ಚಾಮರಾಜನಗರ ಜಿಲ್ಲೆಯ ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಉತ್ತಮವಾದ ಸ್ಥಾನದಲ್ಲಿ ಮಕ್ಕಳು ಬರಬೇಕು ಇಲ್ಲವಾದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಶಾಸಕ ಎಂ ಆರ್ ಮಂಜುನಾಥ್ ಹೇಳಿದರು.
ಪಟ್ಟಣದ ಬಿ ಆರ್ ಸಿ ಕಚೇರಿಯಲ್ಲಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರ ಜೊತೆಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ 2024-25 ನೇ ಸಾಲಿನಲ್ಲಿ ನಮ್ಮ ಹನೂರು ಶೈಕ್ಷಣಿಕ ವಲಯದಲ್ಲಿ ಕಡಿಮೆ ಫಲಿತಾಂಶ ಬಂದಿದೆ ಇದು ಸರಿಯಾದ ಬೆಳವಣಿಗೆ ಅಲ್ಲ. ಹಾಗಾಗಿ ಈ ಶೈಕ್ಷಣಿಕ ಸಾಲಿನಲ್ಲಿ ಒಳ್ಳೆಯ ಉತ್ತಮವಾದ ಫಲಿತಾಂಶ ಬಾರದಿದ್ದರೆ ನಾನು ಸುಮ್ಮನೆ ಕೂರುವುದಿಲ್ಲ. ನಿಮಗೆ ಯಾವ ರೀತಿಯ ಸಹಕಾರ ಬೇಕೋ ನಾನು ನಿಮ್ಮ ಜೊತೆಗೆ ಇರುತ್ತೇನೆ ನನಗೆ ಒಳ್ಳೆಯ ಫಲಿತಾಂಶ ಕೊಡಬೇಕು ನಿಮ್ಮ ಮಕ್ಕಳಂತೆ ನಮ್ಮ ಶಾಲೆಯ ಮಕ್ಕಳು ಎಂಬ ಭಾವನೆ ನಿಮ್ಮಲ್ಲಿ ಬರಬೇಕು. ಹಾಗಾಗಿ ಎಲ್ಲ ಮುಖ್ಯ ಶಿಕ್ಷಕರೂ ಸಹ ಅತ್ಯಂತ ಹೆಚ್ಚಿನ ಕಾಳಜಿ ವಹಿಸಿ ಮಕ್ಕಳನ್ನು ಒಳ್ಳೆಯ ವಿದ್ಯಾಭ್ಯಾಸ ಕೊಡುವ ಕಡೆ ಗಮನ ಕೊಡಬೇಕು ಎಂದರು.
ತರಾಟೆಗೆ ತೆಗೆದುಕೊಂಡ ಶಾಸಕರು :
ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡು ಉತ್ತಮವಾದ ಪಾಠ ಪ್ರವಚನ ಮಾಡಬೇಕು. ಇಲ್ಲವಾದಲ್ಲಿ ಫಲಿತಾಂಶ ಕುಂಟಿತ ಆಗುತ್ತದೆ. ಹಾಗಾಗಿ ನೀವು ಅತ್ಯಂತ ದಕ್ಷತೆಯಿಂದ ಕೆಲಸ ಮಾಡಬೇಕಿದೆ. ಇಲ್ಲವಾದರೆ ಖಂಡಿತಾ ನಮ್ಮ ಕ್ಷೇತ್ರ ಬಿಟ್ಟು ತೆರಳಬಹುದು ಎಂದು ಕೋಪಿತಗೊಂಡರು.
ಶಿಕ್ಷಕರ ಕೊರತೆ :
ಹನೂರು ಶೈಕ್ಷಣಿಕ ವಲಯದಲ್ಲಿ ಬಹುತೇಕ ಪ್ರೌಢ ಶಾಲೆಗಳಲ್ಲಿ ವಿಜ್ಞಾನ ಶಿಕ್ಷಕರ ಕೊರತೆ, ಇಂಗ್ಲೀಷ್ ಶಿಕ್ಷಕರು, ಹಿಂದಿ ಶಿಕ್ಷಕರ ಕೊರತೆ ಕಾಡುತ್ತಿದೆ. ಹಾಗಾಗಿ ಈ ಬಾರಿ ಫಲಿತಾಂಶ ಹಿನ್ನಡೆಯಾಗಿದೆ ಎಂಬುದು ಸಭೆಯಲ್ಲಿ ಕಂಡು ಬಂದ ಸಾಮಾನ್ಯ ನೋಟ ಆಗಿತ್ತು.
ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ :
ಕಾಡಂಚಿನ ಗ್ರಾಮಗಳಿಗೆ ತೆರಳುತ್ತಿರುವ ಸರ್ಕಾರಿ ಬಸ್ ಗಳು ಸಮಯಕ್ಕೆ ಸರಿಯಾಗಿ ತೆರಳುತ್ತಿಲ್ಲ ಇದರಿಂದ ಶಾಲಾ ಸಮಯಕ್ಕೆ ತಲುಪಲು ಆಗುತ್ತಿಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳ ಗಮನಕ್ಕೆ ತಂದು ಸಮಯಕ್ಕೆ ಸರಿಯಾಗಿ ಬಿಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ತಾಲೂಕು ಪಂಚಾಯಿತಿ ಇ. ಓ ರವರಗೆ ದೂರವಾಣಿ ಮುಖಾಂತರ ಕರೆ ಮಾಡಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆ ಮಾತನಾಡಿ ಅದನ್ನು ಖುದ್ದು ಬೇಟಿ ನೀಡಿ ಪರಿಶೀಲನೆ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಇದೆ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಬಿ ಆರ್ ಸಿ ವೆಂಕಟೇಶ್, ಶಿಕ್ಷಣ ಸಂಯೋಜಕರಾದ ಅಶೋಕ್, ಚಿನ್ನಪ್ಪಯ್ಯ ಸೇರಿದಂತೆ ವಿವಿಧ ಶಾಲೆಯ ಮುಖ್ಯ ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ವರದಿ ಉಸ್ಮಾನ್ ಖಾನ್



















