ಬಳ್ಳಾರಿ: ಜಿಲ್ಲೆಯ ಹೊಸ ಡಿಸಿಯಾಗಿ ಬೆಂಗಳೂರಿನ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದ
ಎನ್.ನಾಗೇಂದ್ರ ಪ್ರಸಾದ್ ಅವರು ನೇಮಕಗೊಂಡಿದ್ದಾರೆ.
ಐಎಎಸ್ ಮಾಡಿದವರೇ ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಬರಬೇಕು ಎಂಬ ವಾದಗಳ ನಡುವೆಯೇ, ಕೆಎಎಸ್ನಿಂದ ಬಡ್ತಿ ಪಡೆದ 2015ನೇ ಬ್ಯಾಚ್ ಐಎಎಸ್ ಅಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರನ್ನು ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ.
ಕಾನೂನಿನ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಹಿಂದಿನ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಇಲ್ಲಿಂದ ಎಬ್ಬಿಸಿ ಕಳುಹಿಸಬೇಕು ಎಂದು ಒಂದು ಗುಂಪು ಕೆಲಸ ಮಾಡುತ್ತಲೇ ಇತ್ತು. ಅವರನ್ನು ಉಳಿಸಿಕೊಳ್ಳಲೇಬೇಕು ಎಂದು ಮತ್ತೊಂದು ಗುಂಪು ಕೆಲಸ ಮಾಡುತ್ತಿತ್ತು. ಕಡೆಗೆ ಆಯ್ಕೆಯ ಅಧಿಕಾರವನ್ನು ಮುಖ್ಯಮಂತ್ರಿಗೆ ಬಿಡಲಾಗಿತ್ತು. ಸಿ. ಎಂ. ಕಚೇರಿಯು ಎಲ್ಲರಿಗೂ ಸಮ್ಮತವಾದ ಅಧಿಕಾರಿಯನ್ನು ನೇಮಿಸಿ ಕಳುಹಿಸಿರುವುದಾಗಿ ಗೊತ್ತಾಗಿದೆ. ಇದರೊಂದಿಗೆ ಹೊಸ ಜಿಲ್ಲಾಧಿಕಾರಿ ನೇಮಕದ ಚರ್ಚೆಗಳು ಕೊನೆಗೊಂಡಿವೆ. ಈಗ ಹೊಸ ಜಿಲ್ಲಾಧಿಕಾರಿಗೆ ಜಿಲ್ಲೆಯಲ್ಲಿ ಇರುವ ಹಲವಾರು ಸವಾಲುಗಳ ಹೇಗೆ ನಿವಾರಿಸುತ್ತಾರೆ?
ವಿಭಜನೆಯ ಬಳಿಕ ಜಿಲ್ಲೆಯು ಹಲವು ಕಾರಣಗಳಿಂದಾಗಿ ಬಳ್ಳಾರಿಯು ರಾಜ್ಯದಲ್ಲಿ ಪ್ರಾಮುಖ್ಯತೆ ಪಡೆದಿದೆ. ಬ್ರಿಟಿಷ್ ಆಡಳಿತದ ಅವಧಿಯಲ್ಲೇ ಸ್ವತಂತ್ರ ಜಿಲ್ಲೆಯಾಗಿದ್ದ ಬಳ್ಳಾರಿಯಲ್ಲಿ ಗಡಿ ವಿಷಯಗಳಿವೆ. ಜಿಲ್ಲೆಯ ಒಡಲಿನಲ್ಲಿ ಭಾರಿ ಗಣಿಗಾರಿಕೆಗಳು ನಡೆಯುತ್ತಿವೆ, ಭಾರೀ ಉದ್ದಿಮೆಗಳಿವೆ, ರಾಜಕೀಯವಾಗಿಯೂ ಘಟಾನುಗಳಿಗೆ ಆಶ್ರಯ ನೀಡಿದೆ.
ನಾಗೇಂದ್ರ ಪ್ರಸಾದ್ ಅಧಿಕಾರ ಸ್ವೀಕಾರ
ಜಿಲ್ಲಾಧಿಕಾರಿಯಾಗಿ ಹೊಸದಾಗಿ ನಿಯೋಜನೆಗೊಂಡಿರುವ ನಾಗೇಂದ್ರ ಪ್ರಸಾದ್ ಕೆ. ಅವರು ಬುಧವಾರ ಸಂಜೆ ಅಧಿಕಾರ ವಹಿಸಿಕೊಂಡರು. ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ ಅವರು ನಾಗೇಂದ್ರ ಪ್ರಸಾದ್ ಅವರನ್ನು ಅಭಿನಂದಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















