ಬರಡು ಮನವನು ತೀಡಿ ತಿದ್ದಿ
ತಪ್ಪಿದಾಗ ಬೆನ್ನಿಗೆ ಎರಡು ಗುದ್ಧಿ
ನಿತ್ಯ ಕೊಟ್ಟು ಅಕ್ಷರಗಳ ಬುದ್ಧಿ
ಕರುಣಿಸಿದರು ನಮಗೆಲ್ಲಾ ಸಿದ್ಧಿ.
ಸಿಟ್ಟು ಸಿಡುಕು ಎಲ್ಲವ ಬಿಟ್ಟು
ನಮ್ಮ ಮೇಲೆ ದಯೆಯ ಇಟ್ಟು
ಸಂಸ್ಕೃತಿಯ ಸಾರವನ್ನು ನೆಟ್ಟು
ಬೋಧಿಸಿದರು ಸಂಸ್ಕಾರ ಕೊಟ್ಟು.
ಕಿತ್ತೆಸೆದು ಮೌಢ್ಯತೆಯ ಕೊಳಕು
ಅಡಗಿಸಿ ನಮ್ಮೊಳಗಿನ ಉಳುಕು
ಪ್ರಜ್ವಲಿಸಿ ಹಣತೆ ಒಳಗಿನ ಬೆಳಕು
ಕಟ್ಟಿ ಕೊಟ್ಟರು ಸೌಜನ್ಯದ ಬದುಕು.
ತಮ್ಮೆಲ್ಲಾ ನೋವುಗಳ ಬದಿಗಿರಿಸಿ
ಆದರ್ಶ ಮೌಲ್ಯದ ಜ್ಞಾನ ತುಂಬಿಸಿ
ಗುರಿಯ ಗೆಲುವಿಗಾಗಿ ಪ್ರೋತ್ಸಾಹಿಸಿ
ಸಾಗಿದರು ನಮ್ಮೆಲ್ಲರನ್ನೂ ಉದ್ಧರಿಸಿ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.




















