ಬಳ್ಳಾರಿ / ಕಂಪ್ಲಿ: ಕೃಷ್ಣನ ಆದರ್ಶಗಳು ಸದಾ ಅನುಕರಣೀಯವಾಗಿವೆ ಎಂದು ಗ್ರಾ.ಪಂ ಉಪಾಧ್ಯಕ್ಷೆ ಸಾವಿತ್ರಮ್ಮ ಜಡೆ ಮಹಾದೇವ ಅಭಿಪ್ರಾಯ ಪಟ್ಟರು.
ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಗ್ರಾ.ಪಂ ಕಛೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಿಸಿದ ನಂತರ ಮಾತನಾಡಿ, ಮಹಾಭಾರತ ಹಾಗೂ ಭಗವದ್ಗೀತೆ ನೀಡುವ ಸಂದೇಶವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಧರ್ಮವನ್ನುಳಿಸುವಲ್ಲಿ ಕೃಷ್ಣನ ಪಾತ್ರ ಮಹತ್ವದ್ದಾಗಿದೆ. ಅಧರ್ಮವನ್ನು ನಾಶಗೊಳಿಸಲು ಕೃಷ್ಣ ಅವತಾರ ಪಡೆದ. ಶ್ರೀಕೃಷ್ಣರನ್ನು ಹಲವು ರೂಪಗಳಲ್ಲಿ ಕಾಣಲಾಗುತ್ತಿದೆ. ಭಕ್ತರು ಆಧ್ಯಾತ್ಮಿಕ ದೃಷ್ಟಿಯಲ್ಲಿ ಆತ ಆರಾಧಕ. ಕವಿಗಳಿಗೆ ಆತ ನಿರಂತರ ಪ್ರೇರಣೆ. ರಾಜಕೀಯ, ಐತಿಹಾಸಿಕವಾಗಿಯೂ ಆತ ಮಾದರಿ. ಒಬ್ಬ ನಿಪುಣ ಆಡಳಿತಗಾರನಾಗಿ ಶ್ರೀ ಕೃಷ್ಣ ಇತಿಹಾಸಕಾರರನ್ನು ಸೆಳೆದಿದ್ದಾನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಒ ಶಿಲ್ಪಾರಾಣಿ, ಗ್ರಾ.ಪಂ ಅಧ್ಯಕ್ಷೆ ಸೋಮೇಶ್ವರಿ ಪರಶುರಾಮ, ಸದಸ್ಯರಾದ ಡಿ.ಹುಲುಗಪ್ಪ, ಡಿ.ರಾಘವೇಂದ್ರ, ಡಿ.ಹನುಮೇಶ, ಮುಖಂಡರಾದ ಬಳ್ಳಾರಿ ಮಾಧವ, ಜಡೆ ಮಹಾದೇವ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















