
ಬಳ್ಳಾರಿ / ಕಂಪ್ಲಿ: ಕಂಪ್ಲಿ-ಕೋಟೆಯಲ್ಲಿ ಹರಿದಿರುವ ತುಂಗಭದ್ರಾ ನದಿಯಲ್ಲಿ ಪ್ರವಾಹ ಕಡಿಮೆಯಾಗಿ ಮೂರು ದಿನಗಳಾದರೂ ಸಹಿತ ಕಂಪ್ಲಿ-ಗಂಗಾವತಿ ಸಂಪರ್ಕಿಸುವ ಸೇತುವೆ ಮೇಲೆ ಲಘುವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದರೂ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ಆದರೆ ಲಾರಿ ಸೇರಿದಂತೆ ಭಾರಿ ವಾಹನಗಳು ಸೇತುವೆ ಮೇಲೆ ಸಂಚರಿಸುತ್ತಿದ್ದರೂ ಸಹಿತಿ ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಏನು ಗೊತ್ತಿಲ್ಲದವರಂತೆ ಇದ್ದಾರೆ.
ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಜಲಾಶಯದಿಂದ ಬಿಟ್ಟಿದ್ದರಿಂದ ಕೋಟೆಯಲ್ಲಿ ಸೇತುವೆ ನೀರಿನಲ್ಲಿ ಮುಳುಗಿದ ಹಿನ್ನೆಲೆಯಲ್ಲಿ ಜು.27ರ ಸಂಜೆಯಿಂದ ಸೇತುವೆ ಮೇಲೆ ಜನರು ಸೇರಿದಂತೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಜು.30ರ ಬೆಳಿಗ್ಗೆ ನದಿಯಲ್ಲಿನ ನೀರಿನ ಪ್ರವಾಹ ಕಡಿಮೆಯಾಗಿ ಸೇತುವೆ ನೀರಿನಿಂದ ಮುಕ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಸೇತುವೆ ಮೇಲಿನ ತ್ಯಾಜ್ಯವನ್ನು ಸ್ವಚಗೊಳಿಸಿ ಅಂದು ಮಧ್ಯಾಹ್ನದಿಂದಲೇ ಲಘು ವಾಹನಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಬಸ್‌ಗಳು ಮತ್ತು ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆಯಾದರೂ ಸಹಿತ ಕೆಲ ಸಮಯ ಹಗಲೊತ್ತಿನಲ್ಲಿ ಹಾಗೂ ರಾತ್ರಿ ಸಮಯದಲ್ಲಿ ಭಾರೀ ವಾಹನಗಳು, ಮರಳನ್ನು ಸಾಗಿಸುವ ವಾಹನಗಳು ನಿರಂತರವಾಗಿ ಸಂಚರಿಸುತ್ತಿದ್ದರೂ ಸಹಿತ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಏನುಗೊತ್ತಿಲ್ಲದವರಂತೆ ಇದ್ದಾರೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಸೇತುವೆ ಮೇಲೆ ಬಸ್‌ಗಳನ್ನು ನಿಷೇಧಿಸಿರುವುದರಿಂದ ಪ್ರಯಾಣಿಕರ ಅನಿವಾರ್ಯವಾಗಿ ಆಟೋಗಳಿಗೆ ದುಪ್ಪಟ್ಟು ಹಣವನ್ನು ನೀಡಿ ಪ್ರಯಾಣಿಸಬೇಕಿದೆ. ವಿದ್ಯಾರ್ಥಿಗಳು ಸಹಿತ ನಿತ್ಯ ಹಣ ನೀಡಿ ಖಾಸಗಿ ವಾಹನಗಳಲ್ಲಿ ಶಾಳೆ-ಕಾಲೇಜುಗಳಿಗೆ ಹೋಗಬೇಕಾಗಿದೆ. ಇದರಿಂದಾಗಿ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ವಿದ್ಯಾರ್ಥಿಗಳು, ಪ್ರಯಾಣಿಕರು ಆಗ್ರಹಿಸಿದ್ದಾರೆ.
ನದಿಯಲ್ಲಿ 1.20.ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬಂದಿರುವುದರಿಂದ ಸೇತುವೆ ಮೇಲಿನ ರಕ್ಷಣಾ ಕಂಬಿಗಳು ಜಖಂ ಆಗಿವೆ. ಕೆಲವು ಕಂಬಿಗಳ ತಳಪಾಯ ಕಿತ್ತು ಬಂದಿವೆ. ಜೊತೆಗೆ ಸೇತುವೆ ಮೇಲ್ಪದರ ಅಲ್ಲಲ್ಲಿ ನೀರಿಗೆ ಕೊಚ್ಚಿಗೆ ಹೋಗಿದೆ.
ತಾತ್ಮಾಲಿಕ ದುರಸ್ತಿಃ- ಭಾರಿ ಪ್ರಮಾಣದ ನೀರಿನ ಅರಿವಿನಿಂದಾಗಿ ಸಂಪರ್ಕ ಸೇತುವೆಯ ಕಂಬಿಗಳನ್ನು ಹಾಗೂ ಸೇತುವೆ ಮೇಲಿನ ಪದರವನ್ನು ಗಂಗಾವತಿ ಲೋಕೋಪಯೋಗಿ ಇಲಾಖೆಯಿಂದ ತಾತ್ಕಾಲಿಕವಾಗಿ ದುರಸ್ತಿ ಮಾಡಿಸುತ್ತಿದ್ದಾರೆ.
ಸೇತುವೆ ಮೇಲೆ ಸಣ್ಣ ಪ್ರಮಾಣದ ಕೆಲಸಗಳು ಇದ್ದು, ಅವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸೋಮವಾರದಿಂದ ಸೇತುವೆ ಮೇಲೆ ಬಸ್ಸುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಹಾಗೂ ಅಲ್ಲಿಯವರೆಗೆ ಸೇತುವೆ ಮೇಲೆ ಯಾವುದೇ ಕಾರಣಕ್ಕೂ ಭಾರೀ ಪ್ರಮಾಣದ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಈ ಬಗ್ಗೆ ಪೊಲೀಸರಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಪೊಲೀಸರಿಗೆ ಮನವಿ ಮಾಡಲಾಗುವುದು ಎಂದು ಗಂಗಾವತಿ ಲೋಕೋಪಯೋಗಿ ಇಲಾಖೆ ಎಇಇ ಜೆ.ವಿಶ್ವನಾಥ್ ತಿಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















