” ನಮ್ಮ ನಾಡಿನ ಜನ ಇಡೀ ವಿಶ್ವದ ಪತ್ರಿಕೆಗಳನ್ನು ಇರುವಲ್ಲಿಯೇ ನೋಡಬೇಕು ಹಾಗೂ ನಮ್ಮ ಕನ್ನಡ ನಾಡಿನ ಪತ್ರಿಕೆಗಳು ವಿಶ್ವವೆಲ್ಲಾ ನೋಡಬೇಕು ” : ಕನ್ನಡ ಅಭಿಮಾನಿ, ಶಾಲಾ ಶಿಕ್ಷಕ ಹಾಗೂ ಪತ್ರಿಕಾ ಸಂಗ್ರಹಕಾರ ಕಲ್ಯಾಣ್ ಕುಮಾರ್.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹಿರೇಕಟ್ಟಿಗೆನಹಳ್ಳಿ ಗ್ರಾಮದ ಅರ್ಚಕರಾದ ನರಸಿಂಹಮೂರ್ತಿ ಹಾಗೂ ಲಕ್ಷ್ಮಿ ನರಸಮ್ಮನವರ ಮೂವರು ಮಕ್ಕಳಲ್ಲಿ ಹಿರಿಯವರಾದ ಕೆ .ಎನ್. ಕಲ್ಯಾಣ್ ಕುಮಾರ್ ರವರು ಹುಟ್ಟಿದ್ದು ದಿ 6.8.1972.
ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವಗ್ರಾಮದ ಸರ್ಕಾರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಕೋಲಾರ ಜಿಲ್ಲೆಯ ಮದನಹಳ್ಳಿ ಕ್ರಾಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದ ಇವರು
ಕಾಲೇಜು ಶಿಕ್ಷಣವನ್ನು ಚಿಂತಾಮಣಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ವೃತ್ತಿ ಶಿಕ್ಷಣವನ್ನು ಕೋಲಾರದ ಸರ್ಕಾರಿ ಟಿಸಿಹೆಚ್ ಕಾಲೇಜಿನಲ್ಲಿ ಮಾಡಿದರು.
ಕುಟುಂಬದ ಹಿರಿಯ ಅಜ್ಜಂದಿರಾದ ಎಚ್. ಕೆ .ಎಸ್. ನಂಜುಂಡಯ್ಯನವರ ಜ್ಞಾನ ದಾಹಕ್ಕಾಗಿ ಬರುತ್ತಿದ್ದ ಕೆಲವು ಪತ್ರಿಕೆಗಳು ಎಳೆಯ ಕಲ್ಯಾಣ್ ಕುಮಾರರವರ ಮೇಲೆ ಪ್ರಭಾವ ಬೀರಿ ಇಂದಿನ ಪತ್ರಿಕಾ ಸಂಗ್ರಹಕ್ಕೆ ಭದ್ರ ಬುನಾದಿಯಾಯಿತು.
ಆಗೊಂದು – ಈಗೊಂದು ಪತ್ರಿಕೆ ನೋಡುತ್ತಿದ್ದ ಕಲ್ಯಾಣ್ ಕುಮಾರ್ ಅವರು ತಾನು 1995ರಲ್ಲಿ ಶಿಕ್ಷಕ ವೃತ್ತಿಗೆ ಸೇರಿದ ಮೇಲೆ ಪ್ರತಿನಿತ್ಯವೂ ತಮ್ಮ ಗ್ರಾಮದಿಂದ ನಗರವನ್ನು ಹಾದು ತನ್ನ ಕೆಲಸದ ಸ್ಥಳಕ್ಕೆ ಹೋಗಬೇಕಾದುದರಿಂದ ಬಸ್ಸಿಗಾಗಿ ಕಾಯುವ ಸಮಯವನ್ನು ವ್ಯರ್ಥ ಮಾಡದೆ ಬಸ್ ನಿಲ್ದಾಣದ ಮಳಿಗೆಗಳಲ್ಲಿ ಕಾಣುವ ಪತ್ರಿಕೆಗಳನ್ನು ಓದುವ ಮೂಲಕ ಅವುಗಳಲ್ಲಿರುವ ಅಪರೂಪದ ಲೇಖನ, ಕವನ ,ಕಥೆಗಳನ್ನು ಕಾಪಾಡುವ ನಿಟ್ಟಿನಲ್ಲಿ ಆಯಾಪತ್ರಿಕೆಗಳನ್ನು ಸಂಗ್ರಹಿಸುತ್ತಾ ಸಾಗಿದರು.
ನಂತರದ ದಿನಗಳಲ್ಲಿ ಪ್ರವಾಸ ಅಥವಾ ಇನ್ನಿತರ ಕೆಲಸಗಳಿಗೆ ಹೋದಾಗ ಅಲ್ಲಿನ ಸ್ಥಳೀಯ ವಿಚಾರಗಳನ್ನು ತಿಳಿಯಲು ಪತ್ರಿಕೆಗಳನ್ನು ಕೊಳ್ಳುತ್ತಿದ್ದರು. ತಮ್ಮ ಸ್ವಂತ ಸ್ಥಳದಲ್ಲಿ ಕಾಣುವ ಒಂದೆರಡು ಪತ್ರಿಕೆಗಳನ್ನು ನೋಡುತ್ತಿದ್ದ ಅವರು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ರೀತಿಯ ಶಿರೋನಾಮೆಗಳನ್ನು ಹೊಂದಿರುವ ಪತ್ರಿಕೆಗಳು ಕಂಡಾಗ ಆಶ್ಚರ್ಯ ಚಕಿತರಾದ ಇವರು ಅಂದಿನಿಂದ ಪತ್ರಿಕೆಗಳನ್ನು ಸಂಗ್ರಹಿಸುವ ಹುಚ್ಚು ಹವ್ಯಾಸಕ್ಕೆ ತೊಡಗಿಕೊಂಡರು. ಈ ಸಂಗ್ರಹದ ಗೀಳಿನಿಂದಾಗಿ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಿಕ, ದ್ವೈಮಾಸಿಕ, ತ್ರೈ, ಚಾತುರ್ಮಾಸಿಕ, ಷಣ್ಮಾಷಿಕ ,ವಾರ್ಷಿಕ ಈ ರೀತಿಯ ಪತ್ರಿಕೆಗಳನ್ನು ಸಂಗ್ರಹಿಸುತ್ತಾ ತಮ್ಮ ಪತ್ರಿಕಾ ಬಂಡಾರವನ್ನು ಹೆಚ್ಚು ಮಾಡಿಕೊಳ್ಳುತ್ತಾ ಹೋದರು. ಬರು ಬರುತ್ತಾ ಮೂರು ದಶಕಗಳಿಂದೀಚೆಗೆ ಬಂದಿರುವ ಬಹುತೇಕ ಪತ್ರಿಕೆಗಳನ್ನು ಒಂದಿಲ್ಲೊಂದು ರೀತಿಯಿಂದ ಕಷ್ಟಪಟ್ಟು ಸಂಗ್ರಹಿಸಿದರು.

ಮನೆಯಲ್ಲಿ ಸಂಗ್ರಹವಾದ ನೂರಾರು ಸಂಖ್ಯೆಯ ಪತ್ರಿಕೆಗಳನ್ನು ಕಂಡ ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಥಮ ಜಿಲ್ಲಾ ಸಾಹಿತ್ಯ ಸಮ್ಮೇಳನ ಶಿಡ್ಲಘಟ್ಟದಲ್ಲಿ ನಡೆದಾಗ ಅಯೋಜಕರೊಂದಿಗೆ ಮಾತನಾಡಿ ತಮ್ಮ ಪತ್ರಿಕೆಗಳ ಸಂಗ್ರಹವನ್ನು ಪ್ರದರ್ಶನ ಮಾಡಿದರು . ಅಲ್ಲಿ ನಾಡಿನ ಪ್ರಸಿದ್ಧ ಕವಿಗಳಾದ ಚಂದ್ರಶೇಖರ್ ಪಾಟೀಲರು ,ಬಸವಾರಾಧ್ಯರು , ಬಿ. ಆರ್. ಲಕ್ಷ್ಮಣರಾಯರು ಮುಂತಾದ ಸಾಹಿತ್ಯ ಕೃಷಿಕರು ಹಾಗೂ ಕನ್ನಡ ಅಭಿಮಾನಿಗಳು ಕಂಡು ಬೆಚ್ಚಿ ಇಷ್ಟೊಂದು ಪತ್ರಿಕೆಗಳು ನಮ್ಮ ನಾಡಿನಲ್ಲಿವೆಯೆ ಎಂದು ಹುಬ್ಬೇರಿಸಿದರು.
ಇವರ ಮುಖಭಾವವನ್ನು ಅರಿತ ನಮ್ಮ ಪತ್ರಿಕಾ ಅಭಿಮಾನಿ ಕಲ್ಯಾಣ್ ಕುಮಾರ್ ಅವರು ಅಂದಿನಿಂದ ದುಪ್ಪಟ್ಟು ಪತ್ರಿಕೆಗಳನ್ನು ಸಂಗ್ರಹಿಸುವ ಸಾಹಸಕ್ಕೆ ಧುಮುಕಿದರು. ಇದರ ಫಲವಾಗಿ ನಾಡಿನ ಅನೇಕ ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ಪತ್ರ ಬರೆಯುವ ಮುಖೇನ ಅವರ ಕಾಲದ ಪತ್ರಿಕೆಗಳನ್ನು ಸಂಗ್ರಹಿಸುವ ಮನಸ್ಸು ಮಾಡಿದರು ಹಾಗೂ ರಾಜ್ಯದ ನೊಂದಣಿಯಾದ ಪತ್ರಿಕೆಗಳ ವಿಳಾಸವನ್ನು ತಿಳಿದು ಆಯಾ ಪತ್ರಿಕೆಗಳ ಸಂಪಾದಕರನ್ನು ಅಥವಾ ಕುಟುಂಬಸ್ಥರನ್ನು ಭೇಟಿ ಮಾಡುವ ಮೂಲಕ ಅವರಲ್ಲಿರುವ ಪತ್ರಿಕೆಗಳನ್ನು ಪಡೆದುಕೊಂಡರು.

ಹೀಗೆಯೇ ಸಾಗಿದ ಇವರ ಪತ್ರಿಕಾ ಪ್ರೀತಿ ಬರೀ ಕನ್ನಡ ನಾಡಿಗೆ, ಕನ್ನಡ ಭಾಷೆಗೆ ಸೀಮಿತವಾಗದೆ ಇಡೀ ವಿಶ್ವದ ವಿವಿಧ ದೇಶ ಭಾಷೆಗಳ ಪತ್ರಿಕೆಗಳನ್ನು ಸಂಗ್ರಹಿಸುವ ಸಾಹಸದ ಕೆಲಸಕ್ಕೆ ಕೈ ಹಾಕಿದರು. ಇದಕ್ಕಾಗಿ ದೇಶವಿದೇಶಗಳ ಪತ್ರಿಕಾ ಸಂಗ್ರಹಕಾರ ಮಾಹಿತಿ ಕಲೆ ಹಾಕಿ ಅವರುಗಳನ್ನು ಈಗಿನ ವಿವಿಧ ಮಾಧ್ಯಮಗಳ ಮೂಲಕ ಸಂಪರ್ಕಿಸಿ ಅನೇಕ ಭಾಷೆಯ ಪತ್ರಿಕೆಗಳನ್ನು ಕೊಂಡುಕೊಂಡರು. ಪತ್ರಿಕೆ ಸಂಗ್ರಹಕಾರರ ಆಶಯವನ್ನು ಅರಿತ ಇವರು ತನ್ನ ನಾಡಿನ ಪತ್ರಿಕೆಗಳನ್ನು ಹತ್ತಾರು ಸಂಖ್ಯೆಯಲ್ಲಿ ಸಂಗ್ರಹಿಸುತ್ತಾ ಅವುಗಳನ್ನು ಬೇರೆ ಬೇರೆ ಭಾಷೆಯ ಪತ್ರಿಕಾ ಸಂಗ್ರಹಕಾರರಿಗೆ ಕಳುಹಿಸಿಕೊಡುವ ಮೂಲಕ ಅವರಲ್ಲಿರುವ ಪತ್ರಿಕೆಗಳನ್ನು ಪಡೆದುಕೊಂಡರು. ಇದರ ಫಲದಿಂದಾಗಿ ಇಂದು ಸುಮಾರು ಸಾವಿರಾರು ಬೇರೆ ಬೇರೆ ಭಾಷೆ ಪತ್ರಿಕೆಗಳು ಸಂಗ್ರಹವಾಗಲು ಕಾರಣವಾಯಿತು.
ಇವರ ಪತ್ರಿಕಾ ಪ್ರದರ್ಶನ ಜಿಲ್ಲಾ ಸಾಹಿತ್ಯ ಸಮ್ಮೇಳನದಿಂದ ಪ್ರಾರಂಭವಾಗಿ ನಾಡಿನಾದ್ಯಂತ ನಡೆಯುವ ಅನೇಕ ಸಾಹಿತ್ಯ ಸಮ್ಮೇಳನಗಳು ಹಾಗೂ ಸಂಘ ಸಂಸ್ಥೆಗಳ ,ಶಿಕ್ಷಣ ಸಂಸ್ಥೆಗಳ ಸಮಾರಂಭಗಳಲ್ಲಿ ಪತ್ರಿಕಾ ಅಭಿಮಾನಿಗಳು ನೋಡಲು ಹಾಗೂ ಮುಂದಿನ ಪೀಳಿಗೆಯು ಕನ್ನಡ ಪತ್ರಿಕಾ ಲೋಕದ ಮಹಾಸಾಗರವನ್ನು ನೋಡಿ ಆನಂದಿಸಲು ಇದುವರೆಗೂ ಸುಮಾರು 15 ವರ್ಷಗಳಿಂದ ನಿರಂತರವಾಗಿ ರಾಜ್ಯದ ಮೂಲೆ ಮೂಲೆಗಳಲ್ಲೂ, ಗಡಿ ರಾಜ್ಯಗಳಲ್ಲೂ ಹಾಗೂ ವಿದೇಶವಾದ ಸಿಂಗಾಪುರದ ದೇಶದಲ್ಲೂ ಸಹ ತಮ್ಮ ಸ್ವಂತ ಖರ್ಚಿನಲ್ಲಿ ಕನ್ನಡಮ್ಮನ ಅನನ್ಯ ಸೇವೆಯನ್ನು ಪತ್ರಿಕೆಗಳ ಪ್ರದರ್ಶನ ಮಾಡುವ ಮೂಲಕ ಕುವೆಂಪುರವರ ಮಾತಿನಂತೆ ತಾಯಿ ಅಪ್ಪುಗೆಯಂತೆ ಬಲು ಸೊಗಸು ಮೆಯ್ಗೆ ಎಂಬಂತೆ ಮಾಡುತ್ತಿದ್ದಾರೆ.
ನಾಡಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ಪ್ರದರ್ಶನದ ವೇಳೆ ಗಣ್ಯಾತಿ ಗಣ್ಯ ವ್ಯಕ್ತಿಗಳು, ಮಂತ್ರಿಗಳು, ಶಾಸಕರು ಮುಖ್ಯಮಂತ್ರಿಗಳು, ಕನ್ನಡ ಪತ್ರಿಕೆ ಅಭಿಮಾನಿಗಳು, ಅನೇಕ ಸಂಪಾದಕ ಮಿತ್ರರು, ಪತ್ರಕರ್ತರು, ಅನೇಕ ಮಠಾಧಿಪತಿಗಳು ಇವರ ಸಂಗ್ರಹವನ್ನು ನೋಡಿ ಖುಷಿಪಟ್ಟು ಹಾರೈಸಿದ್ದಾರೆ .ಇವರ ಸಂಗ್ರಹದಲ್ಲಿ ಶತಮಾನಕ್ಕೂ ಹಳೆಯದಾದ ಅನೇಕ ಕನ್ನಡ, ಅನ್ಯಭಾಷೆಯ ಪತ್ರಿಕೆಗಳ ಸಂಗ್ರಹವಿದೆ. ಇಷ್ಟೆಲ್ಲಾ ಪತ್ರಿಕಾ ಸಂಗ್ರಹ/ ಪ್ರದರ್ಶನ ಸೇವೆ ಮಾಡುತ್ತಿರುವ ಇವರಿಗೆ ನಾನು ಆಯ್ಕೆ ಮಾಡಿಕೊಂಡಿರುವ ದಾರಿ ಸುಲಭವಾಗಿದ್ದಲ್ಲ ಎನ್ನುತ್ತಾರೆ. ಪ್ರತಿ ಸಮ್ಮೇಳನಗಳಲ್ಲೂ ಯಾವುದೇ ವ್ಯಾಪಾರದ ದೃಷ್ಟಿ ಇರದ ಇವರ ಪತ್ರಿಕೆಗಳ ಪ್ರದರ್ಶನಕ್ಕೆ ಆಯೋಜಕರನ್ನು ಉಚಿತ ಮಳಿಗೆ ಒಂದನ್ನು ದಯಪಾಲಿಸಲು ಮನವಿ ಮಾಡಿ ಕೇಳಿದರೆ ದುಡ್ಡು ಕೊಟ್ಟರೆ ಮಾತ್ರ ಮಳಿಗೆ ಪುಗಸಟ್ಟೆ ಸಿಗುವುದಿಲ್ಲ ಎಂಬ ಉತ್ತರಕ್ಕೆ ಬೇಸತ್ತ ಇವರು ಪ್ರತಿ ಪ್ರದರ್ಶನದ ಮಳೆಗೆಯ ಹಣವನ್ನು ನೀಡುತ್ತಾ ಕನ್ನಡ ಅಭಿಮಾನಿಗಳಿಗೆ ಪತ್ರಿಕೆಯ ಉಚಿತ ಪ್ರದರ್ಶನ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಮಾಡಿದರೂ ಪ್ರದರ್ಶನದ ಮಹತ್ವವನ್ನು ಅರಿಯದ ಆಯೋಜಕರು ಕನಿಷ್ಠ ಪಕ್ಷ ಸಮ್ಮೇಳನದಲ್ಲಿ ಪ್ರದರ್ಶನ ಮಾಡಿದ ಗುರುತಿಗಾಗಿ ಪಾಲ್ಗೊಂಡಿದ್ದಕ್ಕೆ ಭಾಗವಹಿಸಿದ ಪತ್ರವನ್ನು ನೀಡುವುದಿಲ್ಲವೆಂದು ಬೇಸರಿಕೆ ವ್ಯಕ್ತಪಡಿಸುತ್ತಾರೆ. ತಮ್ಮ ಕಷ್ಟವನ್ನು ತಿಳಿಯದೆ ಸುತ್ತಮುತ್ತಲಿನ ಸ್ನೇಹಿತರು ಈ ಪ್ರದರ್ಶನದಿಂದ ಬೇಕಾದಷ್ಟು ಲಾಭವಿದೆಯೆಂದು ಆಡಿಕೊಳ್ಳುತ್ತಾರೆಂದು ಹೇಳುತ್ತಾರೆ. ಪತ್ರಿಕೆಗಳನ್ನು ನಡೆಸುವ ಎಷ್ಟೋ ಸಂಪಾದಕರನ್ನು ಭೇಟಿ ಮಾಡಿ ತಮ್ಮ ಪತ್ರಿಕೆಗಳ ಒಂದಷ್ಟು ಹಳೆಯ ಸಂಚಿಕೆಗಳನ್ನು ಕಳಿಸಿಕೊಡಿ ಇವುಗಳನ್ನು ಪ್ರದರ್ಶನ ಮಾಡುವೆ ಇದರಿಂದ ಪತ್ರಿಕೆ ಓದುವವರನ್ನು ಹಾಗೂ ಮುಂದಿನ ಪೀಳಿಗೆಗೆ ಇದರ ಮಹತ್ವವನ್ನು ತಿಳಿಸಲು ಸಹಾಯವಾಗುತ್ತದೆ ಎಂದರೆ ಇದರಿಂದ ನಿಮಗೇನು ಲಾಭ ಎನ್ನುವ ಸಂಪಾದಕ ಮಿತ್ರರು ಒಂದು ಪತ್ರಿಕೆಯನ್ನೂ ಕಳಿಸಿಕೊಡದೆ ಸುಮ್ಮನಾಗುತ್ತಾರೆ. ಕೆಲವೊಮ್ಮೆ ಪತ್ರಿಕಾ ಪ್ರದರ್ಶನದ ವೇಳೆ ಬರುವ ಪತ್ರಿಕಾ ಸಂಪಾದಕರು ಗಟ್ಟಿ ಧ್ವನಿಯಲ್ಲಿ ನಮ್ಮ ಪತ್ರಿಕೆ ಯಾಕೆ ಇಟ್ಟಿಲ್ಲ ಎಂದು ಪ್ರಶ್ನಿಸುತ್ತಾರೆ? ದಯವಿಟ್ಟು ನನಗೆ ನಿಮ್ಮ ಪತ್ರಿಕೆಗಳನ್ನು ಕೊಡಿ ಪ್ರದರ್ಶಿಸುವೆ ಎಂದರೆ ಅದಕ್ಕೆ ಉತ್ತರವಿಲ್ಲದೆ ಮರೆಯಾಗುತ್ತಾರೆ. ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಕೆಲವು ಮಾಧ್ಯಮ ಮಿತ್ರರು ಟಿವಿ ಅಥವಾ ಪತ್ರಿಕೆಗಳಲ್ಲಿ ವರದಿ ಮಾಡಲು ಬಂದಾಗ ನನಗಿಂತಲೂ ಹೆಚ್ಚಾಗಿ ಪೋಸು ಕೊಡುವ ಕನ್ನಡದ ಕಟ್ಟಾಳುಗಳೆನಿಸಿಕೊಂಡವರು ನನಗೆ ಭರಪೂರ ಸಹಾಯದ ಮಾತುಗಳನ್ನು ಹೇಳಿ ಮತ್ತೆಂದೂ ಸಿಗದಂತೆ ಮಾಯವಾಗುತ್ತಾರೆ.
ಇದುವರೆಗೂ ಲಕ್ಷಾಂತರ ರೂ. ಗಳನ್ನು ಪತ್ರಿಕಗಳ ಸಂಗ್ರಹಕ್ಕಾಗಿ ವ್ಯಯಿಸಿರುವ ಇವರು ಸ್ವಂತ ಸೂರಿಲ್ಲದೆ ಬಾಡಿಗೆ ಮನೆಗಳಲ್ಲಿಯೇ ವಾಸ ಮಾಡುತ್ತಿದ್ದಾರೆ.
ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗೆ ಆಸೆ ಪಡದ ಇವರಿಗೆ ತಾನಾಗಿಯೇ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ , ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ ಹಾಗೂ ಹಣಕ್ಕೆ ಆಸೆ ಪಡದ ಕೆಲವೊಂದು ಸಂಸ್ಥೆಗಳು ಪತ್ರಿಕಾ ಪ್ರದರ್ಶನದ ಸೇವೆಯನ್ನು ನಿಸ್ಪೃಹತೆಯಿಂದ ಗುರುತಿಸಿ ಸನ್ಮಾನಿಸಿದ್ದಾರೆ ಎಂದು ಅಭಿಮಾನದಿಂದ ಹೇಳುತ್ತಾರೆ. ತಮ್ಮ ಇದುವರೆಗಿನ ನಿರಂತರ ಪ್ರದರ್ಶನಗಳಲ್ಲಿ ಆದ ಅನೇಕ ಕಹಿ ಘಟನೆಗಳನ್ನು ಜ್ಞಾಪಿಸಿಕೊಳ್ಳಲು ಬೇಸರ ವ್ಯಕ್ತಪಡಿಸುತ್ತಾರೆ. ಅಷ್ಟೊಂದು ಮಟ್ಟಿಗೆ ಕೆಲವೊಂದು ಘಟನೆಗಳು ಇವರನ್ನು ಘಾಸಿ ಮಾಡಿದೆ.
ಇವೆಲ್ಲದರ ಹೊರತಾಗಿ ತನ್ನ ಮಡದಿ ಮಂಜುಳಾ, ಮಕ್ಕಳಾದ ಪವನ್ ಕಲ್ಯಾಣ್ ಮತ್ತು ಭಾವನಾ ಕಲ್ಯಾಣ್ ಹಾಗೂ ಕುಟುಂಬದ ಇನ್ನಿತರ ಸದಸ್ಯರು ಕಲ್ಯಾಣ್ ಕುಮಾರ್ ಅವರು ಮಾಡುವ ಕೆಲಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಇದು ನನ್ನ ಪುಣ್ಯ ಎಂದು ಸಹೃದಯದಿಂದ ಒಪ್ಪುತ್ತಾರೆ.
” ನಮ್ಮ ನಾಡಿನ ಜನ ಇಡೀ ವಿಶ್ವದ ಪತ್ರಿಕೆಗಳನ್ನು ಇರುವಲ್ಲಿಯೇ ನೋಡಬೇಕು ಹಾಗೂ ನಮ್ಮ ಕನ್ನಡ ನಾಡಿನ ಪತ್ರಿಕೆಗಳು ವಿಶ್ವವೆಲ್ಲಾ ನೋಡಬೇಕು. ” ಎಂಬ ಇವರ ಮಾತಿನ ಭಾವನಾತ್ಮಕ ನುಡಿ ಕೇಳುಗರ ಹೃದಯ ತಟ್ಟದೆ ಇರದು. ಇಂತಹ ಕನ್ನಡ ಅಭಿಮಾನಿ, ಶಾಲಾ ಶಿಕ್ಷಕ ಹಾಗೂ ಪತ್ರಿಕಾ ಸಂಗ್ರಹಕಾರ ಕಲ್ಯಾಣ್ ಕುಮಾರ್ ಅವರ ವಿಶ್ವ ಕನ್ನಡದ ಪ್ರೀತಿಗೆ ನಮ್ಮ ಸಲಾಮ್…
ಎಲೆಮರೆಕಾಯಿಯಂತೆ ಕನ್ನಡಮ್ಮನ ಕೆಲಸವನ್ನು ತನ್ನ ಉಸಿರಾಗಿಸಿಕೊಂಡು ಬದುಕುತ್ತಿರುವ ಇವರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಅವರ ನಿರಂತರ ಸಂಗ್ರಹ ಬತ್ತದಂತೆ ಹಣಕಾಸಿನ ಸಹಾಯ ಮಾಡುವ ಮೂಲಕ ಕೈಜೋಡಿಸಬೇಕಾಗಿದೆ. ಇದು ನಮ್ಮೆಲ್ಲರ ಹೊಣೆ. ಇವರಿಗೆ ಶುಭವಾಗಲಿ
ಅನೇಕರಿಗೆ ಒಂದಿಲ್ಲೊಂದು ರೀತಿಯಿಂದ ಪ್ರಶಸ್ತಿ ಪುರಸ್ಕಾರಗಳನ್ನು ಮಾಡುವ ವ್ಯಕ್ತಿ, ಸಂಘ ಸಂಸ್ಥೆಗಳ ಗಮನಕ್ಕೆ…
ಯಾರಿಂದಲೂ ಯಾವುದೇ ರೀತಿಯ ಸಹಾಯವನ್ನು ಯಾರಲ್ಲೂ ಕೋರದೆ ಸುಮಾರು ನೂರಾರು ಸಂಖ್ಯೆಯಲ್ಲಿ 25 ವರ್ಷಗಳಿಂದ ಹಳ್ಳಿಯಿಂದ ಹಿಡಿದು ಮಹಾನಗರಗಳವರೆಗೂ ಸ್ವಂತ ಹಣದಲ್ಲಿ ಸಾವಿರಾರು ವಿಶ್ವದ ಪತ್ರಿಕೆಗಳನ್ನು ಸಂಗ್ರಹಿಸುತ್ತಾ ಪ್ರದರ್ಶನ ಮಾಡುತ್ತಿರುವ ನನಗೆ ಕನಿಷ್ಠ ಮೆಚ್ಚುಗೆ ನುಡಿಗಳನ್ನು ಆಡದೇ ಇರುವುದು ಅತ್ಯಂತ ಘೋರ ವಿಪರ್ಯಾಸ.
ಕನ್ನಡ ಮತ್ತು ಭಾರತೀಯ ಇತರೆ ಭಾಷೆಗಳು ಪತ್ರಿಕೆಗಳನ್ನುಕೊಂಡು ವಿಶ್ವದ ಮೂಲೆ ಮೂಲೆಗೆ ಅಲ್ಲಿನ ಪತ್ರಿಕಾ ಸಂಗ್ರಹಕಾರರಿಗೆ ತಲುಪಿಸುತ್ತಿರುವ ನಾನು ಇನ್ಯಾವ ರೀತಿ ಮೆಚ್ಚುಗೆ ಕೆಲಸ ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ.
ನಾನು ಮಾಡುವ ಪತ್ರಿಕಾ ಪ್ರದರ್ಶನಗಳಲ್ಲಿ ಭೇಟಿ ನೀಡುವ ವ್ಯಕ್ತಿಗಳು ಪಂಕಾನು ಪುಂಕವಾಗಿ ನಿಮಗೆ ನಮ್ಮ ಅಭಯಹಸ್ತವಿದೆ, ನಿಮ್ಮನ್ನು ಮುಂದೆ ನಡೆಯುವ ನಮ್ಮ ಅದ್ದೂರಿ ವೇದಿಕೆ ಕಾರ್ಯಕ್ರಮದಲ್ಲಿ ಗುರುತಿಸುತ್ತೇವೆ ಎಂದು ಹೇಳುತ್ತಾ, ನನ್ನ ಪತ್ರಿಕಾ ಪ್ರದರ್ಶನದ ಹಿನ್ನೆಲೆಯಲ್ಲಿ ನನ್ನಿಂದಲೇ ಇವರು ಎಂದು ಪೋಸು ಕೊಡುತ್ತಾ ಫೋಟೋ ಕ್ಲಿಕ್ಕಿಸಿಕೊಳ್ಳುವ ಅನೇಕ ವ್ಯಕ್ತಿಗಳು ನಾಚಿಕೆಯಿಲ್ಲದೆ ಮರೆಯಾಗಿದ್ದಾರೆ.
ಇನ್ನೂ ಕೆಲವು ವ್ಯಕ್ತಿಗಳು, ಸಂಘ-ಸಂಸ್ಥೆಗಳಂತೂ ನಾ ಮುಂದು ತಾ ಮುಂದು ಎಂದು ನೇರವಾಗಿ ಫೋನ್ ಮಾಡುವ ಮೂಲಕ ಹಾಗೂ ಸಂಘ ಸಂಸ್ಥೆಗಳ ಮಹಾನ್ ಸಾಧನೆಗಳ ಪಟ್ಟಿಯನ್ನು ಪೋಸ್ಟ್ ಮಾಡುವ ಮೂಲಕ ನಾವು ನಿಮ್ಮ ಮಹತ್ಸಾದನೆಯನ್ನು ಇದುವರೆಗೂ ಯಾರೂ ಮಾಡದ ಅದ್ದೂರಿ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿಗಳು, ಚಲನಚಿತ್ರ ನಟರು, ಮಹಾನ್ ಗಣ್ಯ ಸಾಧಕರ ನಡುವೆ ನಿಮ್ಮನ್ನು ಗುರುತಿಸುತ್ತೇವೆ ಎಂದು ಹೇಳುತ್ತಾ, ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮ ನಡೆಸುವುದೇ ಒಂದು ಸಾಹಸವಾಗಿದ್ದು ನಿಮ್ಮಂತವರನ್ನು ಗುರುತಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡಲೇ ಬೇಕಾಗಿರುವುದರಿಂದ, ನಮ್ಮ ಕಾರ್ಯಕ್ರಮದ ಖರ್ಚು ವೆಚ್ಚಗಳಿಗೆ ತನು ಮನಕ್ಕಿಂತ ನಿಮ್ಮಿಂದ ಹೆಚ್ಚಿನ ಹಣ ಸಹಾಯವನ್ನು ಕೋರುತ್ತೇವೆ ಎಂದು ಪ್ರತ್ಯಕ್ಷವಾಗಿ ಕೇಳುವವರಿಂದ ಅತ್ಯಂತ ದುಃಖದಿಂದ, ನಾಚಿಕೆಯಿಂದ ಬದುಕುತ್ತಿದ್ದೇನೆ.

- ಕಲ್ಯಾಣ್ ಕುಮಾರ್ ಕೆ ಎನ್ ಶಿಕ್ಷಕರು, ವಿಶ್ವ ಪತ್ರಿಕಾ ಸಂಗ್ರಹಕಾರರು, ಹಿರೇಕಟ್ಟಿಗೇನಹಳ್ಳಿ ಅಂಚೆ,
ಚಿಂತಾಮಣಿ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ,
563128.
ಸಂಪರ್ಕ ಸಂಖ್ಯೆ 8660161546.































