ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ನಾಳೇವರೆಗೂ (ಆಗಸ್ಟ್ 05) ತಡೆಹಿಡಿಯುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ನಾಳೆಯ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಮಹತ್ವದ ಆದೇಶ ನೀಡಿತ್ತು. ಆದರೆ ಹೈಕೋರ್ಟ್ ಆದೇಶದ ನಡುವೆಯೂ ನಾಳೆಯಿಂದ ಅನಿರ್ದಿಷ್ಟಾವದಿ ಮುಷ್ಕರ ಆರಂಭಿಸುವುದಾಗಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಖಚಿತಪಡಿಸಿದ್ದಾರೆ. ಹೀಗಾಗಿ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಸಾರಿಗೆ ಬಸ್ ರಸ್ತೆಗಳಿಯುವುದಿಲ್ಲ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾರಿಗೆ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್, ಕೋರ್ಟ್ ಆದೇಶ ನಮಗೆ ತಲುಪಿದ್ದು, ಆದೇಶ ಏನಿದೆ ಅನ್ನೋದು ಗೊತ್ತಿಲ್ಲ. ನಾಳೆ ಎಂದಿನಂತೆ ನಮ್ಮ ಮುಷ್ಕರ ನಡೆಯುತ್ತೆ. ಬೆಳಿಗ್ಗೆ 6 ಗಂಟೆಯಿಂದ ಮುಷ್ಕರ ನಡೆಯುತ್ತೆ. ಲಾಯರ್ ಅಭಿಪ್ರಾಯ ಪಡೆದು ನಾಳೆ ನಮ್ಮ ಜಂಟಿಕ್ರಿಯಾ ಸಮಿತಿ ಮುಂದಿಟ್ಟು ತೀರ್ಮಾನ ಮಾಡುತ್ತೇವೆ. ಇವತ್ತು ಮುಷ್ಕರ ವಾಪಸ್ಸು ಪಡೆಯುವ ಮಾತಿಲ್ಲ. ನಾಳೆ ಬೆಳಿಗ್ಗೆ 6 ಗಂಟೆಯಿಂದ ಎಂದಿನಂತೆ ಮುಷ್ಕರ ನಡೆಯುತ್ತೆ ಎಂದು ಸ್ಪಷ್ಟಪಡಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















