ಜಾನಪದ ಸಾಹಿತ್ಯಕ್ಕೆ ಮೌಲ್ಯವಿದೆ: ಗುರು ಮಹಾಂತ ಶ್ರೀಗಳು
ಬಾಗಲಕೋಟೆ/ ಇಲಕಲ್ಲ:ಜಾನಪದ ಸಾಹಿತ್ಯವನ್ನು ಉಳಿಸುವದು, ಬೆಳೆಸುವದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿಗಳು ಹೇಳಿದರು.
ನಗರದಲ್ಲಿ ನೂತನವಾಗಿ ಅಸ್ತಿತ್ವಗೊಂಡಿರುವ ಕನ್ನಡ ಜಾನಪದ ಬಳಗಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಪದರು ಜೀವನದ ಕಷ್ಟ ಸುಖಗಳು, ಸಾಮಾಜಿಕ ವ್ಯವಸ್ಥೆ, ಜಗತ್ತಿನ ಎಲ್ಲಾ ಸ್ಥಿತಿಗತಿಗಳನ್ನು ಜಗತ್ತಿಗೆ ಸರಳವಾಗಿ ಹೇಳುವ ದೊಡ್ಡ ಅನುಭಾವಿಗಳು. ಜಾನಪದ ಸಾಹಿತ್ಯದಲ್ಲಿ ಸತ್ಯ ಇರುತ್ತದೆ ಹೊರತು ಕಲ್ಪನೆ ಇರುವದಿಲ್ಲ. ಇಂತಹ ಮೌಲ್ಯವಾದ ಸಾಹಿತ್ಯವನ್ನು ಉಳಿಸಿಕೊಂಡು ಇನ್ನಷ್ಟು ವಿಶಾಲವಾಗಿ ಬೆಳಸಬೇಕಾಗಿದೆ ಎಂದರು.
ಕನ್ನಡ ಜಾನಪದ ಬಳಗದ ಅಧ್ಯಕ್ಷ ಅಮರೇಶ ಐಹೊಳ್ಳಿ, ಉಪಾಧ್ಯಕ್ಷೆ ಗಿರಿಜಾ ಶಿವಬಲ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವಾ ದೀಕ್ಷೆ ಪಡೆದು ಇಪ್ಪತ್ತೊಂದು ವರ್ಷ ಪೊರೈಸಿದ ಪೂಜ್ಯ ಗುರು ಮಹಾಂತ ಶ್ರೀಗಳನ್ನು ಕನ್ನಡ ಜಾನಪದ ಬಳಗ ಹಾಗೂ ಎಸ್. ಆರ್. ಕಂಠಿ ವೇದಿಕೆ ವತಿಯಿಂದ ಭಕ್ತಿ ಪೂರ್ವಕವಾಗಿ ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್. ಆರ್. ಕಂಠಿ ವೇದಿಕೆಯ ಅಧ್ಯಕ್ಷೆ ಮಹಾದೇವಿ ತೊಂತನಾಳ, ಅಕ್ಕನ ಬಳಗದ ಅಧ್ಯಕ್ಷೆ ಸವಿತಾ ಮಾಟೂರ, ಕನ್ನಡ ಜಾನಪದ ಬಳಗದ ಲಕ್ಷ್ಮಣ ಚಲವಾದಿ, ಬಸಪ್ಪ ನಾಡಗೇರ, ಅಮರೇಶ ವೀರಾಪೂರ, ಮಲ್ಲಪ್ಪ ಅಂಗಡಿ, ಗೀತಾ ವಾಸೆ, ಶಂಕರ ಮಡಿವಾಳರ, ದಶರಥ ಏಕಬೋಟೆ, ಕುಸಮಾ ಕಳ್ಳೊಳ್ಳಿ, ಎಸ್.ಆರ್.ಕಂಠಿ ವೇದಿಕೆ ಹಾಗೂ ಅಕ್ಕನ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
ಜಾನಪದ ಬಳಗದ ವೀರಮ್ಮ ಕುಂಬಾರ,
ಲಲಿತಾ ಅಂಗಡಿ, ಪ್ರೇಮಕ್ಕ ವಸ್ತ್ರದಮಠ ಪ್ರಾರ್ಥಿಸಿದರು. ಗುಂಡಪ್ಪ ಕುರಿ ಸ್ವಾಗತಿಸಿದರು. ಬಸವರಾಜ ಚಳಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಜೋಗಿನ ನಿರೂಪಿಸಿದರು. ಜಗದೀಶ ಗಿರಡ್ಡಿ ವಂದಿಸಿದರು.
- ಕರುನಾಡ ಕಂದ




















