
ಬಳ್ಳಾರಿ / ಕಂಪ್ಲಿ : ತಾಯಿ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನ ಎಂಬ ಕೇಂದ್ರ ಸರ್ಕಾರದ ವಿಶಿಷ್ಟ ಕಾರ್ಯಕ್ರಮಕ್ಕೆ ಪುರಸಬೆ ಅಧ್ಯಕ್ಷ ಬಿ. ಪ್ರಸಾದ ಶುಕ್ರವಾರ ನಗರ ಭಾಗದ ಸೋಮಪ್ಪ ಕೆರೆ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿ ಮರಗಳನ್ನು ನೆಡುವುದು ಹಾಗೂ ಭೂಮಿಯ ಅವನತಿಯನ್ನು ತಡೆಯುವುದು ಅಭಿಯಾನದ ಮೂಲ ಉದ್ದೇಶವಾಗಿದ್ದು ಗಿಡಗಳನ್ನು ಹಾಗೂ ಸಸಿಗಳನ್ನು ನಾಟಿ ಮಾಡುವುದು ಅಭಿಯಾನದ ಮೂಲ ಉದ್ದೇಶವಾಗಿದೆ ಸಾರ್ವಜನಿಕರು ಗಿಡ ಮರಗಳನ್ನು ಬೆಳೆಸಬೇಕು ಎಂದು ತಿಳಿಸಿದರು.
ಪುರಸಭೆಯ ವ್ಯವಸ್ಥಾಪಕ ಚಿತ್ರಗಾರ ಪ್ರಶಾಂತ ಮಾತನಾಡಿ ಇಂದಿನ ಜಾಗತೀಕರಣ ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರೀಕರಣ, ಕೈಗಾರಿಕೀಕರಣ, ಹೆದ್ದಾರಿಗಳು ಮತ್ತಿತರ ನಾನಾ ಯೋಜನೆಗಳಿಂದಾಗಿ ಕೋಟ್ಯಾಂತರ ಮರಗಿಡಗಳು ತಮಗರಿವಿಲ್ಲದೆಯೇ ನಾಶವಾಗುತ್ತಿವೆ. ಅದೂ ಅಲ್ಲದೆ ಮನುಷ್ಯನ ದುರಾಸೆಯಿಂದಾಗಿ ಮರ ಗಿಡಗಳನ್ನು ನಾಶ ಮಾಡುತ್ತಲೇ ಬರುತ್ತಿದ್ದೇವೆ. ಹೀಗಾಗಿ ಪರಿಸರದ ಮರು ಸೃಷ್ಟಿ ಅತ್ಯವಸರ ಎಂದು ತಿಳಿಸಿದರು.
ಪುರಸಭೆಯ ಪರಿಸರ ಅಭಿಯಂತರಾದ ಶರಣಪ್ಪ ಮಾತನಾಡಿ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ( ಏಕ್ ಪೇಡ್ ಮಾ ಕೆ ನಾಮ್) ಕಾರ್ಯಕ್ರಮದ ಅಡಿಯಲ್ಲಿ ಮರ ಗಿಡಗಳನ್ನು ನೆಡುವ ಮೂಲಕ ಬರ ನಿರ್ಮೂಲನೆ ಹಾಗೂ ಭೂಮಿ ಮರುಭೂಮಿಯಾಗುವುದನ್ನು ತಡೆಯುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಒಗ್ಗೂಡಿಸುವಿಕೆಯೊಂದಿಗೆ ಅಭಿಯಾನದ ಅಂಗವಾಗಿ ಪುರಸಭೆಯು ಅರಣ್ಯೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ನಂತರ ಮಹಿಳಾ ಸ್ವಸಹಾಯ ಉಳಿತಾಯ ಸಂಘದ ಸದಸ್ಯರಿಗೆ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ (ಏಕ್ ಪೇಡ್ ಮಾ ಕೆ ನಾಮ್ ) ಕಿಟ್ ನ್ನು ವಿತರಿಸಲಾಯಿತು.
ಪುರಸಭೆ ಸದಸ್ಯರಾದ ಸಿ. ಆರ್. ಹನುಮಂತ, ವಿ. ಎಲ್. ಬಾಬು, ಜನಪ್ರತಿನಿಧಿಗಳಾದ ಜಿ. ಸುಧಾಕರ, ರಾಘವೇಂದ್ರ, ನಾಗರಾಜ, ವಸಂತಮ್ಮ ಹಾಗೂ ಮಹಿಳಾ ಸ್ವಸಹಾಯ ಉಳಿತಾಯ ಸಂಘದ ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್
