ಕೊಪ್ಪಳ/ ಯಲಬುರ್ಗಾ : ತಾಲೂಕಿನ ಸುಕ್ಷೇತ್ರ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ಮಠದಲ್ಲಿ ಚತುರ್ದಶಿ ಅಂಗವಾಗಿ ಜು.೨೪ ರಂದು ಜರುಗಿರುವ ೩೭೫ ನೇ ಶಿವಾನುಭವಗೋಷ್ಠಿಯಲ್ಲಿ ಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರ ಹಾಗೂ ಶರಣಯ್ಯ ಹಿರೇಮಠ ಸಾನಿದ್ಯ ವಹಿಸಿದ್ದರು.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ
ಎಂಬ ಚಿಂತನ ವಿಷಯವಾಗಿ ಅತಿಥಿಯಾಗಿ ತುಮ್ಮರಗುದ್ದಿಯ ರಾಜಶೇಖರ ಹಿರೇಮಠ ಅವರು ಮಾತನಾಡಿ ಜ್ಞಾನವಂತರಾದರೆ ನಮಗೆ ಬರುವ ಜಗಳದಿಂದ ಪಾರಾಗುವುದಕ್ಕೆ ಸಾಧ್ಯವಾಗಿ ನೆಮ್ಮದಿ ಕಾಣಲು ಸಾದ್ಯ ಎಂದರು. ಜ್ಞಾನ ಸಂಪಾದನೆ ಯಾಗಬೇಕಾದರೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಆಗ ಜಟಿಲ ಸಮಸ್ಯೆಗಳನ್ನು ಎದುರಿಸಿ ಜಯಸಾಧಿಸಲು ಸಾದ್ಯ ಎಂದು ಮುಖಂಡ ಭೀಮಣ್ಣ ಹವಳಿ ಮಾತನಾಡಿದರು. ಯಾರೂ ಕದಿಯಲಾರದ ಸಂಪತ್ತು ಜ್ಞಾನ, ಜಗತ್ತನ್ನು ಆಳುವ ತಾಕತ್ತು ಬರಬೇಕಾದರೆ ಅದು ಜ್ಞಾನದಿಂದ ಮಾತ್ರ ಸಾದ್ಯ ಎಂದು ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ, ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ೨೦೨೪ – ೨೫ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ದ್ವೀತಿಯ ವರ್ಷದಲ್ಲಿ ೮೦℅ ಪ್ರತಿಶತ ಹೆಚ್ಚಿಗೆ ಪಡೆದಿರುವ ವಿದ್ಯಾರ್ಥಿಗಳಿಗೆ ಶಿವಾನುಭವ ಸೇವಾ ಸಮಿತಿಯಿಂದ ಪ್ರತಿಭಾ ಪುರಸ್ಕಾರವನ್ನು ಮುಂದಿನ ೩೭೬ನೇ ಶಿವಾನುಭವ ಗೋಷ್ಠಿಯಲ್ಲಿ ನೀಡಿ ಸನ್ಮಾನಿಸಲಾಗುವುದು, ದಮ್ಮೂರ ಗ್ರಾಮದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ಆಧಾರ ಕಾರ್ಡ, ತಮ್ಮ ಭಾವಚಿತ್ರವನ್ನು ಶ್ರೀಮಠದ ಒಡೆಯರಲ್ಲಿ ಜುಲೈ ೧೨ ರ ಒಳಗಾಗಿ ಸಲ್ಲಿಸಿ ಇದರ ಸದುಪಯೋಗವನ್ನು ಪಡೆಯಬೇಕು ಎಂದರು. ಈ ವೇಳೆ ಮಂಗಳೇಶ ಶ್ಯಾಗೋಟಿ ಹಾಗೂ ಸಹ ಕಲಾವಿದರಾದ ಡಿ. ಮೌನೇಶ ಬಡಿಗೇರ, ನೀಲಕಂಠಪ್ಪ ರೋಡ್ಡರ, ಕಳಕಪ್ಪ ಹಡಪದ, ಯಮನೂರಪ್ಪ ಹಳ್ಳಿಕೇರಿ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಹಿರಿಯರಾದ ಈರಪ್ಪ ರಾವಣಿಕಿ, ಗಣೇಶ ನಿಡಗುಂದಿ, ಬಾಲಪ್ಪ ಜರಕುಂಟಿ, ಯಮನೂರಪ್ಪ ಮಡಿವಾಳರ, ಯಲ್ಲಪ್ಪ ಸಣ್ಣ ದ್ಯಾವಣ್ಣವರ, ಶರಣಗೌಡ ದ್ಯಾಮನಗೌಡ್ರ, ಭೀಮಪ್ಪ ಚಿಕ್ಕಗೌಡ್ರ, ಕೊಟ್ರಪ್ಪಗೌಡ್ರ ಮಾಲಿಗೌಡ್ರ, ಬಸವರಾಜ ಮೇಲಸಕ್ರಿ ಸೇರಿದಂತೆ ಇತರರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನ ಸಂತರ್ಪಣೆ ಜರುಗಿತು.
- ಕರುನಾಡ ಕಂದ




















