ಕಲಬುರಗಿ: ಶ್ರಾವಣ ಮಾಸದ ನಿಮಿತ್ತ ಜಯನಗರ ಶಿವಮಂದಿರದಲ್ಲಿ ಜರುಗಿದ ಒಂದು ತಿಂಗಳು ಗುಡ್ಡಾಪೂರ ಶ್ರೀ ದಾನಮ್ಮ ದೇವಿಯ ಪುರಾಣ ಪ್ರವಚನದ ಮಹಾ ಮಂಗಲೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆ ಕಾರ್ಯಕ್ರಮವು ಆ.24 ರಂದು ಭಾನುವಾರ ಶಿವಮಂದಿರಲ್ಲಿ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ. ಲಿಂಗರಾಜ ಸಿರಗಾಪೂರ ತಿಳಿಸಿದ್ದಾರೆ.
ಕಳೆದ ಜುಲೈ 25 ರಂದು ಪ್ರಾರಂಭವಾಗಿರುವ ಗುಡ್ಡಾಪೂರ ಶ್ರೀ ದಾನಮ್ಮ ದೇವಿಯ ಪುರಾಣ ಯಶಸ್ವಿಯಾಗಿ ಜಯನಗರದ ಶಿವಮಂದಿರದಲ್ಲಿ ಪ್ರತಿ ದಿನ 7 ರಿಂದ 8 ಗಂಟೆವರೆಗೆ ನಡೆಯುತ್ತಿದೆ. ಯಾದಗಿರಿಯ ಅಬ್ಬೆ ತುಮಕೂರಿನ ಪುರಾಣ ಪಂಡಿತ ವೇದಮೂರ್ತಿ ಶ್ರೀ ತೋಟಯ್ಯ ಶಾಸ್ತ್ರಿ ಅವರು ಒಂದು ತಿಂಗಳು ಪುರಾಣ ನಡೆಸಿಕೊಡುತ್ತಿದ್ದಾರೆ. ಗುಡ್ಡಾಪೂರದ ಶ್ರೀ ದಾನಮ್ಮ ದೇವಿಯ ಜೀವನ ಚರಿತ್ರೆ ಮತ್ತು ಪವಾಡಗಳು ಹಾಗೂ ಬೇಡಿ ಬಂದ ಭಕ್ತರಿಗೆ ಕರುಣಿಸುವ ಮಹಿಮೆ ಕುರಿತು ವಿಸ್ತಾರವಾಗಿ ಪುರಾಣದ ಮೂಲಕ ತಿಳಿಸುತ್ತಿದ್ದಾರೆ ಎಂದರು. ಪುರಾಣ ಶಾಸ್ತ್ರದಲ್ಲಿ ಬರುವ ದಾನಮ್ಮನ ತೊಟ್ಟಿಲು, ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಅಷ್ಟೇ ಅಲ್ಲದೆ ಸುಮಾರು 500 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಿದ್ದು ವಿಶೇಷವಾಗಿತ್ತು. ಮಹಿಳೆಯರಿಗೆ ಸೀರೆ ಉಡಿಸಿ ಪದಗಳನ್ನು ಹಾಡಿಸಿದರು. ಪುರಾಣ ಕೇಳಲು ದಿನ ನಿತ್ಯ ನಗರದ ಬೇರೆ ಬೇರೆ ಬಡಾವಣೆಗಳ ಭಕ್ತರು, ಸಾರ್ವಜನಿಕರು, ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅದರಂತೆ ಒಂದು ತಿಂಗಳು ನಿರಂತರ ದಿನಾಲೂ ನೂರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 90 ಕ್ಕಿಂತಲೂ ಹೆಚ್ಚು ದಾನಿಗಳು ಪ್ರಸಾದ ದಾಸೋಹ ಮಾಡಿಸಿದ್ದಾರೆ. ಕಳೆದ ವರ್ಷಕ್ಕಿಂತಲೂ ಇದು ಹೆಚ್ಚು ಆಗಿದೆ ಎಂದರು.
ಅಂದು ನಡೆಯುವ ಮಹಾಮಂಗಲೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲು ಮುಗಳನಾಗಾಂವ ಕಟ್ಟಿಮನಿ ಸಂಸ್ಥಾನ ಹಿರೇಮಠದ ಪರಮ ಪೂಜ್ಯ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹಾಗೂ ಶ್ರೀನಿವಾಸ ಸರಡಗಿಯ ಲಕ್ಷೀಗುಡಿ ಶಕ್ತಿ ಪೀಠದ ಪೂಜ್ಯ ಡಾ. ಅಪ್ಪಾರಾವ ದೇವಿ ಮುತ್ಯಾ ಆಗಮಿಸುವರು. ನಂತರ ಪೂಜ್ಯರು ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡುವರು.ಪುರಾಣ ಪಂಡಿತ ವೇದಮೂರ್ತಿ ಶ್ರೀ ತೋಟಯ್ಯ ಶಾಸ್ತ್ರೀ ಅವರು ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಟ್ರಸ್ಟ್ ಗೌರವಾಧ್ಯಕ್ಷರು ಹಾಗೂ ಮಾಜಿ ಎಚ್ಕೆಇ ಸಂಸ್ಥೆಯ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೋನ್ನಳ್ಳಿ ಆಗಮಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ವಹಿಸುವರು. ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಸ್ವಾಗತಿಸುವರು. ಜಿ.ಜಿ.ವಣಿಕ್ಯಾಳ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿರುವರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ. ನಂತರ ಭಕ್ತಿ ಹಾಗೂ ಭಾವಗೀತೆಗಳ ಸಂಗೀತ ಕಾರ್ಯಕ್ರಮ ನಡೆಯುವುದು.
ಅಂದು ಜಯನಗರ ಸೇರಿದಂತೆ ಬೇರೆ ಬೇರೆ ಬಡಾವಣೆಯ ಹಿರಿಯರು, ಮಹಿಳೆಯರು, ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
- ಕರುನಾಡ ಕಂದ



















