ಗದಗ : ಗದಗ ತಾಲ್ಲೂಕಿನ ಬಳಗಾನೂರ ರಸ್ತೆ, ಕದಡಿ, ಗಾವರವಾಡ, ಹುಯಿಳಗೋಳ ಗ್ರಾಮಗಳದ ಬಳಿಯ ಹಳ್ಳದಿಂದ ಅಕ್ರಮವಾಗಿ ಹಳ್ಳದ ಮರಳನ್ನು ಎಗ್ಗಿಲ್ಲದೇ ಸಾಗಿಸುತ್ತಿದ್ದು, ಮರಳು ಮಾರಾಟದ ದಂಧೆ ಹೆಚ್ಚಿದೆ.
ಗಾವರವಾಡ ಹಾಗೂ ಕದಡಿ ಗ್ರಾಮಕ್ಕೆ ಹತ್ತಿರದಲ್ಲಿ ಹರಿಯುತ್ತಿರುವ ದೊಡ್ಡದಾದ ಹಳ್ಳದ ದಡದಲ್ಲಿ ಗುಣಮಟ್ಟದ ಮರಳು ಲಭ್ಯವಿದೆ. ಇಲ್ಲಿಂದ ಪ್ರತಿ ದಿನ ಹತ್ತಾರು ಟ್ರ್ಯಾಕ್ಟರ್‌ನಷ್ಟು ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ, ಮರಳು ಅಕ್ರಮಕ್ಕೆ ಕೆಲ ಬಾರಿ ನಿಯಂತ್ರಣ ಹಾಕಿದರೂ ಅದು ಕೆಲ ದಿನಗಳಿಗೆ ಸೀಮಿತ ಎನ್ನುವಂತಾಗಿದೆ. ಹಲವು ಬಾರಿ ನಡೆದ ದಾಳಿಯ ಬಳಿಕವೂ ಮರಳು ಅಕ್ರಮ ಸಾಗಣೆ ಮಿತಿ ಮೀರಿದೆ.
ತಲೆ ಎತ್ತಿದ ತಗ್ಗುಗಳು:
ಮರಳು ಸಾಗಣೆಗಾಗಿ ಎಲ್ಲೆಂದರಲ್ಲಿ ಹಳ್ಳವನ್ನು ಅಗೆದಿರುವುದರಿಂದ ಹಳ್ಳದುದ್ದಕ್ಕೂ ತಗ್ಗುಗಳಾಗಿವೆ, ಹಳ್ಳದ ದಡದಲ್ಲಿಯೂ ಮರಳನ್ನು ತೆಗೆಯುತ್ತಿರುವುದರಿಂದ ಹಳ್ಳ ಕುಸಿಯುತ್ತಿದೆ, ಹಳ್ಳದಲ್ಲಿ ತಗ್ಗುಗಳ ನಿರ್ಮಾಣದಿಂದ ತೊಂದರೆಯಾಗುತ್ತದೆ ಎಂದು ಹೇಳಿದರೂ ನಮಗೆ ಇಲಾಖೆಯಿಂದ ಪರವಾನಿಗೆ ಇದೆ ಎಂದು ಉಡಾಫೆ ಉತ್ತರ ನೀಡುತ್ತಿದ್ದು ಯಾರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ದಂಧೆಕೋರರು ಮರಳನ್ನು ಗದಗ ತಾಲ್ಲೂಕಿನ ಇತರೆಡೆಗೆ ಸಾಗಣೆ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಯ ಅಧಿಕಾರಿಗಳು ಕೆಲವು ಬಾರಿ ತಿಳಿವಳಿಕೆ ಹೇಳುವ ಕೆಲಸ ಮಾಡಿದ್ದರು ಯಾರ ಭಯವು ಇಲ್ಲದ ಹಾಗೆ ಮರಳು ಸಾಗಾಟ ಮಾಡುತ್ತಿದ್ದಾರೆ. ಹಳ್ಳದುದ್ದಕ್ಕೂ ಮರಳಿಗಾಗಿ ತಗ್ಗುಗಳನ್ನು ತೋಡುವುದರಿಂದ ಈಗ ನೀರು ಬಂದಿರುವುದರಿಂದ ಜನ ಸಮಸ್ಯೆ ಎದುರಿಸಬೇಕಿದೆ, ಗೊತ್ತಾಗದೆ ಗುಂಡಿಗೆ ಸಿಲುಕಿದವರು, ಪಾರಾಗದೇ ನೀರು ಪಾಲಾದ ನಿದರ್ಶನಗಳಿವೆ. ಮನಬಂದಂತೆ ಮರಳು ಬಗೆಯುವುದಕ್ಕೆ ಕಡಿವಾಣ ಹಾಕಲು ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದಿದ್ದರೆ ಭೀಮ್ ಆರ್ಮಿ ಭಾರತ್ ಏಕತಾ ಮಿಶನ್ ಉಗ್ರವಾದ ಹೋರಾಟದ ಎಚ್ಚರಿಕೆ ನೀಡುತ್ತದೆ ಎಂದು ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷರಾದ ಗೋಪಾಲ ಕೋಣಿಮನಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
- ಕರುನಾಡ ಕಂದ
