ಬಳ್ಳಾರಿ / ಕಂಪ್ಲಿ : ಪುರಸಭೆಯ ವ್ಯಾಪ್ತಿಯ ಶಿಬಿರದಿನ್ನಿ (ಮಾರುತಿನಗರ) ಮುಖ್ಯರಸ್ತೆಯನ್ನು ದ್ವಿಮುಖ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿ, ಕರ್ನಾಟಕ ಸೌಹಾರ್ದ ವೇದಿಕೆಯ ರಾಜ್ಯ ಉಪಾಧ್ಯಕ್ಷ ಶಬ್ಬೀರ್ ಹೆಚ್. ನೇತೃತ್ವದಲ್ಲಿ ಪದಾಧಿಕಾರಿಗಳು, ನಿವಾಸಿಗಳು ಪಟ್ಟಣದ ಹೊಸ ಬಸ್ ನಿಲ್ದಾಣ ಬಳಿಯಲ್ಲಿರುವ ಶಿಬಿರದಿನ್ನಿ ರಸ್ತೆ ಬಳಿಯಲ್ಲಿ ಲೋಕೋಪಯೋಗಿ ಇಲಾಖೆಯ ಜೆಇ ಆನಂದ ಇವರಿಗೆ ಗುರುವಾರ ಮನವಿ ಸಲ್ಲಿಸಿದರು.
ನಂತರ ಶಬ್ಬೀರ್ ಮಾತನಾಡಿ, ಕಂಪ್ಲಿ ನಗರದಿಂದ ಶಿಬಿರದಿನ್ನಿ ಮೂಲಕ ನಂ. 10 ಮುದ್ದಾಪುರ ಕ್ರಾಸ್ ವರೆಗೆ ಸುಮಾರು 4 ಕಿ.ಮೀ ಇದ್ದು, ಇಲ್ಲಿನ ಒಟ್ಟಾರೆಯಾಗಿ ಶಿಬಿರದಿನ್ನಿವರೆಗಿನ ಸುಮಾರು 2 ಕಿ.ಮೀ ರಸ್ತೆಯನ್ನು ಸುಮಾರು 4 ಕೋಟಿ ವೆಚ್ಚದಲ್ಲಿ ಏಕಮುಖ ರಸ್ತೆ ಅಭಿವೃದ್ಧಿಗೆ ಮುಂದಾಗಿರುವುದು ಸರಿಯಲ್ಲ. ಇಲ್ಲಿನ ರಸ್ತೆಯನ್ನು ದ್ವಿಮುಖ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಿದರೆ, ಕಂಪ್ಲಿ ನಗರವು ಅಭಿವೃದ್ಧಿ ಹೊಂದಲು ಸಾಧ್ಯ. ಆದರೆ, ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಶಿಬಿರಿದಿನ್ನಿ ರಸ್ತೆಗೆ ಬರೀ 4 ಕೋಟಿ, ವಾಲ್ಮೀಕಿ ವೃತ್ತದಿಂದ ಬಳ್ಳಾರಿ ರಸ್ತೆಯ ಸ್ವಾಗತ ಕಮಾನ್ ವರೆಗಿನ ರಸ್ತೆಗೆ 6.70 ಕೋಟಿ ಅನುದಾನ ನೀಡುವ ಮೂಲಕ ತಾರತಮ್ಯ ಮಾಡಿರುವುದು ತಿಳಿಯುತ್ತಿದೆ. ಆದ್ದರಿಂದ ಸ್ಥಳೀಯ ಶಾಸಕರು ಕಂಪ್ಲಿ ನಗರ ಅಭಿವೃದ್ಧಿಯ ದೂರದೃಷ್ಟಿಯಿಂದ ಇಲ್ಲಿನ ರಸ್ತೆಯನ್ನು ದ್ವಿಮುಖ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಬೇಕು. ಕಂಪ್ಲಿ ಪುರಸಭೆ ವ್ಯಾಪ್ತಿಯ ರಸ್ತೆ ದ್ವಿಮುಖ ರಸ್ತೆಯಾಗಿ ನಿರ್ಮಾಣವಗಬೇಕು. ರಸ್ತೆಗಳು ಉನ್ನತ ಮಟ್ಟದಲ್ಲಿ ನಿರ್ಮಾಣಗೊಳ್ಳಬೇಕು.
ರಸ್ತೆಗಳಲ್ಲಿ ಬರುವ ಸೇತುವೆಗಳನ್ನು ಹೊಸದಾಗಿ ನಿರ್ಮಿಸಬೇಕು. ರಸ್ತೆ ವಿಭಾಜಕದೊಂದಿಗೆ ಬೀದಿ ದೀಪಗಳನ್ನು ಒಳಗೊಂಡಿರಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎಸ್.ಮುನ್ನಾ, ಪಿ. ರಾಘವೇಂದ್ರ, ಎಂ.ರಂಜಿತ್, ಜಾಕೀರ್, ಬಸವರಾಜಗೌಡ, ಎ.ಎಸ್.ಯಲ್ಲಪ್ಪ, ಶಿವುಕುಮಾರ, ಆರ್.ಹೆಚ್.ಧನಂಜಯ್ಯ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















