ಶಿವಮೊಗ್ಗ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಯವರ ಸದೃಢ ನಾಯಕತ್ವದಲ್ಲಿ, ಕೇಂದ್ರ ಸರ್ಕಾರವು ಜನಾಕಾಂಕ್ಷೆಯಲ್ಲಿದ್ದ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸುಧಾರಣೆಗಳನ್ನು ಜಾರಿಗೆ ತಂದಿರುವುದು ದೇಶಾದ್ಯಂತ ಹರ್ಷ ಹಾಗೂ ಆಶಾಭಾವನೆ ಮೂಡಿಸಿದೆ. ಈ ನಿರ್ಧಾರವು ಕೇವಲ ತೆರಿಗೆ ವ್ಯವಸ್ಥೆಯ ಬದಲಾವಣೆಯಲ್ಲ, ಇದು ಆರ್ಥಿಕ ಪಾರದರ್ಶಕತೆ, ವ್ಯವಹಾರ ಸುಲಭತೆ ಮತ್ತು ಜನಸ್ನೇಹಿ ಆಡಳಿತದ ಹೊಸ ಅಧ್ಯಾಯವಾಗಿದೆ.
ಹಬ್ಬಗಳ ಋತುವಿನ ಸಡಗರದಲ್ಲಿ ಬಂದಿರುವ ಈ ಮಹತ್ವದ ಘೋಷಣೆ, ದೇಶದ ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಸಾಮಾನ್ಯ ಗ್ರಾಹಕರಿಗೆ ನಿಜವಾದ ದೀಪಾವಳಿ ಕಾಣಿಕೆಯಾಗಿದೆ. ಸುಧಾರಿತ ಜಿಎಸ್‌ಟಿ ಮೂಲಕ ತೆರಿಗೆ ದರಗಳಲ್ಲಿ ಸರಳೀಕರಣ, ತ್ವರಿತ ಅನುಮೋದನೆ ಪ್ರಕ್ರಿಯೆಗಳು ಮತ್ತು ವ್ಯಾಪಾರ ಸ್ನೇಹಿ ಕ್ರಮಗಳನ್ನು ಜಾರಿಗೆ ತರಲಾಗುತ್ತಿದ್ದು, ಇದು ಸಣ್ಣ ವ್ಯಾಪಾರಿಗಳು, ಮಧ್ಯಮ ವರ್ಗ ಮತ್ತು ಗ್ರಾಹಕರ ಹಿತವನ್ನು ಕಾಪಾಡುವ ಮಹತ್ವದ ಹೆಜ್ಜೆಯಾಗಿದೆ. “ಒಂದು ರಾಷ್ಟ್ರ – ಒಂದು ತೆರಿಗೆ – ಒಂದು ಮಾರುಕಟ್ಟೆ” ಎಂಬ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುವ ಈ ನಿರ್ಧಾರ, ಭಾರತದ ಆರ್ಥಿಕತೆಗೆ ಶಕ್ತಿ ನೀಡಿ ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸುವಲ್ಲಿ ಇದು ಐತಿಹಾಸಿಕ ಹೆಜ್ಜೆಯಾಗಿದೆ.
ಈ ಸುಧಾರಣೆಗಳು ಭಾರತದ ಆರ್ಥಿಕತೆಯನ್ನು ಮತ್ತಷ್ಟು ಸ್ಪರ್ಧಾತ್ಮಕ, ಪಾರದರ್ಶಕ ಹಾಗೂ ಜನಕೇಂದ್ರಿತಗೊಳಿಸುವಲ್ಲಿ ಕ್ರಾಂತಿಕಾರಕ ಪಾತ್ರ ವಹಿಸಲಿವೆ. ಸರಳ, ನ್ಯಾಯಸಮ್ಮತ ಮತ್ತು ಬಲಿಷ್ಠ ಆರ್ಥಿಕ ವ್ಯವಸ್ಥೆಗಾಗಿ ಜಿಎಸ್‌ಟಿಯನ್ನು ಜನಸ್ನೇಹಿಯಾಗಿ ರೂಪಿಸಿದ ಕೇಂದ್ರ ಸರ್ಕಾರದ ಈ ಹೆಜ್ಜೆ, “ ವಿಕಸಿತ ಭಾರತ @2047 ” ಎಂಬ ಮಹತ್ವಾಕಾಂಕ್ಷೆಯ ಕನಸಿಗೆ ಶಕ್ತಿ ತುಂಬುತ್ತಿದೆ.
ಈ ಜನಪರ ಕ್ರಮಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ, ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಸರ್ಕಾರಕ್ಕೆ ಶಿವಮೊಗ್ಗ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು ಶಿವಮೊಗ್ಗ ಶಾಸಕ ಶ್ರೀ ಎಸ್ ಎನ್ ಚನ್ನಬಸಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್




















