ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ಘೋಷಿಸಿದ ಮಾತ್ರಕ್ಕೆ ಇಲ್ಲಿ ಬರುವ ಊರುಗಳ ಅಭಿವೃದ್ಧಿಯಾಗುವುದೇ? ಇದು ಮೌಢ್ಯತೆ ಅಲ್ಲದೆ ಮತ್ತೇನು? ಈ ಭ್ರಷ್ಟ ರಾಜಕೀಯದಿಂದ ನಾವು ಆಧುನಿಕತೆಯ ಮೌಢ್ಯರಾಗುತ್ತಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಬರುವ ಅದೆಷ್ಟೋ ಊರುಗಳಿಗೆ ನಡೆದಾಡಲು ರಸ್ತೆಯೇ ಇಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೀಗಿರುವಾಗ ಹೇಗೆ ಊರು ಅಭಿವೃದ್ಧಿಯಾಗುತ್ತದೆ? ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕುಗಳಲ್ಲಿ ಸುವ್ಯವಸ್ಥಿತ ಗ್ರಂಥಾಲಯಗಳಿಲ್ಲ. ಹೇಳಬೇಕೆಂದರೆ ತಾಲ್ಲೂಕುಗಳಲ್ಲಿ ಸರಿಯಾದ ರಸ್ತೆಯ ಸೌಲಭ್ಯವಿಲ್ಲ. ಹೀಗಿರುವಾಗ ಹೆಸರು ಬದಲಿಸಿದ ಮಾತ್ರಕ್ಕೆ ಊರು ಅಭಿವೃದ್ಧಿಯಾಗುತ್ತದೆಯಾ? ಅಷ್ಟಕ್ಕೂ ಬೆಂಗಳೂರು ಉತ್ತರ ಎನಿಸಿಕೊಳ್ಳಲು ಆ ಪ್ರದೇಶದ ಭಾಗಗಳಲ್ಲಿ ಏನು ಅಭಿವೃದ್ಧಿಯಾಗಿದೆ ಎಂದು ಈ ಹೆಸರಿಟ್ಟರು? ಇರುವ ಶಾಲೆಗಳಿಗೆ ಸಮರ್ಪಕ ನಿರ್ವಹಣೆ ಇಲ್ಲದೆ ಶಿಕ್ಷಣದ ಗುಣಮಟ್ಟ ಕುಸಿದಿದೆ. ಇದರ ಬಗ್ಗೆ ಯೋಚಿಸದೆ ಬರೀ ಹೆಸರು ಬದಲಿಸಿದರೆ ಆಯಿತೆ? ನಮ್ಮ ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ಜನರು ಹತ್ತಿರವಿರುವ ಹಳ್ಳಿಗೆ ಹೋಗಬೇಕಾದರೆ ಹೇಗೋ ಚಿಲ್ಲರೆ ಕಾಸನ್ನು ಕೂಡಿಟ್ಟು ಬಸ್ಸಿನಲ್ಲಿ ಹೋಗುತ್ತಿದ್ದರು, ಆದರೆ ಈಗ ಅನಾದಿ ಕಾಲದವರಂತೆ ನಡೆದುಕೊಂಡು ಹೋಗುವ ದುಸ್ಥಿತಿಗೆ ಬಂದಿದ್ದಾರೆ. ಇದಕ್ಕೆ ಮೂಲ ಕಾರಣ ಈ ಸರ್ಕಾರದ ಭ್ರಷ್ಟ ಆಡಳಿತ. ಸಾಮಾನ್ಯ ಜನರ ಜೀವನದ ಬಗ್ಗೆ ಯೋಚಿಸದೆ ಇವರ ಇಚ್ಛೆಯಂತೆ, ಇವರ ಆಡಳಿತಕ್ಕೆ ಅನುಕೂಲ ವಾಗುವಂತೆ ದರಗಳನ್ನು ಏರಿಸುತ್ತಾ ಹೋದರೆ ಸಾಮಾನ್ಯ ಜನರ ಜೀವನ ಏನಾಗಬೇಕು? ಬಸ್ಸಿನಲ್ಲಿ ದರ ಹೆಚ್ಚಿಸಿದ ನಂತರ ಸಾಮಾನ್ಯ ಜನರು ಖಾಸಗಿ ಬಸ್ಸುಗಳತ್ತ ವಾಲಿದ್ದರು. ಅವರಾದರೂ ಸುಮ್ಮನಿರುತ್ತಾರೆಯೇ, ಖಾಸಗಿಯವರು ಟಿಕೆಟ್ ದರ ಏರಿಸಿದರಿಂದ ಬಡ ಜನರು ನಡೆಯುವುದನ್ನೇ ಪಾಲಿಸುತ್ತಿದ್ದಾರೆ. ತಿನ್ನುವ ಅನ್ನದಿಂದ ಹಿಡಿದು ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ ಇದರಿಂದ ಕೂಲಿ ಮಾಡಿ ದುಡಿಯುವ ಅಸಂಖ್ಯೆಯ ಜನರ ಜೀವನ ಈಗ ಮತ್ತಷ್ಟು ಬಡತನಕ್ಕೆ ದೂಡಲಾಗಿದೆ.
ನಾನು ಯಾವ ರಾಜಕೀಯ ಪಕ್ಷದ ಪರವಲ್ಲ, ವಿರೋಧಿಯೂ ಅಲ್ಲ. ಅವರು ತೆಗೆದುಕೊಳ್ಳುವ ನಿರ್ಧಾರ ಮತ್ತು ಕಾರ್ಯಗಳನ್ನಷ್ಟೇ ಗಮನಿಸುತ್ತೇನೆ. ನಾನು ಕಂಡಂತೆ ಸಾಮಾನ್ಯರ ರಕ್ತದ ಮೇಲೆ ಮುಖ್ಯಮಂತ್ರಿ ಅವರ ಕುರ್ಚಿ ಇದೆ. ಗ್ಯಾರಂಟಿಗಳ ಹೆಸರಿನಲ್ಲಿ ಜನಕ್ಕೆ ಮಂಕು ಬಳೆದಿದ್ದಾರೆ. ಈ ಜನರು ಬರಿ ಪುಕ್ಕಟ್ಟೆ ಸೌಲಭ್ಯಗಳಿಗೆ ಆಸೆ ಬಿದ್ದವರು ತಮ್ಮ ಸ್ವಾಭಿಮಾನದ ಉಳಿತಕ್ಕೆ ಯೋಚಿಸಲಿಲ್ಲ. ಪಕ್ಷ ಗೆಲ್ಲುವ ಮೊದಲು ನೀಡಿದ ಭರವಸೆಗಳಿಗೂ ಈಗ ಕೆಲಸ ಮಾಡುತ್ತಿರುವ ಬಗೆಗೂ ನೋಡಿದರೆ ನಮ್ಮ ರಾಜ್ಯವನ್ನು ಆರ್ಥಿಕ ಸಂಕಷ್ಟದಲ್ಲಿ ದೂಡುವಂತಿದೆ. ಬಡವರನ್ನು ಮತ್ತಷ್ಟು ಬಡವರಾಗಿಸುತ್ತಿದ್ದಾರೆ. ಬಡ ಜನರು ಹಣ ಕೊಟ್ಟು ಮೆಟ್ರೋದಲ್ಲಿ ಆಗೊಮ್ಮೆ ಹೀಗೊಮ್ಮೆ ಓಡಾಡುತ್ತಿದ್ದವರು ಈಗ ಮೆಟ್ರೋ ಎಂಬ ಆಸೆಯನ್ನು ಮನಸ್ಸಿನಿಂದ ಕಿತ್ತೊಗೆದಿದ್ದಾರೆ. ಯಾರನ್ನೋ ಯಾಕೆ ಉದಾಹರಣೆಯಾಗಿ ನೀಡಲಿ ನಾನು ವಿದ್ಯಾರ್ಥಿ, ನಾನು ಸಹ ಮೆಟ್ರೋ ಎಂದರೆ ನಮ್ಮಂತಹ ಬಡವರ ಪಾಲಿಗೆ ಇಲ್ಲ. ಎಂದು ಬಲವಾಗಿ ನಂಬಿರುವೆ.
ಬಡವರ ಕೈತುತ್ತನ್ನು ಕಿತ್ತು ತಿನ್ನುತ್ತಿರುವ ಭ್ರಷ್ಟ ರಾಜಕಾರಣಿಗಳಿಗೆ ಬಡವರ ಕಣ್ಣೀರು ಹೇಗೆ ತಿಳಿಯುತ್ತದೆ. ದರಗಳ ಏರಿತದಿಂದ ಪ್ರತಿನಿತ್ಯ ಬಳಸುತ್ತಿದ್ದ ವಸ್ತುಗಳನ್ನು ಬಡವರು ಮರೆಯುತ್ತಿರುವ ಬಗ್ಗೆ ಹೇಗೆ ಅರ್ಥವಾಗುತ್ತದೆ. ಈ ಭ್ರಷ್ಟರಿಗೆ ಅರ್ಥವಾಗುವುದಿಲ್ಲ, ಯಾಕೆಂದರೆ ಅವರಿಗೆ ಬೇಕಾದ ಸೌಲಭ್ಯಗಳು ಅವರ ಅಂಗೈಯಲ್ಲಿ ಸಿಗುತ್ತವೆ. ಇಂತಹ ದುಸ್ಥಿತಿಗೆ ರಾಜಕಾರಣಿಗಳಷ್ಟೇ ಕಾರಣವೆಂದರೆ ಖಂಡಿತ ತಪ್ಪಾಗುತ್ತದೆ. ನಾವು ಮೌನವಾಗಿದ್ದು ಇದಕ್ಕೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಕಾರಣರಾಗುತ್ತಿದ್ದೇವೆ. ವಿರೋಧಪಕ್ಷದ ನಾಯಕರು ನಮಗಿಂತ ಮೌನವಾಗಿರುವುದು ಎಷ್ಟರಮಟ್ಟಿಗೆ ಸರಿ. ಕರ್ನಾಟಕದಲ್ಲಿ ಸರಕಾರಿ ಶಾಲೆಗಳು ಹಾಗೂ ಕನ್ನಡ ಮಾಧ್ಯಮ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದು ಬಿಟ್ಟು ಕನ್ನಡವನ್ನೇ ಕಡೆಗಣಿಸುವ ಈ ಸರ್ಕಾರದ ಗುರಿಯಾದರೂ ಏನು? ಕನ್ನಡವನ್ನು ಕಡೆಗಣಿಸುವoತಹ ಸರ್ಕಾರ ಇದ್ದು ಏನು ಪ್ರಯೋಜನ. ಇದರ ಬಗ್ಗೆ ಯಾಕೆ ಯಾವ ಕನ್ನಡಪರ ಹೋರಾಟಗಾರರು ಧ್ವನಿ ಎತ್ತುತ್ತಿಲ್ಲ? ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವೂ ಇಲ್ಲದಂತಾಗುತ್ತಿದೆ. ದರಗಳ ಏರಿಕೆ, ಗ್ಯಾರಂಟಿಗಳ ಹೆಸರಿನಲ್ಲಿ ಜನರ ತುಳಿತ, ಕನ್ನಡ ಶಾಲೆಗಳ ವಿನಾಷ, ಸರ್ಕಾರಿ ಶಾಲೆಗಳ ಕಡೆಗಣನೆ ಇವೆಲ್ಲವನ್ನೂ ಮರೆಸುವುದಕ್ಕಾಗಿ ಹೆಸರುಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಕಾಣುತ್ತದೆ.
ಇದೇ ಮುಂದುವರೆದರೆ ಶಿಕ್ಷಣ, ಪಟ್ಟಣ, ನಗರ, ಬಸ್ಸು, ಮೆಟ್ರೋ ಇತ್ಯಾದಿ ಎಲ್ಲವೂ ಶ್ರೀಮಂತರಿಗಷ್ಟೇ ಬಡವರಿಗಲ್ಲ ಎಂಬ ಭಾವ ಸಾಮಾನ್ಯ ಜನರಲ್ಲಿ ಬೇರೂರುತ್ತದೆ. ಹಿಂದಿನ ಕಾಲದಲ್ಲಿ ಜಾತಿಯಿಂದ ಮೇಲು ಕೀಳು ಎಂದಿದ್ದರೆ, ಈಗ ಬಡವ ಮತ್ತು ಶ್ರೀಮಂತ ಎಂಬುದರಿಂದ ಭೇದ ಬೆಳೆಯುವುದರಲ್ಲಿ ಸಂಶಯವಿಲ್ಲ. ಇವರ ಭ್ರಷ್ಟತೆಯನ್ನು ಮುಚ್ಚಲು ಜನರ ಚರ್ಮವನ್ನು ಸುಲಿದು ಹೊದಿಕೆಯಾಗಿ ಬಳಸುತ್ತಿದ್ದಾರೆ. ಹೀಗೆ ಮುಂದುವರೆದರೆ ಸಾಮಾನ್ಯ ಜನರು ಬದುಕಿದ್ದು ಸತ್ತಂತೆ ಬದುಕಬೇಕಾಗುತ್ತದೆ.
- ರಾಮಕೃಷ್ಣ. ಎನ್



















