ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನ್ನಡದ ಮೇರು ನಟ, ಡಾ.ವಿಷ್ಣುವರ್ಧನ್

ಜನ್ಮದಿನದ ಅಮೃತ ಮಹೋತ್ಸವ ವರ್ಷ

ನೆನಪುಗಳ ಸಂಕಲನ

ಚಲನಚಿತ್ರರಂಗ ಅತ್ಯಂತ ಪ್ರಭಾವಶಾಲಿ ಮಾಧ್ಯಮ. ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಜೀವನ ಚರಿತ್ರೆ, ವಿದ್ಯಾಭೂಷಣರು ನಟಿಸಿದ ಪುರಂದರದಾಸರ ಜೀವನ ಚಿತ್ರಣ ಅದೇ ರೀತಿ ಅನೇಕ ಪೌರಾಣಿಕ ಕಥೆಗಳು ಚಲನಚಿತ್ರವಾಗಿ ಯಶಸ್ಸು ಕಂಡಿರುವುದು ಇತಿಹಾಸ. ಒಂದಷ್ಟು ಮಡಿವಂತಿಕೆಯ ಮುಸುಕು ಸರಿಸಿ, ಕೆಡುಕುಗಳ ಬದಿಗಿಟ್ಟು,ಒಳಿತುಗಳ ಹುಡುಕ ಹೊರಟರೆ ಚಲನಚಿತ್ರರಂಗದ ಅನೇಕ ಸಾಧನೆಗಳು ಕಣ್ಣಿಗೆ ರಾಚುತ್ತವೆ. ಸಾಹಿತ್ಯ – ಸಂಗೀತ -ಅಭಿನಯಗಳ ಸಂಗಮವಾಗಿ ಅನೇಕ ಕೈಗಳು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿರುವುದು ಸತ್ಯ.

ಡಾ. ವಿಷ್ಣುವರ್ಧನ್ ಬದುಕಿರುತ್ತಿದ್ದರೆ 75ನೆಯ ವಯಸ್ಸು. ಅವರಿಲ್ಲದೆ 17 ವರುಷ ಸಂದರೂ ಇನ್ನೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಿರುವರು. ಅದಕ್ಕೆ ಒಂದು ಕಾರಣ – ಚಲನ ಚಿತ್ರದ ಸೆಳೆತವಾದರೂ ಅದಕ್ಕಿಂತ ಮಿಗಿಲಾಗಿ ಅವರ ಹೃದಯಸ್ಪರ್ಶಿ ನಡೆನುಡಿ. ಅವರಿಲ್ಲದೆ ಹೋದರೂ ಸಿನಿಮಾ ನೋಡಿದವರಿಗೆ ಅವರ ನಟನೆ – ಸಂಭಾಷಣೆ -ಹಾಡು – ಕಣ್ಣೋಟ -ಮುಖ ತುಂಬಿದ ನಗು – ಎಡಗೈಯ ಶೋಕಿ ಹೃದಯ ತುಂಬಾ ತುಂಬಿರುವ ಭಾವನೆಗಳನ್ನು ಇನ್ನೂ ಬಡಿದೆಬ್ಬಿಸುವುದು – ಮನತಟ್ಟುವುದು ಸತ್ಯ.

ಪ್ರಮುಖವಾಗಿ ಡಾ. ರಾಜಕುಮಾರ್ – ಡಾ. ವಿಷ್ಣುವರ್ಧನ್ ಬಹು ಬಗೆಯ ಪಾತ್ರಗಳಲ್ಲಿ ನಟಿಸಿ ಮಿಂಚಿದವರು. ಡಾ. ರಾಜಕುಮಾರ್ ಹಿರಿಯ ನಟರಾಗಿ ವಿಷ್ಣುವರ್ಧನ್ ಅವರಿಗಿಂತ ಮೊದಲೇ ಜನಮಾನಸ ತಟ್ಟಿ ಅಭಿಮಾನಿಗಳ ಹೃದಯಕ್ಕೆ ಲಗ್ಗೆಯಿಟ್ಟವರಾದರೆ, ಅದೇ ಹೊತ್ತಿಗೆ ಪುಟ್ಟಣ್ಣ ಕಣಗಾಲ್ ರವರ ಗರಡಿಯಲ್ಲಿ ಪಳಗಿ ಉದಯಿಸಿ ಬಂದ ವಿಷ್ಣು ಅದ್ಭುತ ಕಲಾವಿದ. ಅವರಿಬ್ಬರೂ ಸ್ಪರ್ಧಿಗಳಾಗಿರಲಿಲ್ಲ. ಆದರೆ ಅಭಿಮಾನಿಗಳ ಮನದಲ್ಲಿ ಸ್ಪರ್ಧಿಗಳಂತಿದ್ದರು. ಇದರಿಂದ ಅವರು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಸಿನಿಮಾ ರಂಗವನ್ನೇ ತೊರೆಯುವಷ್ಟು ನೋವುಂಡರು. ವಿಷ್ಣು ಅವರ ಆಕರ್ಷಕ ಧ್ವನಿ – ಅವರದೇ ಗತ್ತುಗಾರಿಕೆ – ಪಾತ್ರಗಳಲ್ಲಿ ಮುಳುಗಿ ಬಿಡುವ ಅಭಿನಯ ಸಾಮರ್ಥ್ಯ ಇವುಗಳಿಂದ ಅವರು ಅವರಾಗಿಯೇ ಉಳಿದುಬಿಟ್ಟರು. ಯಾರ ಪಡಿಯಚ್ಚು ಅವರಾಗಿರಲಿಲ್ಲ. ಖ್ಯಾತ ಅಭಿನೇತ್ರಿ ಭಾರತಿ ಅವರನ್ನು ವಿವಾಹವಾಗಿ ತನ್ನ ದಾಂಪತ್ಯ ಬದುಕಲ್ಲಿ ನಡೆದುಕೊಂಡ ರೀತಿ, ಉಳಿಸಿಕೊಂಡು ಬಂದ ಸಚ್ಚಾರಿತ್ರ್ಯ ಅವರನ್ನು ಮತ್ತಷ್ಟು ಎತ್ತರಕ್ಕೇರಿಸಿತು.

ಸಹ ಕಲಾವಿದರನ್ನು ಬೆಳೆಸಿದ ಹೃದಯವಂತ. ಭಾವನಾ ಜೀವಿ. ನೋವುಂಟಾದಾಗ ಮೌನಿಯಾಗಿರುತ್ತಿದ್ದರು. ಭಾಷೆಯ ಮೇಲಿನ ಹಿಡಿತ – ಅಧ್ಯಾತ್ಮದ ಒಲವು – ಸದ್ದಿಲ್ಲದೆ ಬಡವರಿಗೆ ನೀಡುತ್ತಿದ್ದ ನೆರವು – ಚಿತ್ರ ಸೋತಾಗಲು ನಿರ್ದೇಶಕ ನಿರ್ಮಾಪಕರ ನೋವಿಗೆ ಸ್ಪಂದಿಸುವ ಪರಿ, ಇಂತಹ ಮಾನವೀಯ ಗುಣಗಳೇ ಅವರ ವ್ಯಕ್ತಿತ್ವಕ್ಕೆ ಭೂಷಣವಾಯಿತು. ಮತ್ಸರ ಪಡುವಂತಿದ್ದ ರೂಪ ಮತ್ತಷ್ಟು ಹೊಳಪಿಟ್ಟಿತು.

ವಿಷ್ಣು ಅವರ ಅಂತರಂಗದ ಆಳದಿಂದ ನಟನೆ ಹೊಮ್ಮಿಸಲು ತಕ್ಕ ಸಂಭಾಷಣೆ ಬರೆದ ಸಾಹಿತಿಗಳು, ವಿಷ್ಣು ಅವರ ಮನವನ್ನು ಹೊಕ್ಕು ಬರೆದರೋ ಎಂಬಂತೆ ಇರುತ್ತಿತ್ತು. ಹಾಡುಗಳ ಸಾಹಿತ್ಯ – ಸಂಗೀತ ಸಾವಿರ ಸಾವಿರ ಬಾರಿ ಕೇಳುತ್ತಿದ್ದರು ಅದು ಮತ್ತೆ ಮತ್ತೆ ಭಾವನೆಗಳ ಸ್ಫುರಿಸುವಂತಿರುತ್ತಿತ್ತು. ಹಾಡುಗಳನ್ನು ಮನದಾಳಕ್ಕೆ ಇಳಿಸುತ್ತಿದ್ದ ಸಂಗೀತ ಸಾರ್ವಭೌಮ ಎಸ್. ಪಿ. ಬಾಲಸುಬ್ರಮಣ್ಯಂ ಹಾಡುವಾಗ ವಿಷ್ಣುವರ್ಧನ್ ಅವರೇ ಆಗಿಬಿಡುತ್ತಿದ್ದರು. ಅವರೇ ಹಾಡುವರೋ ಎಂಬಂತೆ ಭಾಸವಾಗುತ್ತಿತ್ತು.

ವಿಷ್ಣು ಅವರು ನಟಿಸಿದ ಅನೇಕ ಚಲನಚಿತ್ರಗಳಲ್ಲಿ ಪ್ರತಿಯೊಬ್ಬ ನೋಡುಗನು ಬದುಕಲ್ಲಿ ಎದುರಿಸಿದ ಪ್ರೀತಿ- ದ್ವೇಷ -ಹೋರಾಟ- ಸಿಟ್ಟು – ಸಿಡುಕು – ಮಾನವೀಯ ಗುಣ ಕನಸುಗಳು – ನೋವು ನಲಿವುಗಳು ಇವೆಲ್ಲವೂ ನನ್ನದೇ ಎಂಬಂತೆ, ಕಂಡವರ ಮನದಲ್ಲಿ ಪಡಿ ಮೂಡುತ್ತಿತ್ತು. ಈ ಗುಣಗಳಿಂದ ನಾವೇ ಅವರು – ಅವರೇ ನಾವು ಎಂಬಷ್ಟು ಹೃದಯಕ್ಕೆ ಹತ್ತಿರವಾದೆವು. ಈ ಕಾರಣಕ್ಕಾಗಿ ಇಂದಿಗೂ ಅವರನ್ನು ಮರೆಯಲು ಯಾರಿಗೂ ಸಾಧ್ಯವಾಗಿಲ್ಲ. ಅವರ ಚಲನಚಿತ್ರಗಳನ್ನು ಈಗಲೂ ತೆರೆಯಲ್ಲಿ ನೋಡುತ್ತಿದ್ದರೆ,ಅವರಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಇನ್ನೂ ನಮ್ಮೊಂದಿಗಿರುವರೆಂಬ ಗಾಢ ಪ್ರೀತಿ ಮನ ತುಂಬಾ ಆವರಿಸಲ್ಪಡುತ್ತದೆ.

ಅವರು ಅಭಿನಯಿಸಿದ ಚಿತ್ರದ ಅನೇಕ ಹಾಡುಗಳಲ್ಲಿ ಇಡೀಯ ಸಮಾಜಕ್ಕೆ ಸಂದೇಶ ಸಾರುವಷ್ಟು ಗಟ್ಟಿತನದ ಸಾಹಿತ್ಯವಿದೆ.

ತುತ್ತು ಅನ್ನ ತಿನ್ನೋಕೆ……….
ಬೊಗಸೆ ನೀರು ಕುಡಿಯೋಕೆ……
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ……..
ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ…………

ಬೆಂಗಳೂರಿನ ಅವರ ಸ್ಮಾರಕ ಇತ್ತೀಚೆಗೆ ಕೆಡವಿದ ಸಮಯದಲ್ಲಿ ಇದು ಮಾರ್ಮಿಕ ಹಾಡಾಯಿತು. ಅವರ ಅನೇಕ ಸಂಭಾಷಣೆಗಳು ಇಂದಿಗೂ ಅಭಿಮಾನಿಗಳ ಮನ ಕಲಕುವಂತಿವೆ. ಬದುಕಿಗೆ ನೀತಿ ಪಾಠವಾಗಿದೆ. ಅವರು ನಟಿಸಿ ದಾಖಲೆ ನಿರ್ಮಿಸಿದ ಯಜಮಾನ ಚಿತ್ರ ಭಾರತೀಯ ಸಂಸ್ಕೃತಿಯ ಕೂಡು ಕುಟುಂಬವನ್ನು ಬಿಂಬಿಸಿ ಚಿರಸ್ಥಾಯಿಯಾಯಿತು.

ಅವರ ಕೊನೆಯ ದಿನಗಳಲ್ಲಂತೂ ಸಂತರಂತೆ ಬಾಳಿ ಬದುಕಿದರು. ಅವರ ಪ್ರತಿ ಮಾತುಗಳು ಆಧ್ಯಾತ್ಮದ ಕಡೆಗಿತ್ತು. ಬನ್ನಂಜೆ ಅವರಂತಹ ವಿದ್ವಾಂಸರ ಪ್ರವಚನ ಕೇಳುವುದು ಅವರಿಗೆ ಬಲು ಇಷ್ಟವಾಗಿತ್ತು. ವಿದ್ಯಾಭೂಷಣರ ದಾಸರ ಪದಗಳನ್ನು ಕೇಳುತ್ತಾ ಕೇಳುತ್ತಾ ಮುಳುಗಿ ಹೋಗುತ್ತಿದ್ದರು. ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠದಲ್ಲಿ ಗೋದಾನ ಸೇವೆ ನಡೆಸಿ ಅದಮ್ಯ ಗೋಪ್ರೇಮ ಮೆರೆದವರು. ಎಲ್ಲರ ಒಳಿತು ಬಯಸುವ ನಿರ್ಮಲ ಮನದ ಚಿಂತಕ ಸಿನಿಮಾ ಮೀರಿ ಬೆಳೆದು ನಿಂತು ದಂತಕತೆಯಾಗಿಬಿಟ್ಟರು.

ವಿಷ್ಣುವರ್ಧನರ ಜನ್ಮದಿನದ ಅಮೃತಮಹೋತ್ಸವ ವರ್ಷವಿದು. ಸಪ್ಟೆಂಬರ್ 18 ಜನ್ಮದಿನ. ಬೆಂಗಳೂರಿನಲ್ಲಿ ತಮ್ಮ ಅಭಿಮಾನದ ನಟನಿಗೆ ಕೋಟಿ ಕೋಟಿ ಹೃದಯಗಳು ಸ್ಮಾರಕ ಬಯಸುತ್ತಿವೆ. ಕನ್ನಡ ತಾಯಿಯ ಶ್ರೀಮಂತಿಕೆ ಮೆರೆದರು. ಕಲಾವಿದರಾಗಿ ಇವರ ಸೇವೆಗೆ ಕರ್ನಾಟಕ ರತ್ನ – ಪದ್ಮಶ್ರೀ ಪ್ರಶಸ್ತಿಗಳು ಒದಗಿ ಬಂದರೆ ತಮಗೇ ಬಂದಂತೆ ಕುಣಿದು ಕುಪ್ಪಳಿಸುವ ಅಭಿಮಾನಿ ಸಮೂಹವಿದೆ. ಮಣ್ಣಾದ ಮೇಲೆ ಎಲ್ಲವನ್ನೂ ಮರೆತು ಬಿಡುವ ಈ ಜಗತ್ತಿನಲ್ಲಿ, ಇವರಿನ್ನೂ ಅಭಿಮಾನಿಗಳ ಮನದ ಗುಡಿಯಲ್ಲಿರುವರೆಂದರೆ ಪ್ರಭಾವಿಸಿದ ಪರಿ ಎಷ್ಟಿರಬೇಕು? … ಅಂದು ಹೊಯ್ಸಳರ ಅರಸ ವಿಷ್ಣುವರ್ಧನ ಶಿಲ್ಪಕಲೆಗೆ – ರಾಜ್ಯಾಡಳಿತಕ್ಕೆ ಹೆಸರಾದರು. ಅವರೇ ಇವರಾಗಿ ಬಂದಿರುವರೋ ಎಂಬಂತೆ ಕನ್ನಡದ ಮಣ್ಣಿನ ಸಂಸ್ಕೃತಿ ಎತ್ತಿ ಹಿಡಿದ ಚಿರಂಜೀವಿ ನಟ ಡಾ. ವಿಷ್ಣುವರ್ಧನ್ ಕನ್ನಡದ ಮೇರು ನಟರಾಗಿಯೇ ಉಸಿರು ಚೆಲ್ಲಿದರು. ಇದು ಎಲ್ಲರೂ ಒಪ್ಪಿತ ಸತ್ಯ. ಪ್ರಶಸ್ತಿ ಬಂದರೆ ಸಂತಸ ಅನುಭವಿಸಲು ಅವರಿಲ್ಲದಿರಬಹುದು, ಅವರಿಂದ ಪ್ರಭಾವಿಸಲ್ಪಟ್ಟ ಹೃದಯಗಳಿವೆ. ಅಭಿಮಾನಿಗಳೆಲ್ಲಾ ಸಂಭ್ರಮಿಸಬಹುದು.

2006ರಲ್ಲಿ ವಿಶ್ವೇಶತೀರ್ಥ ಶ್ರೀಪಾದರ ಪೀಠಾರೋಹಣದ ಅಮೃತ ಮಹೋತ್ಸವ ವರ್ಷ ಅವರ ಹುಟ್ಟೂರು ರಾಮಕುಂಜದಲ್ಲಿ ಬಲು ವಿಜೃಂಭಣೆಯಿಂದ ನೆರವೇರಿತು. ಅನೇಕ ದಿಗ್ಗಜರ ಸಮಾಗಮವಾಗಿತ್ತು . ಪೂಜ್ಯರ ಅಭಿಮಾನಿ ವಿಷ್ಣುವರ್ಧನ್ ಇನ್ನೇನು ಬರುವರೆಂದು ನಿರೀಕ್ಷೆಯಲ್ಲಿರುವಾಗಲೇ ಅಸೌಖ್ಯದ ಕಾರಣದಿಂದ ಬರಲಾಗಲಿಲ್ಲ. 2002 ರಲ್ಲಿ ಇರಬೇಕು ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯ ಕಟ್ಟಿ ಬೆಳೆಸಿದ ಯು.ಎಸ್.ಎ. ನಾಯಕ್ ಅವರ ಬೆಳಗಿನ ಉಪಹಾರದ ಮಿತ್ರ ಉಪ್ಪಿನಂಗಡಿಯ ತಮ್ಮ ವಿದ್ಯಾಲಯಕ್ಕೆ ಬರಮಾಡಿಕೊಂಡ ಸಡಗರ ಇನ್ನೂ ನೆನಪಿದೆ.

  • ಟಿ ನಾರಾಯಣ ಭಟ್ ರಾಮಕುಂಜ.
    ರಾಜ್ಯ -ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಲೇಖಕರು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!