ಬಳ್ಳಾರಿ: ರಾಜ್ಯ ಸರ್ಕಾರವು 2025–26ನೇ ಶೈಕ್ಷಣಿಕ ಸಾಲಿನಲ್ಲಿ ಮೇ 29ರಿಂದ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದ್ದು, ಅದಕ್ಕೆ ಪೂರಕವಾಗಿ ಭರದ ಸಿದ್ಧತೆಗಳು ಶುರುವಾಗಿವೆ.
ಕರ್ನಾಟಕ ಪಠ್ಯಪುಸ್ತಕ ಸಂಘವು ಬಳ್ಳಾರಿ ಜಿಲ್ಲೆಗೆ ಈಗಾಗಲೇ ಶೇ 57.51ರಷ್ಟು ಪಠ್ಯ ಪುಸ್ತಕಗಳನ್ನು ಪೂರೈಸಿದೆ. ಇದರಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಪಠ್ಯ ಪುಸ್ತಕಗಳು ಸೇರಿವೆ. ಇನ್ನೂ ಎರಡ್ಮೂರು ದಿನಗಳಲ್ಲಿ ಉಳಿದ ಶೇ. 42ರಷ್ಟು ಪುಸ್ತಕಗಳೂ ಜಿಲ್ಲೆಗೆ ಬಂದು ಸೇರಲಿವೆ.
ಲಭ್ಯ ಪುಸ್ತಕಗಳನ್ನು ಈಗಾಗಲೇ ತಾಲ್ಲೂಕುವಾರು ಕಳುಹಿಸಲಾಗಿದೆ. ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪುಸ್ತಕ ವಿತರಣೆ ಜವಾಬ್ದಾರಿ ವಹಿಸಲಾಗಿದೆ. ಮೇ 29ರಂದು ವಿತರಣಾ ಪ್ರಕ್ರಿಯೆಯನ್ನು ನಡೆಸಲು ನಿರ್ದೇಶನ ನೀಡಲಾಗಿದೆ. ವಿಷಯವಾರು ಪುಸ್ತಗಳನ್ನು ಹಂಚಲು ತಿಳಿಸಲಾಗಿದೆ ಎಂದು ಡಿಡಿಪಿಐ ಉಮಾದೇವಿ ತಿಳಿಸಿದ್ದಾರೆ.
ಮೇ 29ರಂದು ರಾಜ್ಯದಾದ್ಯಂತ ಶಾಲಾ ಪ್ರಾರಂಭೋತ್ಸವ ಆಚರಿಸುತ್ತಿರುವ ಕಾರಣ ಅದೇ ದಿನ ಎಲ್ಲಾ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ತಲುಪಿಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಪುಸ್ತಕಗಳನ್ನು ಅತ್ಯಂತ ಜೋಪಾನವಾಗಿ ನೊಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ)ಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಬಿ. ಉಮಾದೇವಿ ಸಲಹೆ ನೀಡಿದ್ದಾರೆ.
ಇದರ ಜತೆಗೆ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಮವಸ್ತ್ರಗಳ ಪೂರೈಕೆಯನ್ನು ಸರ್ಕಾರ ಆರಂಭಿಸಿದೆ. ಈಗಾಗಲೇ ಕೆಲವು ಲೋಡ್‌ಗಳು ಬಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಪಠ್ಯ ಪುಸ್ತಕ ಹಂಚಿಕೆ:
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪಠ್ಯ ಪುಸ್ತಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಶಾಲೆ ಆರಂಭವಾಗುವ ಮೇ 29ರೊಳಗೆ ಪುಸ್ತಕ ವಿತರಣೆ ಮುಗಿದಿರಬೇಕು ಎಂದು ಬಿಇಒಗಳಿಗೆ ಸೂಚನೆ ನೀಡಿರುವುದು ಗೊತ್ತಾಗಿದೆ.
ಖಾಸಗಿಯವರಿಗೆ ಶುಲ್ಕ:
ಪಠ್ಯ ಪುಸ್ತಕಗಳನ್ನು ಸರ್ಕಾರದ ಎಲ್ಲಾ ಶಾಲೆಗಳಿಗೆ ತಲುಪಿಸಲಾಗುತ್ತದೆ. ಆಸಕ್ತ ಅನುದಾನ ರಹಿತ ಖಾಸಗಿ ಸಂಸ್ಥೆಗಳವರು ಶೇ. 100ರ ಶುಲ್ಕ ಭರಿಸಿ, ಬೇಡಿಕೆ ಸಲ್ಲಿಸಿದರೆ ಅವರಿಗೂ ಪುಸ್ತಕಗಳನ್ನು ಪೂರೈಸಲಾಗುತ್ತದೆ. ಆಯಾ ಬ್ಲಾಕ್ ಹಂತದ ನೋಡಲ್ ಅಧಿಕಾರಿಗಳ ಬಳಿ ಖಾಸಗಿ ಶಾಲೆಗಳವರು ಖರೀದಿಸಬಹುದು. ರಾಜ್ಯ ಸರ್ಕಾರವು ಇದಕ್ಕಾಗಿ ಶುಲ್ಕ ನಿಗದಿಪಡಿಸಿದೆ. ಅದನ್ನು ಆನ್‌ಲೈನ್‌ನಲ್ಲಿಯೇ ಭರಿಸಿ ಪಠ್ಯ ಪುಸ್ತಕಗಳನ್ನು ಪಡೆಯಲು ಅನುಕೂಲ ಮಾಡಿಕೊಡಲಾಗಿದೆ.
ಅನುದಾನ ರಹಿತ ಶಾಲೆಗಳು ಈಗಾಗಲೇ ಶೇ. 65ರಷ್ಟು ಪುಸ್ತಗಳನ್ನು ಖರೀದಿಸಿವೆ ಎಂದು ಗೊತ್ತಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್
