ಬಳ್ಳಾರಿ/ ಕಂಪ್ಲಿ :ತಾಲ್ಲೂಕಿನಲ್ಲಿ ಸರ್ಕಾರದ ಆದೇಶದಂತೆ ಇ-ಪೌತಿ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ತಾಲ್ಲೂಕಿನ ರೈತರು ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಜಮೀನುಗಳ ವಾರಸುದಾರ ಹಕ್ಕನ್ನು ಪಡೆದುಕೊಳ್ಳಬೇಕೆಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ತಿಳಿಸಿದರು.
ಅವರು ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರ ಇ-ಪೌತಿ ಆಂದೋಲನವನ್ನು ಜಾರಿಗೊಳಿಸಿದ್ದು, ಕೃಷಿ ಜಮೀನುಗಳ ಮಾಲೀಕರು ಮೃತರಾದರಲ್ಲಿ ಸದರಿ ಜಮೀನನ್ನು ಸಂಬಂಧ ಪಟ್ಟ ವಾರಸುದಾರರು ತಮ್ಮ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಳ್ಳಬೇಕಾಗಿರುತ್ತದೆ. ಅದರಂತೆ ಇ-ಪೌತಿ ಆಂದೋಲನದ ಮೂಲಕ ಕಂಪ್ಲಿ ತಾಲ್ಲೂಕಿನಲ್ಲಿ ಕೃಷಿ ಮಾಲೀಕರು ಮೃತರಾದ ಕುಟುಂಬದ ಸದಸ್ಯರು ಹಕ್ಕು ಬದಲಾವಣೆ ಮಾಡಿಕೊಳ್ಳದಿದ್ದಲ್ಲಿ ಅಂತವರ ಜಮೀನುಗಳನ್ನು ಉಚಿತವಾಗಿ ಅಥವಾ ಶುಲ್ಕ ರಹಿತವಾಗಿ ವಾರಸತ್ವದ ಪ್ರಕಾರ ಪಹಣಿ ಪತ್ರಿಕೆ (ಉತಾರ) ಮಾಡಿಕೊಡಲಾಗುತ್ತದೆ. ಇಂತಹ ಜಮೀನುಗಳ ವಾರಸುದಾರರು ಕೂಡಲೇ ಮೃತರ ಮರಣ ಪ್ರಮಾಣ ಪತ್ರ, ವಂಶವೃಕ್ಷ,ವಾರಸುದಾರರ ಆಧಾರ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ಗ್ರಾಮಾಡಳಿತಾಧಿಕಾರಿಗಳಿಗೆ ಸಲ್ಲಿಸಿದ್ದಲ್ಲಿ,ಮಾಲೀಖರು ಮೃತರಾಗಿರುವ ಜಮೀನುಗಳ ವಾರಸು ಖಾತೆಯನ್ನು ಉಚಿತವಾಗಿ ಇ-ಪೌತಿ ಆಂದೋಲನದ ಮೂಲಕ ಮಾಡಿಕೊಡಲಾಗುವುದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಎಲ್ಲಾ ಸಾರ್ವಜನಿಕರು ಈ ಇ-ಪೌತಿ ಆಂದೋಲನದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಹಸಿಲ್ದಾರ್ ಜೂಗಲ್ ಮಂಜುನಾಯಕ ಮನವಿ ಮಾಡಿದರು.
ವರದಿ : ಜಿಲಾನಸಾಬ್ ಬಡಿಗೇರ



















