
ಬಳ್ಳಾರಿ / ಕಂಪ್ಲಿ : ಪಟ್ಟಣದ 10ನೇ ವಾರ್ಡಿನ ಛಲವಾದಿ ಕಾಲೋನಿಯಲ್ಲಿರುವ ಆರಾಧ್ಯ ದೈವರಾದ ರಾಮಲಿಂಗಮ್ಮ, ದುರುಗಮ್ಮ, ಹುಲಿಗೆಮ್ಮ ದೇವಿಯ ಗಂಗೆಸ್ಥಳ ಮೆರವಣಿಗೆ ವಿಜೃಂಭಣೆಯಿಂದ ಮಂಗಳವಾರ ನಡೆಯಿತು.
ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಭಕ್ತರ ಸಂಕಷ್ಟಗಳನ್ನು ಈಡೇರಿಸುವ ದೇವತೆ ರಾಮಲಿಂಗಮ್ಮ ಮತ್ತು ದುರುಗಮ್ಮ, ಹುಲಿಗೆಮ್ಮ ದೇವಿಯ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ದಂಡೆಯಲ್ಲಿ ಗಂಗೆಪೂಜೆ ಸಲ್ಲಿಸಿದ ನಂತರ ಆರಂಭಗೊಂಡ ದೇವಿಯ ಮೆರವಣಿಗೆಯಲ್ಲಿ ಸುಮಂಗಳಿಯರೊಂದಿಗೆ ಕಳಸ, ಕುಂಭ ಸೇರಿದಂತೆ ಸಕಲ ಮಂಗಳ ವಾದ್ಯದೊಂದಿಗೆ ಆರಂಭಗೊಂಡು ಇಲ್ಲಿನ ನಡುವಲ ಮಸೀದಿ ಮುಖ್ಯರಸ್ತೆ ಮೂಲಕ ಸಾಗಿ, ದೇವಸ್ಥಾನದ ಸನ್ನಿಧಾನದಲ್ಲಿ ಸಂಪನ್ನಗೊಂಡಿತು.
ದೇವತೆ ರಾಮಲಿಂಗಮ್ಮ ಮತ್ತು ದುರುಗಮ್ಮ, ಹುಲಿಗೆಮ್ಮ ದೇವಿಯ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಾಷಾರಾಂಡೋಲ್ ಸೇರಿದಂತೆ ನಾನಾ ಕಲಾ ಪ್ರಕಾರಗಳು ಮೆರಗು ನೀಡಿದವು. ಇಲ್ಲಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಶ್ರದ್ಧೆಯಿಂದ ಜರುಗಿದವು. ನಂತರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ, ಕಾಯಿ, ಕರ್ಪೂರ ಅರ್ಪಿಸಿ, ಆಶೀರ್ವಾದ ಪಡೆದರು. ತದನಂತರ ಅನ್ನ ಸಂತಾರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ನರಸಿಂಹಪ್ಪ, ಛಲುವಾದಿ ಮಹಾಸಭಾದ ತಾಲೂಕಾಧ್ಯಕ್ಷ ಬಿ.ನಾಗೇಂದ್ರ, ಮುಖಂಡರಾದ ಸಿ.ಆರ್.ಹನುಮಂತ, ಬಿ.ದೇವೇಂದ್ರ, ಎಂ.ಸಿ.ಮಾಯಪ್ಪ, ರಾಮಲಿಸ್ವಾಮಿ, ಟಿ.ವಿರುಪಣ್ಣ, ಹೆಚ್.ಚನ್ನಬಸುವ, ಎಸ್.ಅಂಜಿನಪ್ಪ, ವಿರುಪಣ್ಣ, ಎ.ಶಂಕರ್, ಬಿ.ಪಂಪಾಪತಿ, ಎಂ.ಲಕ್ಷ್ಮಣ ಸೇರಿದಂತೆ ಸಕಲ ಸದ್ಭಕ್ತರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















