ಯಾದಗಿರಿ: ನಗರದ ಮೆಥೋಡಿಸ್ಟ್ ಚರ್ಚ್ ನಲ್ಲಿ ದೇವರ ವಾಕ್ಯಗಳನ್ನು ಬೋಧಿಸಿ, ಜನರನ್ನು ಸನ್ಮಾರ್ಗದಲ್ಲಿ ನಡೆಸಬೇಕಾದ ಧರ್ಮ ಪ್ರಚಾರಕರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಆಘಾತಕಾರಿ ಘಟನೆಯೊಂದು ಈಗ ಮೆಥೋಡಿಸ್ಟ್ ಚರ್ಚ್ನ ಜಿಲ್ಲಾ ಮೇಲ್ವಿಚಾರಕರಾದ (ಡಿಎಸ್) ಪೌಲ್ ಮಧುಕರ್ ಅವರ ಮೇಲೆ ಸಂಘದ ಆಸ್ತಿಗಳ ದುರ್ಬಳಕೆ ಮತ್ತು ಅಕ್ರಮ ಮಾರಾಟದಂತಹ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಕ್ರೈಸ್ತ ಸಮುದಾಯದಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿದೆ.
ಕ್ರೈಸ್ತ ಧರ್ಮದ ಮೂಲಭೂತ ಆಶಯಗಳೇ ಶಾಂತಿ, ಪ್ರೀತಿ ಮತ್ತು ಸತ್ಯ ಎನ್ನುವದಾದರೆ, ಈ ಮೌಲ್ಯಗಳನ್ನು ಬೋಧಿಸಬೇಕಾದವರು ಈ ರೀತಿ ಮಾಡುವದು ತಪ್ಪು. ಆರೋಪಗಳು ನಿಜಕ್ಕೂ ಶೋಚನೀಯ. ‘ಶಾಂತಿ ಸದನ’ ಆಸ್ತಿಗೆ ಸಂಬಂಧಿಸಿದಂತೆ 26 ಜನರ ಮೇಲೆ ಪ್ರಕರಣ ದಾಖಲಾಗಿರುವುದು ಈ ಆರೋಪಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಈ ಪ್ರಕರಣದಲ್ಲಿ ಜಿಲ್ಲಾ ಮೇಲ್ವಿಚಾರಕ ಪೌಲ್ ಮಧುಕರ್ ಕೂಡಾ ಆರೋಪಿಯಾಗಿದ್ದಾರೆ. ಇದು ಅವರ ನೈತಿಕತೆ ಮತ್ತು ಧಾರ್ಮಿಕ ಬದ್ಧತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನಿಯಮಗಳ ಉಲ್ಲಂಘನೆ ಮತ್ತು ನೈತಿಕ ಹೊಣೆಗಾರಿಕೆ
ಮೆಥೋಡಿಸ್ಟ್ ಚರ್ಚ್ನ ನಿಯಮಗಳು ಮತ್ತು ಶಿಸ್ತು ಪುಸ್ತಕವು ಧರ್ಮಗುರುಗಳ ನಡವಳಿಕೆ, ಬದ್ಧತೆ ಮತ್ತು ನೈತಿಕತೆಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ. ಆದರೆ, ಪೌಲ್ ಮಧುಕರ್ ಅವರ ಮೇಲೆ ಎಫ್ಐಆರ್ ದಾಖಲಾಗಿದ್ದರೂ, ನ್ಯಾಯಾಲಯದಿಂದ ಜಾಮೀನು ಸಿಗದಿದ್ದರೂ ಅವರು ಎರಡೆರಡು ಸಭೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಈ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಗಿರೀಶ್ ಯಡ್ಡಳ್ಳಿ ಅವರಂತಹ ಸಮಾಜ ಚಿಂತಕರು ಆರೋಪಿಸಿದ್ದಾರೆ. ಅಪರಾಧಿ ಸ್ಥಾನದಲ್ಲಿರುವ ವ್ಯಕ್ತಿಯು ಧಾರ್ಮಿಕ ಸೇವೆಯಲ್ಲಿ ಮುಂದುವರಿಯುವುದು ಎಷ್ಟು ಸರಿ? ಇದು ಕ್ರೈಸ್ತ ಸಮುದಾಯದ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವುದಿಲ್ಲವೇ ಎಂಬ ಪ್ರಶ್ನೆಗಳು ಮೂಡಿವೆ.
ಸಂಘದ ಆಸ್ತಿಗಳನ್ನು ಮಾರಿಕೊಂಡು ಅನೇಕರು ‘ಆಗರ್ಭಶ್ರೀಮಂತರಾಗಿದ್ದಾರೆ’ ಎಂಬ ಆರೋಪಗಳು ನಿಜಕ್ಕೂ ಆತಂಕಕಾರಿಯಾಗಿವೆ. ಇದು ಕೇವಲ ಆರ್ಥಿಕ ಅಕ್ರಮವಲ್ಲ, ಬದಲಿಗೆ ದೇವರಿಗೇ ಮೋಸ ಮಾಡಿದಂತೆ. ಈ ಹಿಂದೆ ಆಸ್ತಿ ಮಾರಾಟ ಜಾಲದ ಮುಖ್ಯಸ್ಥನಾಗಿದ್ದ ಹಳೆಯ ಬಿಷಪ್ನನ್ನು ಬಿಟ್ಟು, ಈಗಿನ ಹೊಸ ಬಿಷಪ್ನ ಅನುಯಾಯಿಗಳಾಗಿರುವ ಇವರೆಲ್ಲಾ ‘ಸಮಯ ಸಾಧಕರು’ ಎಂದು ಬಣ್ಣಿಸಲಾಗುತ್ತಿದೆ.
ಸಮಾಜಕ್ಕೆ ಯಾವ ಸಂದೇಶ?
ಜಿಲ್ಲಾ ಮೇಲ್ವಿಚಾರಕರು ಬೈಬಲ್ನ ಸಂದೇಶಗಳನ್ನು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅವರೇ ಅನ್ಯಾಯ ಮತ್ತು ಅಕ್ರಮಗಳಲ್ಲಿ ತೊಡಗಿದರೆ, ಇದರಿಂದ ಯಾವ ಸಮಾಜ ಉದ್ದಾರವಾದೀತು? ಕ್ರೈಸ್ತ ಸಮಾಜಕ್ಕೆ ಇವರು ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂಬುದು ಗಿರೀಶ್ ಯಡ್ಡಳ್ಳಿ ಅವರಂತಹವರ ಅಳಲು.
ಇಂತಹ ಘಟನೆಗಳು ಧರ್ಮದ ಮೇಲಿನ ನಂಬಿಕೆಯನ್ನು ಅಲುಗಾಡಿಸುತ್ತವೆ. ಧರ್ಮದ ಹೆಸರಿನಲ್ಲಿ ನಡೆಯುವ ಅಕ್ರಮಗಳು ನಂಬಿಕೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತವೆ. ಸಮಾಜದಲ್ಲಿ ಧರ್ಮದ ಬಗ್ಗೆ ಗೌರವ ಉಳಿಯಬೇಕಾದರೆ, ಅಂತಹ ಅಕ್ರಮಗಳಲ್ಲಿ ತೊಡಗಿರುವವರನ್ನು ಗುರುತಿಸಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯ.
ಸಮುದಾಯದ ಪಾತ್ರ ಮತ್ತು ಮುಂದಿನ ದಾರಿ
ಮೆಥೋಡಿಸ್ಟ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯಾವುದೇ ‘ಡಿಎಸ್’ ಅಪರಾಧಿ ಸ್ಥಾನದಲ್ಲಿದ್ದರೆ, ಅವರನ್ನು ಕೂಡಲೇ ಸೇವೆಯಿಂದ ತೆಗೆದುಹಾಕಬೇಕು. ಅವರನ್ನು ಡಿಗ್ರೇಡ್ ಮಾಡಿ, ಫಾಸ್ಟರ್ಗಳನ್ನಾಗಿ ಮಾಡಿ ಗೋವಾದಲ್ಲಿ ನಡೆಯುವ ಪ್ರಾದೇಶಿಕ ಸಮ್ಮೇಳನಕ್ಕೆ ಸೇರಿಸಿಕೊಳ್ಳಬಾರದು ಎಂದು ಅನಿಲ್ಕುಮಾರ್ ಜಾನ್ ಸರ್ವಾನಂದ್ ಅವರಿಗೆ ನೇರವಾಗಿ ಸಂದೇಶ ನೀಡಲಾಗಿದೆ. ಸಮಾಜದ ಘನತೆ ಮತ್ತು ಗೌರವವನ್ನು ಉಳಿಸಿಕೊಳ್ಳಬೇಕಾದರೆ, ಇಂತಹವರನ್ನು ಸೇವೆಯಿಂದ ವಜಾ ಮಾಡಿ ದೂರ ಇಡುವುದು ಅತ್ಯಗತ್ಯ.
ಪ್ರತಿಯೊಬ್ಬ ಕ್ರೈಸ್ತರೂ ಇಂತಹ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಬೇಕು. ಧರ್ಮದ ಹೆಸರಿನಲ್ಲಿ ನಡೆಯುವ ಯಾವುದೇ ದುರ್ಬಳಕೆ, ಅಕ್ರಮಗಳನ್ನು ಸಹಿಸಬಾರದು. ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡುವುದು ಪ್ರತಿಯೊಬ್ಬ ನಾಗರಿಕನ, ಅದರಲ್ಲೂ ವಿಶೇಷವಾಗಿ ಧಾರ್ಮಿಕರ ಕರ್ತವ್ಯ. ಇಲ್ಲವಾದಲ್ಲಿ ಇಂತಹ ಘಟನೆಗಳು ಧರ್ಮದ ಮೂಲ ಆಶಯಗಳನ್ನೇ ನಾಶಪಡಿಸಿ, ಜನರ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡಬಹುದು. ನಂಬಿಕೆಯ ವಂಚನೆಗೆ ಅವಕಾಶ ನೀಡದೆ, ಧಾರ್ಮಿಕ ಸಮುದಾಯ ತನ್ನ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಬೇಕಿದೆ.
- ಕರುನಾಡ ಕಂದ



















