ಬಳ್ಳಾರಿ/ ಕಂಪ್ಲಿ : ತಾಲೂಕಿನ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ವಿವಿಧ ಯೋಜನೆಯಡಿ ನಾನಾ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ ಬುಧವಾರ ಭೂಮಿ ಪೂಜೆ ಸಲ್ಲಿಸಿದರು.
ಇಲ್ಲಿನ ನೆಲ್ಲುಡಿ ಗ್ರಾಪಂಯ ಬಳಿಯಲ್ಲಿರುವ ಹೊಸ ನೆಲ್ಲುಡಿ ರಸ್ತೆಯಲ್ಲಿ 2024-25ನೇ ಸಾಲಿನ ಕೆಕೆಆರ್‌ಡಿಬಿ ಸಿಎಂಡಿಕ್ಯೂ ಯೋಜನೆಯಡಿ ಸುಮಾರು 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿ, ನಂ.10 ಮುದ್ದಾಪುರ ಗ್ರಾಪಂಯ ಪ್ರಭುಕ್ಯಾಂಪಿನಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ, ಮೆಟ್ರಿ ಗ್ರಾಪಂಯ ಚಿನ್ನಾಪುರ ಗ್ರಾಮದಲ್ಲಿ ಸುಮಾರು 47 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಮತ್ತು ಹಂಪಾದೇವನಹಳ್ಳಿ ಗ್ರಾಪಂಯ ಜವುಕು ಬಳಿಯ ಅಂಜನಾಪುರ ಗ್ರಾಮದಲ್ಲಿ ಸುಮಾರು 40 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಗಣೇಶ ಇವರು ಶಂಕುಸ್ಥಾಪನೆ ನೆರವೇರಿಸಿದರು.
ಈಗಾಗಲೇ ಬಹುತೇಕವಾಗಿ ರಸ್ತೆಗಳ ಅಭಿವೃದ್ಧಿ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿವೆ. ತುಂಗಭದ್ರಾ ಜಲಾಶಯದಲ್ಲಿ ಸದ್ಯ 80 ಟಿಎಂಸಿ ನೀರು ಸಂಗ್ರಹವಾಗಿದ್ದು, ಮುಂದಿನ ದಿನದಲ್ಲಿ ಮಳೆಯಾದರೆ, ಮತ್ತಷ್ಟು ನೀರು ಸಂಗ್ರಹವಾಗುವ ಸಾಧ್ಯತೆ ಇರುವುದರಿಂದ ಎರಡನೇ ಬೆಳೆಗೆ ನೀರು ಒದಗಿಸಿದರೆ, ರೈತರಿಗೆ ಅನುಕೂಲವಾಗಲಿದೆ. ಮುಂದಿನ ವರ್ಷದ ಮಾರ್ಚ್ ಮತ್ತು ಎಪ್ರಿಲ್ ತಿಂಗಳೊಳಗೆ ಹೊಸ ಗೇಟ್ ಅಳವಡಿಸಿ, ಈ ಭಾಗದ ಜೀವನಾಡಿ ರೈತರ ಎರಡು ಬೆಳೆಗೆ ಸಂಪೂರ್ಣವಾಗಿ ನೀರು ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಎಮ್ಮಿಗನೂರು, ಕಂಪ್ಲಿ ಸೇರಿದಂತೆ ಇನ್ನಿತರ ಭಾಗದಲ್ಲಿ ಬೆಳೆದ ಜೋಳವನ್ನು ಪೂರ್ಣ ಪ್ರಮಾಣದಲ್ಲಿ ಖರೀದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು. ಕಂಪ್ಲಿ, ಕುರುಗೋಡಿನಲ್ಲಿ ಬಿಇಒ ಕಛೇರಿ ಆರಂಭಿಸುವಂತೆ ಸಂಬಂಧಿಸಿದ ಸಚಿವರೊಂದಿಗೆ ಖುದ್ದಾಗಿ ಮಾತನಾಡಿ ಕಛೇರಿ ತೆರೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಗಣೇಶ ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಶ್ರೀನಿವಾಸರಾವ್, ಚನ್ನಬಸವರಾಜಗೌಡ, ನೆಲ್ಲುಡಿ ಗ್ರಾ. ಪಂ ಪಿಡಿಒ ಶೇಷಗಿರಿ, ಮುಖಂಡರಾದ ಮಲ್ಲನಗೌಡ, ಸಣ್ಣ ಹುಲುಗಪ್ಪ, ಮಹಾಂತೇಶ, ಈರಣ್ಣ, ಸೋಮನಗೌಡ, ಪ್ರಭುಕ್ಯಾಂಪಿನ ಸದಸ್ಯ ತಿಮ್ಮಪ್ಪ, ಮುಖಂಡರಾದ ಡಿ.ಎಸ್ ಪ್ರಸಾದ್, ಮಲ್ಲಿಕಾರ್ಜುನ, ಹುಲುಗಪ್ಪ, ಮೆಟ್ರಿ ಗ್ರಾಪಂ ಅಧ್ಯಕ್ಷೆ ನಾಗಮ್ಮ, ಮುಖಂಡರಾದ ನಾಗರಾಜ, ಹೊನ್ನಳ್ಳಿ ಹಂಪಾರೆಡ್ಡಿ, ಜವುಕು ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ




















