ಬಳ್ಳಾರಿ / ಕಂಪ್ಲಿ : ಹಲವು ವರ್ಷಗಳಿಂದ ನೆಲೆಸಿಕೊಂಡು ಬಂದಿರುವ ಅರ್ಹಫಲಾನುಭವಿಗಳಿಗೆ ಸರ್ಕಾರದಿಂದ ನಿವೇಶನ ಹಕ್ಕುಪತ್ರಗಳನ್ನು ನೀಡಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಜೆ. ಎನ್. ಗಣೇಶ್ ಹೇಳಿದರು.
ತಾಲೂಕಿನ ಸಣಾಪುರ ಗ್ರಾ. ಪಂ. ವ್ಯಾಪ್ತಿಯ ಆರ್. ಕೊಂಡಯ್ಯಕ್ಯಾಂಪಿನಲ್ಲಿ ತಾಲೂಕು ಆಡಳಿತದಿಂದ ಗುರುವಾರ ಆಯೋಜಿಸಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಂತರ ಹಕ್ಕುಪತ್ರ ವಿತರಿಸಿ ಮಾತನಾಡಿ, ಇಲ್ಲಿನ ಜಾಗದಲ್ಲಿ ಕ್ಯಾಂಪಿನ ಸಾಕಷ್ಟು ಕುಟುಂಬಗಳು ಸುಮಾರು 30ಕ್ಕೂ ಹೆಚ್ಚು ವರ್ಷಗಳಿಂದ ವಾಸಿಸುತ್ತಾ ಬಂದಿದ್ದು, ಯಾವುದೇ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗದಂತಾಗಿತ್ತು. ಆದರೆ, ಈಗ ಸರ್ಕಾರವೇ ಮನೆ ಬಾಗಲಿಗೆ ಬಂದು ಅಕ್ರಮ ಸಕ್ರಮದಡಿಯಲ್ಲಿ ಸುಮಾರು 108 ಕುಟುಂಬಗಳಿಗೆ ಹಕ್ಕುಪತ್ರ (ಪಟ್ಟಾ) ವಿತರಿಸಿದೆ. ಫಲಾನುಭವಿಗಳು ಇದರ ಸದುಪಯೋಗ ಪಡೆದು ಅಭಿವೃದ್ಧಿ ಹೊಂದಬೇಕು. ಪಂಚ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ನೀಡುವ ಮೂಲಕ ನೆಮ್ಮದಿಯ ಬದುಕಿಗೆ ರಾಜ್ಯ ಸರ್ಕಾರ ಆಸರೆಯಾಗಿದೆ. ಇಲ್ಲಿನ ಜನತೆಗೆ ಕುಡಿಯುವ ನೀರು, ರಸ್ತೆ, ಬೀದಿ ದೀಪ ಸೇರಿದಂತೆ ನಾನಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಇಲ್ಲಿನ ಕೊಂಡಯ್ಯಕ್ಯಾಂಪ್ ನಿಂದ ಶಂಕರ್ ಸಿಂಗ್ ಕ್ಯಾಂಪ್ ವರೆಗಿನ ರಸ್ತೆಯನ್ನು ಸುಮಾರು 3 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆಯನ್ನಾಗಿ ಅತಿ ಶೀಘ್ರದಲ್ಲೇ ಅಭಿವೃದ್ಧಿಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಎನ್.ಕಲ್ಲಪ್ಪ, ಪುರಸಭೆ ಸದಸ್ಯ ಸಿ.ಆರ್.ಹನುಮಂತ, ಕಂದಾಯ ನಿರೀಕ್ಷಕ ಜಗದೀಶ, ಗ್ರಾಮ ಆಡಳಿತಾಧಿಕಾರಿ ಶಿವರುದ್ರಪ್ಪ, ಮುಖಂಡರಾದ ಕಿಟ್ಟಯ್ಯ, ನಾಗೇಂದ್ರ, ಅಂಥೋನಿ, ನೇಣಕಿಪಾಟಿ, ಕೇಶವನಾಯ್ಡು, ಶ್ರೀನಿವಾಸಲು, ಪದ್ಮಾವತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















