ಕೊಪ್ಪಳ : ತಾಲೂಕಿನ ಬೆಟಿಗೇರಿಯ ಸರಕಾರಿ ಪ್ರೌಢಶಾಲೆಯಲ್ಲಿ ತಾಯಿಯ ಹೆಸರಲ್ಲಿ ಒಂದು ಗಿಡ ಅಭಿಯಾನದ ಪ್ರಯುಕ್ತ ಪರಿಸರ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಗುರು ಪರಶುರಾಮ ಸಾಲ್ಮನಿ ಮಕ್ಕಳು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದರು. ಕಾರ್ಯಕ್ರಮದ ಸಂಚಾಲಕ ಮತ್ತು ಭೌತವಿಜ್ಞಾನ ಶಿಕ್ಷಕ ಮರ್ದಾನಲಿ ಗಡಾದ ಮಾತನಾಡಿ ಇಂದು ಮನುಷ್ಯ ತನ್ನ ಅತಿಯಾದ ದುರಾಸೆ, ವೈಭವ ಜೀವನಶೈಲಿ, ಜಾಗತೀಕರಣ, ಕೈಗಾರಿಕರಣ, ನಗರೀಕರಣ, ಆಧುನಿಕ ತಾಂತ್ರಿಕತೆಯ ಫಲವಾಗಿ ಪರಿಸರವನ್ನು ವಿನಾಶದ ಕಡೆಗೆ ತಳ್ಳುತ್ತಿದ್ದಾನೆ ಶಾಲೆಯಲ್ಲಿ ಈ ರೀತಿಯ ಅಭಿಯಾನವನ್ನು ಹಮ್ಮಿಕೊಂಡು ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕಾಗಿದೆ ಪರಿಸರ ಸಂರಕ್ಷಣೆ ಕೇವಲ ಸರ್ಕಾರ, ಸಂಘ ಸಂಸ್ಥೆಗಳ ಜವಾಬ್ದಾರಿಯಾಗದೆ ಸಾಮೂಹಿಕ ಹೊಣೆಯಾಗಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳು ಊರಿನ ಪ್ರಮುಖ ಬೀದಿಗಳಲ್ಲಿ, ಮನೆಗೊಂದು ಮರ ಊರಿಗೊಂದು ವನ, ಅಳಿದರೆ ಕಾಡು ಅಳುವುದು ನಾಡು, ತಾಪಮಾನ ಏರಿಕೆ ನಮಗೆಲ್ಲ ಬೆವರಿಕೆ, ಅರಣ್ಯಗಳ ಬೋಳು ನಮಗೆಲ್ಲ ಗೋಳು, ಕಡಿದರೆ ಮರ ಬರುವುದು ಬರ, ಪರಿಸರ ನಾಶ ಮನುಕುಲ ಸರ್ವನಾಶ, ಪರಿಸರಕ್ಕೆ ಕೊಡಲಿ ಏಟು ಮಾನವಕುಲಕ್ಕೆ ಚಾಟಿ ಏಟು, ಕಾಡಿದ್ದರೆ ನಾವಿಲ್ಲಿ ಕಾಡಿಲ್ಲದೆ ನಾವೆಲ್ಲಿ, ಕಾಡು ಬೆಳೆಸಿ ಮಳೆ ತರಿಸಿ ನಾಡು ಉಳಿಸಿ ಪರಿಸರವಿದ್ದರೆ ಸಂಸಾರ ಇದೇ ಸೃಷ್ಟಿಯ ಸಾರ ಮುಂತಾದ ಪರಿಸರ ಘೋಷಣೆಗಳನ್ನು ಹೋಗುತ್ತಾ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಗಿರಿಯಪ್ಪ ಹಾರನಹಳ್ಳಿ, ರವಿಕಿರಣ್ ಟಿಕಾರೆ, ನಾರಾಯಣಪ್ಪ ಬಿಸನಳ್ಳಿ, ರಾಜಸಾಹೇಬ್ ಬಳಿಗಾರ, ಪ್ರಕಾಶ್ ರೆಡ್ಡಿ ಗೋವಿಂದ್ ರೆಡ್ಡಿ, ಸೋಮಣ್ಣ ಪರಶುರಾಮ್, ಬಸವರಾಜ, ಶ್ರೀಮತಿ ಸುನಿತಾ ಯಾಳಗಿ, ಶ್ವೇತಾ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















