ಬೆಂಗಳೂರು ದಕ್ಷಿಣ ಜಿಲ್ಲೆ / ರಾಮನಗರ : ಶೋಲೆ ಸಿನಿಮಾದ ಕಥಾವಸ್ತು ರಾಮಗಢ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ತೆರೆದುಕೊಂಡಿದ್ದರೂ, ಅದರ ನಿಜವಾದ ಮ್ಯಾಜಿಕ್ ನಡೆದಿದ್ದೇ ರಾಮನಗರದಲ್ಲಿ. ರಾಮನಗರದ ರಮಣೀಯ ಸೌಂದರ್ಯವನ್ನು ಶೋಲೆ ಸಿನಿಮಾದಲ್ಲಿ ಪ್ರತಿಬಿಂಬಿಸಲಾಗಿತ್ತು. ಅಂಥ ರಾಮನಗರ ಇನ್ನಿಲ್ಲವಾಗುತ್ತದೆ! ಅಂದರೆ ಹೆಸರು ಬದಲಾವಣೆಯಾಗಲಿದೆ. ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡುವ ಪ್ರಸ್ತಾವನೆಗೆ ಕರ್ನಾಟಕ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ, ರಾಮನಗರದಲ್ಲಿ ಬೋರ್ಡ್ ಬದಲಾಯಿಸುವ ಪ್ರಕ್ರಿಯೆ ಕೂಡಾ ಆರಂಭಗೊಂಡಿದೆ. ರಾಮನಗರ ಎಂದು ಇರುವಲ್ಲಿ ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾಯಿಸಿ ನಾಮಫಲಕಗಳನ್ನು ಹಾಕಲಾಗುತ್ತಿದೆ.
ರಾಮನಗರ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿತ್ತು ನಂತರ ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 2007ರ ಆಗಸ್ಟ್ 23 ರಂದು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಗಿತ್ತು. ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇದೀಗ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಬಲ ಆಕಾಂಕ್ಷೆಯ ಮೇರೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್
