ಬಳ್ಳಾರಿ / ಕಂಪ್ಲಿ : ತಾಲೂಕಿನ ಎಲ್ಲಾ ರೈತರಿಗೆ ರಸಗೊಬ್ಬರಗಳನ್ನು ಸರಿಯಾದ ರೀತಿಯಲ್ಲಿ ತಲುಪದಿರುವುದು ಮತ್ತು ಎಮ್.ಆರ್.ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ವಿರೋಧಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ನೇತೃತ್ವದಲ್ಲಿ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಥ ಇವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ನಂತರ ತಾಲೂಕಾಧ್ಯಕ್ಷ ವಡ್ರು ವಿರೇಶ ಮಾತನಾಡಿ, ರೈತರಿಗೆ ರಸಗೊಬ್ಬರ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಮತ್ತು ಬೆಲೆ ಏರಿಕೆಯಿಂದ ರೈತರು ಕಂಗಾಲಾಗಿದ್ದು, ಇದರ ನಡುವೆ ಇಲ್ಲಿನ ರಸಗೊಬ್ಬರ ಮಾರಾಟಗಾರರು ಎಂ.ಆರ್.ಪಿ ದರಕ್ಕಿಂತ ಅಧಿಕ ದರಲ್ಲಿ ರೈತರಿಗೆ ಗೊಬ್ಬರ ನೀಡುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಮಾತಿಗೆ ಯಾವುದೇ ಕವಡೆ ಕಾಸಿನ ಕಿಮ್ಮತ್ತು ನೀಡದೇ ಕೆಲ ರಸಗೊಬ್ಬರ ಮಾರಾಟಗಾರರು ಎಮ್.ಆರ್.ಪಿ ಬೆಲೆಗಿಂತ ಹೆಚ್ಚಿನ ಧರಕ್ಕೆ ಮಾರುತ್ತಿದ್ದು, ರೈತರಿಗೆ ರಸಗೊಬ್ಬರ ಬೇಕಾದಲ್ಲಿ ಪಹಣಿ, ಆಧಾರ್‌ಕಾರ್ಡ್ ಮತ್ತು ಸಹಿ ಮಾಡಿದ ಇ-ಸ್ಟ್ಯಾಂಪ್, ಖಾಲಿ ಬಾಂಡ್ ಪೇಪರ್ ನೀಡಬೇಕು. ಹಾಗಿದ್ದಲ್ಲಿ ರಸಗೊಬ್ಬರ ನೀಡಲಾಗುತ್ತದೆ ಎಂದು ರೈತರಿಗೆ ಒತ್ತಡ ಏರುತ್ತಿದ್ದಾರೆ. ಕಳೆದ ಒಂದು ವಾರದಿಂದ ಎಮ್ಮಿಗನೂರು ಗ್ರಾಮದಲ್ಲಿ ರಸಗೊಬ್ಬರ ಎಮ್.ಆರ್.ಪಿ ಬೆಲೆಗಿಂತ ಹೆಚ್ಚಿನ ಧರಕ್ಕೆ ಬಿಲ್ ಸಮೇತ ಮಾರಾಟ ಮಾಡಿರುತ್ತಾರೆ. ಈ ವಿಷಯವಾಗಿ ತಾಲೂಕಿನ ಸಹಾಯಕ ಕೃಷಿ ಅಧಿಕಾರಿಗಳಿಗೆ ಆಧಾರ ಸಮೇತ ದೂರು ನೀಡಿದರೂ ನಮ್ಮನ್ನು ವಿತರಕರ ಅಂಗಡಿಗೆ ಬನ್ನಿ ಎಂದು ತಿಳಿಸಿರುತ್ತಾರೆ. ಎಲ್ಲಾ ಸರಿಯಾಗಿದೆ ಎಂದು ಹೇಳಿದ್ದು, ತದನಂತರದಲ್ಲಿ ನಮ್ಮ ಹತ್ತಿರ ಬಂದು ವಿತರಕರ ತಪ್ಪು ಏನು ಇಲ್ಲ ಎಂದು ನಮ್ಮ ಮನವೊಲಿಸಲು ಪ್ರಯತ್ನಿಸಿರುತ್ತಾರೆ. ಕಣ್ಣೆದುರಿಗೆ ಬಿಲ್ಲುಗಳು ಮತ್ತು ಚೀಲದ ಮೇಲಿನ ಎಮ್.ಆರ್.ಪಿ ಬೆಲೆ ಇದ್ದರೂ ಸಹ ಅವರು ವಿತರಕರ ಪರವಾಗಿ ಮಾತನಾಡುವುದು ಅನುಮಾನಕ್ಕೆ ಕಾರಣವಾಗಿದೆ. ಆದ್ದರಿಂದ ಅಧಿಕಾರಿಗಳ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಿ.ವಿ.ಗೌಡ. ರೈತ ಮುಖಂಡರಾದ ಕೊಟ್ಟೂರು ರಮೇಶ, ಆದೋನಿ ರಂಗಪ್ಪ, ತಿಮ್ಮಪ್ಪ, ಶ್ರೀಧರ, ಗಾದಿಲಿಂಗಪ್ಪ, ಜಡೆಪ್ಪ, ಧರ್ಮಣ್ಣ, ಶ್ರೀಮಂತಸ್ವಾಮಿ, ಕೆ.ಎಂ.ಅಡಿವೆಯ್ಯಸ್ಚಾಮಿ, ಗುಡಿಸಲಿ ರಾಜಾಸಾಬ್, ಬುರ್ರೆಡ್ಡಿ ಬಸವರಾಜ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















