ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿ ಇರುವ ಲೆಕ್ಕಾಧಿಕಾರಿಗಳ ಸಂಘದಲ್ಲಿ ಜರುಗಿದ ವಿಶ್ವಾಭಿಗಮನಮ್ ಯಕ್ಷನೃತ್ಯ, ಖ್ಯಾತ ಪ್ರಸಂಗ ಕರ್ತ ಸಾಹಿತಿ ದಿನೇಶ ಉಪ್ಪೂರ ಅವರಿಗೆ ಸನ್ಮಾನ, ಯಕ್ಷಗಾನ ಶಾಸ್ತ್ರೀಯವೇ!!! ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಕ್ಷಗಾನ ವಿದ್ವಾಂಸ ಡಾ. ಆನಂದ ರಾಮ ಉಪಾಧ್ಯ ಅವರು ಮಾತನಾಡಿ ಸಾವಿರಾರು ಯಕ್ಷಗಾನ ತಾಳಮದ್ದಳೆಗಳ ಆಡಿಯೋ ವಿಡಿಯೋಗಳನ್ನು ಸಂರಕ್ಷಿಸಿ ಡಿಜಿಟೈಸ್ ಮಾಡಿದ ದಿನೇಶ ಉಪ್ಪೂರ ಅವರ ಸಾಹಸ ಕಾರ್ಯ ಯಾವ ವಿಶ್ವವಿದ್ಯಾಲಯ, ಅಕಾಡೆಮಿ ಮಾಡುವ ಕೆಲಸಗಳಿಗೂ ಕಡಿಮೆ ಇಲ್ಲ ಎಂದು ಯಕ್ಷಗಾನಕ್ಕಾಗಿ ಜೀವನ ಮುಡುಪಾಗಿಸಿದ ಅವರ ಶ್ರಮವನ್ನು ಕೊಂಡಾಡಿದರು.
ಮುಖ್ಯ ಅತಿಥಿಗಳಾಗಿ ಖ್ಯಾತ ಪತ್ರಕರ್ತ, ಅಂಕಣಕಾರ ರಾಜು ಅಡಕಳ್ಳಿ ಅವರು ಮಾತನಾಡಿ
ದಶರೂಪಗಳ ದಶಾವತಾರ ಕೃತಿಯನ್ನು ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಅವರು ಹತ್ತು ವರ್ಷಗಳ ಸತತ ಅಧ್ಯಯನ, ಪರಿಶ್ರಮದಿಂದ ರಚಿಸಿದ್ದಾರೆ; ಯಕ್ಷಗಾನಕ್ಕೆ ಇದೊಂದು ಆಕರ ಗ್ರಂಥ ವಾಗುವುದರಲ್ಲಿ ಸಂಶಯವಿಲ್ಲ; ಈ ಕೃತಿ ಡಾಕ್ಟೋರೇಟ್ ಪಡೆಯಲು ಅರ್ಹವಾದ ಕೃತಿ ಎಂದು ನುಡಿದರು. ಅವರು ಮುಂದುವರೆದು ಅಶೋಕ ಹಾಸ್ಯಗಾರ ಅವರು ಸ್ವಚ್ಛ, ಪ್ರಾಮಾಣಿಕ, ಬದ್ಧತೆಯುಳ್ಳ, ಸಂಪಾದಕರಾಗಿದ್ದರು; ಅವರ ಈ ಕೃತಿಗೆ ಸಮ್ಮಾನ ಕೂಡ ದೊರೆತಿರುವುದು ಸಂತಸದ ವಿಷಯವಾಗಿದೆ ಹಾಗೂ ಇಂತಹ ನಮಸ್ಕಾರ ಕಾರ್ಯಕ್ರಮ ಏರ್ಪಡಿಸುವುದು ಸ್ತುತ್ಯಾರ್ಹ ಅಭಿಪ್ರಾಯ ಪಟ್ಟರು.
ಸನ್ಮಾನಿತ ದಿನೇಶ ಉಪ್ಪೂರ ಅವರ ಪ್ರವಾಸ ಕಥನ, ಕಥಾ ಸಂಕಲನದ ಸಂಖ್ಯೆಯಲ್ಲಿನ ಮಾತನಾಡಿ ಅವರಿಗೆ ಸಿಗಬೇಕಾದ ಮನ್ನಣೆ ಸಿಗದಿರುವುದು ಬೇಸರ ಮೂಡಿಸುತ್ತದೆ, ರಾಜಕಾರಣಿಗಳ ಸಭೆಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವ ವರದಿಗಾರರು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ವಿಜ್ಞಾನ, ಕಲೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಬೆರಳೆಣಿಕೆಯಷ್ಟೂ ಬಾರದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ದಿನೇಶ ಉಪ್ಪೂರ ಅವರಿಗೆ ಸನ್ಮಾನ ಮಾಡಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಗಿಂಡಿಮನೆ ಮೃತ್ಯುಂಜಯ ಅವರು ದಿನೇಶ ಉಪ್ಪೂರ ಅವರ ಪ್ರಸಂಗ ಸಾಹಿತ್ಯದಲ್ಲಿಯ ಛಂದಸ್ಸು, ಮಟ್ಟು, ರಸಗಳ ಕುರಿತು ವಿವರವಾಗಿ ತಿಳಿಸಿ, ಅವರ ಹಲವಾರು ಯಕ್ಷಗಾನ ಪ್ರಸಂಗಗಳಲ್ಲಿ ಚಂದ್ರನಖಿ ಪ್ರಸಂಗವನ್ನು ವಿಶೇಷವಾಗಿ ಪ್ರಸ್ತಾಪಿಸಿ, ಅಪರೂಪದ ರಾಗಗಳಾದ ಮೇಷಾಳೆ, ಹುಸೇನಿ ಗಳಂತಹ ಅಪರೂಪದ ರಾಗಗಳನ್ನು ಬಳಸಿ ಪ್ರಸಂಗ ರಚಿಸಿದ ಅವರ ಪಾಂಡಿತ್ಯವನ್ನು ಕೊಂಡಾಡಿದರು.
ನಂತರ ನಡೆದ ಯಕ್ಷಗಾನ ಶಾಸ್ತ್ರೀಯವೇ!!! ಸಂವಾದ ಕಾರ್ಯಕ್ರಮದಲ್ಲಿ ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಅವರು ಯಕ್ಷಗಾನದ ಅಂಗಗಳಾದ ಚೌಕಿಮನೆ, ಸಭಾ ಲಕ್ಷ್ಮಣ, ನಾಟಕ, ಪ್ರಕರಣ, ಅಂಕ, ಪ್ರಹಸನ, ವ್ಯಾಯೋಗ, ಸಮವಕಾರ ಮುಂತಾದವುಗಳ ಕುರಿತು, ಅವುಗಳ ಶಾಸ್ತ್ರೀಯತೆಯ ಕುರಿತು ವಿಶ್ಲೇಷಿಸಿ, ಆಧಾರಯುತವಾಗಿ ವಿವರಿಸಿ, ಯಕ್ಷಗಾನ ಶಾಸ್ತ್ರೀಯವೇ ಹೌದು ಎಂಬುದನ್ನು ನಿರೂಪಿಸಿದರು. ಸಂವಾದದಲ್ಲಿ ಭಾಗಿಯಾಗಿದ್ದ ಯಕ್ಷಗಾನ ವಿದ್ವಾಂಸ ಡಾ. ಆನಂದ ರಾಮ ಉಪಾಧ್ಯ, ರವಿ ಮಡೋಡಿ ಡಾ. ಪಿ. ಕೆ ದೀಕ್ಷಿತ್ ಮುಂತಾದವರ ಸಂದೇಹಗಳಿಗೆ ನಿಖರವಾದ ಉತ್ತರವನ್ನು ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ತುಳಸಿ ಹೆಗಡೆ ಅವರಿಂದ ಪ್ರಸ್ತುತಪಡಿಸಲಾದ ವಿಶ್ವಶಾಂತಿ ಸಂದೇಶದ ವಿಶ್ವಾಭಿಗಮನಮ್ ಪ್ರಸ್ತುತಿ, ಪ್ರಭುದ್ಧವಾದ ಅಭಿನಯದ ಯಕ್ಷ ನೃತ್ಯ ಸಭಿಕರಿಗೆ ಅಪಾರ ಸಂತೋಷವನ್ನು ನೀಡಿತು. ಕಾರ್ಯಕ್ರಮದಲ್ಲಿ ಪ್ರಸಂಗ ಕರ್ತ ಸಾಹಿತಿ ನಿವೃತ್ತ ಲೆಕ್ಕಾಧಿಕಾರಿ ದಿನೇಶ್ ಉಪ್ಪೂರ ಅವರನ್ನು ಹಾಗೂ ಅಶೋಕ ಹಾಸ್ಯಗಾರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ದಿನೇಶ ಉಪ್ಪೂರ ಅವರು ಮಾತನಾಡುತ್ತಾ ದಾಖಲೆಗಳ ಸಂಗ್ರಹಕ್ಕಾಗಿ ಅವರು ಪಡುತ್ತಿರುವ ಶ್ರಮ ವಿವರಿಸಿ, ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ಅಮರಾ ಕಾವ್ಯನಾಮದ ಅಣೆಕಟ್ಟು ಮಧುಸೂದನ್ ರಾವ್ ಪ್ರಾರ್ಥನೆ ಹಾಡಿ, ಸ್ವಾಗತಿಸಿ, ಪ್ರಸ್ತಾವನೆ ಮಾಡಿ, ನಿರೂಪಿಸಿದರು. ಶ್ರೀ ಎಲ್ ಎನ್ ಹೆಗಡೆ, ಸುಜಯ ನಾಗರಾಜ, ಟಿ. ಶ್ರೀಧರ್, ವಿಘ್ನೇಶ್ವರ ಶಾಸ್ತ್ರಿ ಮುಖ್ಯ ಅತಿಥಿಗಳಿಗೆ ಗೌರವಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದರಲ್ಲಿ ಗಣ್ಯರಾದ ಎಸ್ ಆರ್ ವಿಜಯಶಂಕರ್,ಉಮೇಶ ಶಿರೂರ್, ಸಹನಾ ಹೆಗಡೆ,ಗಾಯತ್ರಿ ರಾಘವೇಂದ್ರ, ಪ್ರಭಾಕರ ಗಂಗೊಳ್ಳಿ, ಸಿದ್ದಣ್ಣ ಸೊನ್ನದ, ಸಂಘದ ಹಿರಿಯ ಸದಸ್ಯರುಗಳಾದ ರಾಮಚಂದ್ರ ರೆಡ್ಡಿ, ಕೆಂಪೇಗೌಡ, ಉಲಿಗೆ ಸ್ವಾಮಿ, ಸುಧಾ, ಗೀತಾ ಹೆಗಡೆ, ಗೀತಾ ಸಭಾಹಿತ, ನಿತ್ಯಾನಂದಪ್ಪ, ಚರಣ್ ಕುಮಾರ್ ,ಎಸ್ ಜೆ ಕೃಷ್ಣಮೂರ್ತಿ, ವಿಶಾಲಾಕ್ಷಿ ಶರ್ಮ ,ಎಸ್ ಶಂಕರ್, ವಾಸುದೇವ ಕಾರಂತ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ



















