ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ
ಬ್ರಿಟಿಷ್ ಆಡಳಿತದ ವಿರುದ್ಧ ಹಾಗೂ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಆಯುಧಗಳನ್ನು ಬಳಸಿದ ಮೊದಲ ಭಾರತೀಯ, ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿರುವ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಎಂದೇ ಖ್ಯಾತಿಗಳಿಸಿದ ಚಂದ್ರಶೇಖರ ಸೀತಾರಾಮ್ ತಿವಾರಿ ಅವರ 119ನೇ ಜನ್ಮದಿನ ಇಂದು.
ಆಜಾದ್ ಅವರು ಬ್ರಿಟಿಷರನ್ನು ಇನ್ನಿಲ್ಲದಂತೆ ಕಾಡಿದ್ದರು. ಉತ್ಸಾಹ ಮತ್ತು ದೇಶಭಕ್ತಿಯ ಹಾದಿಯಲ್ಲಿ ನಡೆಯಲು ಜನತೆಗೆ ಮಾರ್ಗದರ್ಶನವನ್ನು ನೀಡಿದ ಮಹಾನ್ ವ್ಯಕ್ತಿ ಆಜಾದ್ ಅವರ ಜೀವನ ಚರಿತ್ರೆ ಹಾಗೂ ಆಸಕ್ತಿದಾಯಕ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ…
ಚಂದ್ರಶೇಖರ್ ಆಜಾದ್ ಅವರು ಮಧ್ಯಪ್ರದೇಶದ ಭಾಬ್ರಾ ಎಂಬ ಸಣ್ಣ ಗ್ರಾಮದಲ್ಲಿ ಪಂಡಿತ್ ಸೀತಾರಾಮ್ ಮತ್ತು ಜಾಗ್ರಣಿ ದೇವಿ ದಂಪತಿಯ ಪುತ್ರನಾಗಿ 1906ರ ಜುಲೈ 23ರಂದು ಜನಿಸಿದರು. ಭಾವರಾ ಮತ್ತು ವಾರಾಣಸಿಯ ಸಂಸ್ಕೃತ ಪಾಠ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿದ ಆಜಾದ್ ಅವರಿಗೆ ಸಣ್ಣ ವಯಸ್ಸಿನಲ್ಲೇ ಸ್ವಾತಂತ್ರ್ಯದ ಕಿಚ್ಚು ಹತ್ತಿಕೊಂಡಿತ್ತು. ಅದರಂತೆ ಸ್ವಾತಂತ್ರ್ಯ ಹೋರಾಟದಲ್ಲೂ ಧುಮುಕಿ ಚಳುವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಆಜಾದ್ ಎಂಬ ಬಿರುದು ಬಂದಿದ್ದು ಹೇಗೆ?
ಅಮೃತಸರದಲ್ಲಿ 1919ರಲ್ಲಿ ನಡೆದ ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ಘಟನೆ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಈ ಘಟನೆಯಿಂದ ತೀವ್ರವಾಗಿ ಜರ್ಜರಿತರಾದ ಚಂದ್ರಶೇಖರ್ ಅವರು 1921ರಲ್ಲಿ ಗಾಂಧೀಜಿಯವರು ಹಮ್ಮಿಕೊಂಡ ಅಸಹಕಾರ ಚಳುವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು. ಈ ರೀತಿಯ ನಾಗರಿಕ ಶಾನಸಭಂಗ ಅಥವಾ ಅವಿಧೇಯತೆಗಾಗಿ ಅವರು ಬಂಧಿತರಾಗಿ ತಮ್ಮ 15ನೇ ವಯಸ್ಸಿನಲ್ಲಿಯೇ ಶಿಕ್ಷೆಗೆ ಗುರಿಯಾದರು. ನ್ಯಾಯಾಧೀಶರು ಹೆಸರೇನು ಎಂದು ಕೇಳಿದಾಗ ಆಜಾದ್ (ಸ್ವಾತಂತ್ರ್ಯ ಅಥವಾ ಸ್ವತಂತ್ರ ವ್ಯಕ್ತಿ ಎಂದು ಅರ್ಥ) ಎಂದು ಹೇಳಿದರು. ಇದೇ ಕಾರಣಕ್ಕೆ ಅವರಿಗೆ 15 ಛಡಿ ಏಟುಗಳ ಶಿಕ್ಷೆಯನ್ನು ನೀಡಲಾಯಿತು.
ಛಡಿ ಏಟುಗಳ ನಡುವೆ ಚಂದ್ರಶೇಖರ್ ಅವರು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಪ್ರತಿ ಛಡಿ ಏಟುಗಳಿಗೂ ಅದೇ ಘೋಷಣೆಗಳನ್ನು ಕೂಗಿದರು. ಈ ಘಟನೆಯ ನಂತರ ಚಂದ್ರಶೇಖರ್ ಅವರಿಗೆ ಆಜಾದ್ ಎಂಬ ಬಿರುದು ಪ್ರಾಪ್ತವಾಯಿತು. ಅದರಂತೆ ಚಂದ್ರಶೇಖರ್ ಸೀತಾರಾಮ್ ತಿವಾರಿ ಅವರು ಚಂದ್ರಶೇಖರ್ ಅಜಾದ್ ಆಗಿ ಗುರುತಿಸಲ್ಪಟ್ಟರು.
ಭಾರತದಾದ್ಯಂತ ಹಲವಾರು ಶಾಲೆಗಳು, ಕಾಲೇಜುಗಳು, ರಸ್ತೆಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಿಗೆ ಆಜಾದ್ ಅವರ ಹೆಸರಿಡಲಾಗಿದೆ.



















