆ ಒಂದು ಗುರಿ ಇದ್ದೇ ಇರುತ್ತದೆ ಎಂಬ ಅರಿವು ಕೂಡಾ ಖುದ್ದು ನಮಗೆ ಇರುವುದಿಲ್ಲ.
ಸಂಬಂಧಿಕರಲ್ಲಿ ಯಾರೋ ಒಬ್ಬರು ಮೆಡಿಕಲ್ ಸೀಟ್ ಪಡೆದುಕೊಂಡರು ಎಂದರೆ ನಾವು ಕೂಡ ಮೆಡಿಕಲ್ ಮಾಡಬೇಕು ಮತ್ತಾರೋ ಐಐಟಿ ಮಾಡುತ್ತಿದ್ದಾರೆ ಎಂದರೆ ನಾನು ಕೂಡ ಐಐಟಿ ಮಾಡಲೇಬೇಕು ಎಂಬ ಆಶಯವನ್ನು ಹೊಂದುವುದು ತಪ್ಪಲ್ಲ ಆದರೆ ಅದು ನಮ್ಮ ನಿಜವಾದ ಗುರಿಯೇ ಎಂದು ಕೇಳಿದರೆ ಉತ್ತರಕ್ಕಾಗಿ ನಾವು ಬೇರೊಬ್ಬರ ಮುಖ ನೋಡಬಾರದು ಅಲ್ಲವೇ?
ಒಂದು ಕುರಿ ಬ್ಯಾ ಎಂದು ಕೂಗಿದಾಗ ಉಳಿದೆಲ್ಲಾ ಕುರಿಗಳು ಒಕ್ಕೊರಲಿನಿಂದ ಕೂಗುತ್ತವೆಯಲ್ಲವೇ.. ಹಾಗೆ ನಾವು ಕೂಡ ವರ್ತಿಸುತ್ತೇವೆ. ಬಹುಶಃ ನಮ್ಮನ್ನು ಕುರಿಗಳು ಎಂದು ಕರೆಯುವುದು ಇದೇ ಕಾರಣಕ್ಕೆ ಇರಬಹುದು.
ಅಸಲು ನಮ್ಮ ಬದುಕು ಹೇಗಿರಬೇಕು ನಾವು ಏನಾಗಬೇಕು ಎಂಬುದರ ಕುರಿತು ನಮಗೆ ಖಚಿತತೆ ಇರಬೇಕು. ಬದುಕಿನಲ್ಲಿ ನಾವು ಏನಾಗಬೇಕು ಎಂಬುದರ ಗುರಿ ಇಟ್ಟುಕೊಂಡಿದ್ದರೆ ಆ ಗುರಿಯನ್ನು ಬೆನ್ನತ್ತುವ ನಿಟ್ಟಿನಲ್ಲಿ ನಾವು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಯೋಜನೆ ಹಾಕಿಕೊಳ್ಳಬೇಕು. ನಂತರ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಾ ನಮ್ಮ ಪ್ರಯತ್ನದ ಒಂದೊಂದು ಮೆಟ್ಟಿಲನ್ನು ಹತ್ತುತ್ತಾ ಅಂತಿಮವಾಗಿ ನಮ್ಮ ಗುರಿಯೆಡೆ ಸಾಗಬೇಕು… ಆದರೆ ಎಲ್ಲರೂ ಅಷ್ಟೇ ಅದೃಷ್ಟವಂತರಾಗಿರುವುದಿಲ್ಲ ಬಹಳಷ್ಟು ಬಾರಿ ನಾವಂದುಕೊಂಡ ಗುರಿಯನ್ನು ತಲುಪುವ ನಿಟ್ಟಿನಲ್ಲಿ ನಮಗೆ ಹತ್ತು ಹಲವು ಅಡೆ-ತಡೆಗಳು ಬರಬಹುದು. ಆಗ ನಮ್ಮ ಗುರಿಯನ್ನು ತಲುಪುವ ನಿಟ್ಟಿನಲ್ಲಿ ನಾವು ಸೋತು ಹೋದೆವು ಎಂದು ನಿರಾಶರಾಗಿ ಕೈಕಟ್ಟಿ ಕುಳಿತುಕೊಳ್ಳದೆ ನಮ್ಮ ಪ್ಲಾನ್ ಬಿ ಯನ್ನು ನಾವು ಹೊಂದಿರಲೇಬೇಕು.
ಕೇವಲ ಒಂದೇ ಗುರಿಯ ಬೆನ್ನತ್ತಿಯೂ ನಮಗೆ ಯಶಸ್ಸು ದೊರೆಯದೆ ಹೋದಾಗ ಬೇಸರವಾಗುವುದು ಸಹಜ ಆದರೆ ವಿಫಲರಾದೆವು ಎಂಬ ಕಾರಣಕ್ಕೆ ಬದುಕೇ ಮುಗಿದು ಹೋಯಿತು ಎಂಬಂತೆ ಅನಾಹುತಕಾರಿ ನಿರ್ಧಾರಗಳನ್ನು ಕೈಗೊಳ್ಳಬಾರದು.
ಎಷ್ಟೋ ಬಾರಿ ನಾವು ಬೆಂಬತ್ತಿರುವ ಗುರಿಯ ಅವಶ್ಯಕತೆ ನಮಗೆ ಇದೆಯೇ? ನಮ್ಮ ಗುರಿಯ ಸಾಧಕ ಬಾಧಕಗಳೇನು? ಎಂಬುದರ ಕುರಿತು ನಾವು ಯೋಚಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ತಪ್ಪುಗಳನ್ನು ಒಂದು ಜೀವಮಾನ ಕಾಲದಲ್ಲಿ ನಾವುಗಳೇ ಮಾಡಲು ಸಾಧ್ಯವಿಲ್ಲ ಮತ್ತು ಆ ತಪ್ಪುಗಳನ್ನು ತಿದ್ದಿಕೊಳ್ಳಲು ಕೂಡ… ಅಂತೆಯೇ ಬೇರೆಯವರ ಬದುಕಿನಲ್ಲಿ ನಡೆದ ಘಟನೆಗಳನ್ನು ನಮ್ಮ ಬದುಕಿಗೆ ಪಾಠಗಳನ್ನಾಗಿ ನಾವು ಪಡೆದುಕೊಳ್ಳಬೇಕು.
ಜೀವನದಲ್ಲಿ ಯಶಸ್ಸನ್ನು ಕಂಡಿರುವ, ತಮ್ಮ ಗುರಿಯನ್ನು ಸಾಧಿಸಿರುವ ವ್ಯಕ್ತಿಗಳ ಜೀವನದ ಪುಟಗಳನ್ನು ಒಮ್ಮೆ ತಿರುಗಿ ನೋಡಿದಾಗ ನಮಗೆ ಈ ಕುರಿತು ಕೆಲ ವಿವರಗಳು ಖಂಡಿತವಾಗಿಯೂ ದೊರೆಯುತ್ತವೆ. ಅಂತಹದ್ದೇ ಪರೀಕ್ಷೆಗಳನ್ನು ಎದುರಿಸಿರುವ ಮತ್ತು ಸವಾಲುಗಳನ್ನು ಸ್ವೀಕರಿಸಿ ಯಶಸ್ಸಿನ ಮೆಟ್ಟಿಲನ್ನು ಏರಿರುವ ಯಶಸ್ವಿ ಉದ್ಯಮಿಯೊಬ್ಬರು ಹೀಗೆ ಹೇಳುತ್ತಾರೆ.
ಜಾಗತಿಕವಾಗಿ ಪ್ರಸಿದ್ಧಿಯನ್ನು ಹೊಂದಿರುವ ಕಾರು ತಯಾರಿಕಾ ಕಂಪನಿ ಟೊಯೋಟಾದ ಮಾಲೀಕರಾದ ಸಾಕಿಚಿ ಟೊಯೋಡಾ ತಮ್ಮ ಯಾವುದೇ ಕೆಲಸದಲ್ಲಿ ಸಂದಿಗ್ಧ ಪರಿಸ್ಥಿತಿ ಒದಗಿದಾಗ ತಮ್ಮ ಜ್ಞಾನದ ಬತ್ತಳಿಕೆಯಿಂದ ಅಸ್ತ್ರವನ್ನು ಹೊರ ತೆಗೆಯುತ್ತಿದ್ದರು…. ಅದುವೇ ಏಕೆ? ಎಂಬ ಪ್ರಶ್ನಾರ್ಥಕ ಪದ. ಕೇವಲ ಒಂದು ಬಾರಿ ಅಲ್ಲ ತಮ್ಮ ಮನಸ್ಸಿಗೆ ತೃಪ್ತಿಕರವಾದ ಉತ್ತರ ದೊರೆಯುವವರೆಗೆ ಈ ಏಕೆ? ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳುತ್ತಲೇ ಇರಬೇಕು ಎಂಬುದು ಅವರ ಮಾತಾಗಿತ್ತು.
ಉದಾಹರಣೆಗೆ… ನಿಮಗೆ ಒಂದು ಫರ್ ಕೋಟ್ ತೆಗೆದುಕೊಳ್ಳಬೇಕಾಗಿದೆ ಎಂದಿಟ್ಟುಕೊಳ್ಳಿ ಆಗ ಮೊದಲ ಬಾರಿಗೆ ನಾನು ಫರ್ ಕೋಟ್ ಏಕೆ ತೆಗೆದುಕೊಳ್ಳಬೇಕು ಎಂದು ನಮ್ಮ ಮನಸ್ಸನ್ನು ನಾವು ಪ್ರಶ್ನಿಸಿದಾಗ ದೊರೆಯುವ ಉತ್ತರ ಜನರ ಮೇಲೆ ಪ್ರಭಾವ ಬೀರಲು ಎಂದು ಬರುತ್ತದೆ.
ಮತ್ತೆ ಎರಡನೆಯ ಬಾರಿಗೆ ಜನರ ಮೇಲೆ ಏಕೆ ಪ್ರಭಾವ ಬೀರಬೇಕು? ಎಂದು ಪ್ರಶ್ನಿಸಿದಾಗ ಜನರು ನನ್ನನ್ನು ಗಮನಿಸಲಿ ಎಂದು ನಾನು ಫರ್ ಕೋಟನ್ನು ಧರಿಸಿ ಅವರ ಮೇಲೆ ಪ್ರಭಾವ ಬೀರಿ ನನ್ನೆಡೆ ಗಮನ ಸೆಳೆಯಲು ಇಚ್ಚಿಸುತ್ತೇನೆ ಎಂಬ ಉತ್ತರ ದೊರೆಯುತ್ತದೆ.
ಮೂರನೆಯ ಬಾರಿಗೆ ಜನರ ಗಮನ ನಿನ್ನ ಮೇಲೆ ಏಕೆ ಇರಬೇಕು ಎಂದು ಪ್ರಶ್ನಿಸಿದಾಗ ಹಾಗೆ ಜನರ ಗಮನ ನನ್ನೆಡೆ ಇರದಿದ್ದರೆ ನಾನು ಅಸುರಕ್ಷಿತತೆ ಅಥವಾ ಕೀಳರಿಮೆಯಿಂದ ಬಳಲುತ್ತೇನೆ ಎಂಬ ಉತ್ತರ ದೊರೆಯಬಹುದು.
ಆಗಲೂ ಕೂಡಾ ಸಮಾಧಾನ ದೊರೆಯದೆ ಏಕೆ ನೀನು ಅಸುರಕ್ಷತಾ ಭಾವನೆಯಿಂದ ಬಳಲುತ್ತಿರುವೆ ಎಂದು ನಾಲ್ಕನೇ ಬಾರಿ ಕೇಳಿದಾಗ ನನಗನಿಸುತ್ತದೆ ನಾನು ನನ್ನದೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದೇನೆ… ನಾನು ಅಂತರಂಗಿಕವಾಗಿ ಬೆಳೆಯುತ್ತಿಲ್ಲ. ಬದುಕಿನಲ್ಲಿ ನನಗೇನು ಬೇಕು ಎಂಬ ನಿಶ್ಚಿತತೆ ನನಗೆ ದೊರೆಯುತ್ತಿಲ್ಲ ಎಂದು ಮನಸ್ಸು ಹೇಳಿತು.
ಇದೀಗ ಕೊನೆಯದಾಗಿ ಬದುಕಿನಲ್ಲಿ ನಿಶ್ಚಿತತೆ ಏಕಿಲ್ಲ?
ಎಂಬುದಕ್ಕೆ ಉತ್ತರವಾಗಿ ನನಗೆ ನನ್ನ ಜೀವನವೇ ಉದ್ದೇಶರಹಿತವಾಗಿದೆ ಎಂಬುದರ ಅರಿವಾಯಿತು ಫರ್ ಕೋಟ ಎಂಬುದು ನನಗೆ ಬೆಚ್ಚಗಿನ ಅನುಭವ ನೀಡುವ ವಸ್ತುವಾಗಿರದೆ ನನ್ನ ಅಸ್ತಿತ್ವ ರಹಿತತೆಯನ್ನು ಮುಚ್ಚಿ ಹಾಕುವ ವಿಷಯವಾಗಿತ್ತು ಎಂಬುದು ಅರಿವಿಗೆ ಬಂದಾಗ ಅದುವೇ ಅಂತಿಮ ಸತ್ಯ ಮತ್ತು ಅದುವೇ ನಿಜವಾಗಿತ್ತು.
ಯಾವುದನ್ನು ಮುಚ್ಚಿಡುವ ಸಲುವಾಗಿ ನೀನು ನಿನ್ನೊಳಗೆ ಕಣ್ಣಾ ಮುಚ್ಚಾಲೆ ಆಟವಾಡುತ್ತಿದ್ದೆಯೋ ಅದು ಅಂತಿಮವಾಗಿ ನಿನ್ನರಿವಿಗೆ ಬಂದಾಗ ನಿನ್ನ ಮನಸ್ಥಿತಿ ಸುಧಾರಿಸುತ್ತದೆ.
ಈ ರೀತಿ ನಮ್ಮಲ್ಲಿ ನಾವು ಏಕೆ ಎಂದು ಪುನರಪಿ ಪ್ರಶ್ನಿಸುತ್ತಾ ಹೋದಾಗ ದೊರೆಯುವ ಉತ್ತರ ನಮ್ಮ ಮನಸ್ಥಿತಿಯನ್ನು ಬಗೆದು ಹಾಕಿ ಅಂತಿಮ ಸತ್ಯವನ್ನು ನಮಗೆ ನೀಡುತ್ತದೆ ಎಂಬ ವಿಷಯವನ್ನು ನಮಗೆ ಟೊಯೋಡಾ ಅವರು ತಿಳಿಸಿಕೊಟ್ಟರು.
ಜಗತ್ತಿಗೆ ಅತ್ತ್ಯುತ್ತಮ ಕಾರುಗಳನ್ನು ಉಡುಗೊರೆಯಾಗಿ ಕೊಟ್ಟದ್ದಕ್ಕಿಂತ ಈ ಗಹನ ವಿಚಾರವನ್ನು ಅವರು ನಮಗೆ ಕೊಟ್ಟದ್ದೇ ಬಹುದೊಡ್ಡ ಕೊಡುಗೆಯಾಗಿದೆ.
ಆದ್ದರಿಂದ ಮುಂದಿನ ಬಾರಿ ನೀವು ಯಾವುದಾದರು ವಿಷಯದಲ್ಲಿ ಸಿಲುಕಿಕೊಂಡಿದ್ದೇನೆ ಎಂದು ತೋರಿದಾಗ
ಏಕೆ ಎಂದು ಮತ್ತೆ ಮತ್ತೆ ಪ್ರಶ್ನಿಸಿಕೊಂಡು ನಿಮ್ಮೊಳಗಿನ ನಿಮ್ಮನ್ನು ನೀವು ಅರಿತುಕೊಳ್ಳಿ.
- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ
