ಬೀದರ್ :ಹನ್ನೆರಡನೆಯ ಶತಮಾನದಲ್ಲಿ ಪ್ರಗತಿಪರ ಚಿಂತಕ, ಸಮಾನತೆಯ ಹರಿಕಾರ, ಸೌಹಾರ್ದತೆಯ ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ಶರಣರು ನಡೆಸಿದ ಅಪೂರ್ವ ಸಮಾಜೋಧಾರ್ಮಿಕ ಆಂದೋಲನ ಅಂದಿನ ಸರ್ವ ಜನಾಂಗದ ಸಮುದಾಯದಲ್ಲಿ ಹೊಸ ಆಶಾಕಿರಣ ಮೂಡಿಸಿ, ಸರ್ವರ ಬಾಳಿನಲ್ಲಿ ಹೊಸ ಚೈತನ್ಯದ ಚಿಗುರು ತಂದಿರುವುದು ಮರೆಯಲು ಹೇಗೆ ತಾನೇ ಸಾಧ್ಯ!. ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಸರ್ವರ ಹಿತವನ್ನು ಕಾಪಾಡಿ, ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಅವರ ತ್ಯಾಗ, ಬಲಿದಾನ ಶಾಶ್ವತವಾಗಿ ಚಿರಾಯು.
ಹೀಗೆ ಬಸವಾದಿ ಪ್ರಮಥರು ಲಿಂಗಾಯತ ಧರ್ಮ ಹುಟ್ಟು ಹಾಕಿ, ಅನೇಕರಿಗೆ ಇಷ್ಟಲಿಂಗ ದೀಕ್ಷೆ ನೀಡಿ, ಲಿಂಗಾಯತ ಧರ್ಮ ನಮಗೆಲ್ಲರಿಗೂ ಧಾರೆ ಎರೆದಿದ್ದಾರೆ. ಆದರೆ ದುರಂತ ಎಂದರೆ ಇಷ್ಟೆಲ್ಲಾ ತ್ಯಾಗ ಮಾಡಿ, ನಮಗಾಗಿ ಧರ್ಮ ನೀಡಿ ಹೋದ ಶರಣರ ಆಶೆಯಗಳನ್ನು ನಾವು ಪ್ರಾಮಾಣಿಕವಾಗಿ ಈಡೇರಿಸಿದೇವೆ ಎಂದರೆ ಖಂಡಿತವಾಗಿಯೂ ಇಲ್ಲವೇ ಇಲ್ಲ ಎಂದು ಹೇಳಬಹುದು.
ಶರಣರು ಕೊಟ್ಟು ಹೋದ ವಚನ ಸಾಹಿತ್ಯ ಸಂಸ್ಕೃತಿಕ
ಧರ್ಮಕ್ಕೆ ನಾವು ಇಂದಿಗೂ ಸಂವಿಧಾನದ ಮಾನ್ಯತೆ ಕೊಡಿಸಲು ಸಾಧ್ಯವೇ ಆಗಿಲ್ಲ ಎಂಬುವುದೇ ಅತ್ಯಂತ ನೋವಿನ ಸಂಗತಿಯಾಗಿದೆ. ಇದಕ್ಕೆ ಕಾರಣ ಪ್ರಮುಖವಾಗಿ ಹಲವಾರು ಇರಬಹುದು. ಅದರಲ್ಲಿ ಮುಖ್ಯವಾದದ್ದು ಅಂದರೆ ಪ್ರತಿಷ್ಠೇ, ಅಹಂ, ನಾನು, ಒಗ್ಗಟ್ಟಾಗಿ ಇಲ್ಲದೆ ಇರುವುದು ಸೇರಿದಂತೆ ಇನ್ನೂ ಅನೇಕ ಗುಣಗಳೇ ಲಿಂಗಾಯತ ಧರ್ಮ ಸಾಂವಿಧಾನಿಕ ಮಾನ್ಯತೆಗೆ ಹಿನ್ನಡೆಗೆ ಬಲವಾದ ಕಾರಣ ಇರಬಹುದಾಗಿದೆ.
ಹೀಗೆ ಲಿಂಗಾಯತ ಧರ್ಮ ವೈದಿಕರ ಕಪಿಮುಷ್ಠಿಯಲ್ಲಿ ಬಂಧಿಯಾಗಿ ನರಳುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಅದಕ್ಕಾಗಿಯೇ ಲಿಂಗಾಯತ ಧರ್ಮಕ್ಕೆ ಇಲ್ಲಿಯತನಕ ಸಂವಿಧಾನದ ಮಾನ್ಯತೆ ಪಡೆಯಲು ಸಾಧ್ಯವಾಗಲಿಲ್ಲ ಎನ್ನಬಹುದು. ಅಷ್ಟರಮಟ್ಟಿಗೆ ನಮ್ಮೆಲ್ಲರಲ್ಲಿಯೂ
ಸ್ವಾರ್ಥ ನಿಲುವು ತುಂಬಿಕೊಂಡು ಹೋಗಿವೆ.
ಅಂದ ಹಾಗೆ ಈ ಎಲ್ಲಾ ಆಘಾತಗಳನ್ನು ಸಹಿಸಿಕೊಂಡೂ ಈಗಲೂ ಜೀವಂತವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದು, ಅದೀಗ ತನ್ನ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಬಸವ ಸಂಸ್ಕೃತಿ ಅಭಿಯಾನದ ಮೂಲಕ ದನಿ ಎತ್ತಿರುವುದು ಅತ್ಯಂತ ಅರ್ಥಪೂರ್ಣ, ಸಮರ್ಥನೀಯವಾಗಿದೆ.
ಹಾಗಾಗಿ ಲಿಂಗಾಯತರು ಈಗ ನಡೆಸಿರುವ ಮತ್ತು ನಡೆಸುತ್ತಿರುವ ಹೋರಾಟಗಳು ಸತ್ಯದ ದಾರಿಯಲ್ಲಿ ಇವೆ. ಸಂವಿಧಾನ ಮಾನ್ಯತೆ ಸಿಗುವವರೆಗೂ ನಿರಂತರವಾದ ಹೋರಾಟಗಳು ನಡಸಲೇಬೇಕಾದ ಅಗತ್ಯ, ಅನಿವಾರ್ಯತೆ ಸಧ್ಯ ಎದುರಾಗಿದೆ ಅನ್ನುವುದನ್ನು ಯಾರೂ ಮರೆಯಬಾರದು,
ಕಾರಣ ಲಿಂಗಾಯತ ಧರ್ಮ, ಯಾವುದೇ ಗೊಡ್ಡು ಸಂಪ್ರದಾಯದ ಅಥವಾ ಸನಾತನ ಶಾಸ್ತ್ರಾಚರಣೆಗಳ ಕಟ್ಟುಪಾಡುಗಳಿಗೆ ಒಳಗಾಗದೆ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಮಹೋನ್ನತ ಸದುದ್ದೇಶ
ಹೊಂದಿರುವ ಕಾರಣದಿಂದಲೇ ಲಿಂಗಾಯತ ಸ್ವತಂತ್ರ ಧರ್ಮದ ಮನ್ನಣೆ ಪಡೆಯಲು ಅಗತ್ಯವಾದ ಎಲ್ಲ ಅರ್ಹತೆಗಳನ್ನೂ ಪಡೆದಿದೆ ಎಂಬುದಂತೂ ಸತ್ಯ.
ಮೇಲಾಗಿ ಭಾರತ ಸಂವಿಧಾನದಲ್ಲಿ ಹೇಳಿರುವ ಎಲ್ಲಾ ಮೂಲತತ್ವ ಅಂಶಗಳು ಲಿಂಗಾಯತ ಧರ್ಮ ಹೊಂದಿದೆ.
ಈ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಮನ್ನಣೆ ದೊರಕಬೇಕು ಎನ್ನುವ ಉದ್ದೇಶದಿಂದ ನಡೆಯುತ್ತಿರುವ ಹೋರಾಟಗಳು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು.
ಈ ನಿಟ್ಟಿನಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಜಂಟಿಯಾಗಿ ಹೋರಾಟದ ಮುಖಾಂತರ ಪ್ರಯತ್ನ ಮಾಡುತ್ತಿರುವುದು ಉತ್ತಮ ಬೆಳವಣಿಗೆ.
ಈ ನಿಟ್ಟಿನಲ್ಲಿ ಅಕ್ಟೋಬರ್ ತಿಂಗಳ
5 ರಂದು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲಾ ಮಠಾಧೀಶರ ಸಮ್ಮುಖದಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಈ ಕೆಳಕಂಡ ಪ್ರಮುಖ ವಿಚಾರಗಳು ಚರ್ಚಿಸಲು ಸಂಬಂಧಪಟ್ಟ ಮಠಾಧೀಶರಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಆ ದಿಸೆಯಲ್ಲಿ ಮಠಾಧೀಶರ ಒಕ್ಕೂಟ ಹಾಗೂ ಮಾಹಾಸಭಾ ದಿಟ್ಟ ಹೆಜ್ಜೆ ಇರಿಸುತ್ತದೆ ಎಂಬ ಆಶಾಭಾವನೆಯೊಂದಿಗೆ ನಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇವೆ.
ಪ್ರಮುಖ ವಿಚಾರಗಳು ಮತ್ತು ಆಶಯಗಳು :
*ಲಿಂಗಾಯತ ಧರ್ಮ ಸಾಂವಿಧಾನಿಕ ಮಾನ್ಯತೆಗಾಗಿ ನಿರಂತರವಾಗಿ ಕೇಂದ್ರ ಸರ್ಕಾರದ ಒತ್ತಡವನ್ನು ಹಾಕುವುದು.
*ನವದೆಹಲಿಯಲ್ಲಿ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಹೋರಾಟ ಮಾಡಬೇಕು.
*ಬಸವಕಲ್ಯಾಣದಲ್ಲಿ ವಚನ ಸಾಹಿತ್ಯದ ಕುರಿತ ಸಂಶೋಧನಾ ಕೇಂದ್ರ ಆರಂಭಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಬೇಕು.
*ಬಸವಾದಿ ಶರಣರು ಬೋಧಿಸಿದ ಲಿಂಗಾಯತ ಧರ್ಮ, ಶರಣ ತತ್ವಗಳು ಮತ್ತು ಆಚರಣೆಗಳನ್ನು ಜಾರಿಗೆ ತರುವುದು, ಶರಣ ಸಾಹಿತ್ಯದ ಪ್ರಚಾರ, ಪ್ರಸಾರ ಕಾರ್ಯಗಳನ್ನು ಹೆಚ್ಚಿಸುವುದು ಕೆಲಸ ಆಗಬೇಕು.
*ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು, ಸಿದ್ದರಾಮೇಶ್ವರ, ಮಡಿವಾಳ ಮಾಚಿದೇವರು, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ನುಲಿಯ ಚಂದಯ್ಯ, ಸಂಘೋಳ ನಾಗಿದೇವ, ಮೇದಾರ ಕೇತಯ್ಯ, ಜೇಡರ ದಾಸಿಮಯ್ಯ, ಆಯಕ್ಕಿ ಮಾರಾಯ್ಯ, ಕುರುಬ ಗೋಲಾಳ, ಅಕ್ಕಮಹಾದೇವಿ, ಸತ್ಯಕ್ಕ, ಅಕ್ಕನಾಗಮ್ಮ, ನೀಲಮ್ಮ ಮತ್ತು ಗಂಗಾಂಬಿಕೆ ದೇವಿಯವರ ಹಾಗೂ ಬಹುತೇಕ ಎಲ್ಲ ಪ್ರಮುಖ ಶರಣರ ಜಯಂತಿಗಳನ್ನು ವೈಚಾರಿಕ ಮೌಲ್ಯಗಳ ನೆಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸುವುದು.
*ಬಸವಕಲ್ಯಾಣ ಹಾಗೂ ಕೂಡಲಸಂಗಮ ಕ್ಷೇತ್ರಗಳು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ತಾಣವಾಗಿ ಘೋಷಣೆ ಮಾಡಬೇಕು. ಅದೇ ರೀತಿ ಕೇಂದ್ರ ಸರ್ಕಾರದ ವತಿಯಿಂದ ಬಸವ ಜಯಂತಿ ಆಚರಣೆಗೆ ಒತ್ತಾಯಿಸುವ ಕೆಲಸ ಆಗಬೇಕು. ಜೊತೆಗೆ ಬಸವಕಲ್ಯಾಣ ಜಿಲ್ಲಾ ಕೇಂದ್ರ ಆಗುವಂತೆ ಹೋರಾಟ ನಡೆಸಬೇಕು.
*ವಚನ ಸಾಹಿತ್ಯದ, ಶರಣರ ಚರಿತ್ರೆಗಳ ಹಾಗೂ ಶರಣರ ಸ್ಥಳಗಳ ಸಂಶೋಧನೆಗೆ ಒತ್ತು ನೀಡುವುದು.
ಈ ನಿಟ್ಟಿನಲ್ಲಿ ಶರಣರ ಹೆಸರಲ್ಲಿ ಒಂದು ವಿಶ್ವವಿದ್ಯಾನಿಲಯ ಸ್ಥಾಪನೆಗೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಬೇಕು.
*ಲಿಂಗಾಯತ ಸಮುದಾಯ (ಅಂದರೆ ಅದರ ಎಲ್ಲಾ ಉಪಪಂಗಡಗಳ) ಸಮಗ್ರ ವಿಕಾಸಕ್ಕೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಿ ಸಮುದಾಯದ ಸಂಘ ಸಂಸ್ಥೆಗಳ, ಪಂಗಡಗಳ ಮತ್ತು ಸಮಸ್ಥ ಲಿಂಗಾಯತರ ಏಳಿಗೆಗಾಗಿ ಕಾರ್ಯ ಚಟುವಟಿಕೆಗಳು ಹಮ್ಮಿಕೊಳ್ಳುವುದು ಅಗತ್ಯವಿದೆ ಹಾಗೂ ಲಿಂಗಾಯತ ಬಡ ಮಕ್ಕಳಿಗೆ ಉಚಿತ ಪ್ರಸಾದ ನಿಲಯ, ಶಿಕ್ಷಣ ಪ್ರಸಾರ, ವಿದ್ಯಾರ್ಥಿ ವೇತನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಸನ್ಮಾನ, ಶ್ರೇಷ್ಠ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳನ್ನು ಮಾಡಿದ ಮಹನೀಯರಿಗೆ ಪ್ರಶಸ್ತಿ, ಸನ್ಮಾನ ಮಾಡುವುದು ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುವುದು.
*ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮಾಜದ ಬಾಂಧವರಿಗೆ ದೊರೆಯುವಂತೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.ಕಾಯಕ, ದಾಸೋಹ, ಸ್ತ್ರೀ ಸಮಾನತೆ ಜಾತ್ಯಾತೀತತೆ (ಜಾತಿ ಪಂಥಗಳ ನಿರಾಕರಣೆ), ಪರಿಸರ ರಕ್ಷಣೆ, ಪ್ರಾಣಿದಯೆ, ಶಾಖಾಹಾರಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು.
*ಲಿಂಗಾಯತರಿಗೆ ಯಾವುದೇ ರೀತಿಯ ತೊಂದರೆ, ಅನ್ಯಾಯ, ಅತ್ಯಾಚಾರ, ನಿರ್ಲಕ್ಷ್ಯ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ತಾರತಮ್ಯ ಉಂಟಾಗುವ ಸಂದರ್ಭಗಳಲ್ಲಿ ಅವುಗಳನ್ನು ನಿವಾರಿಸಿಕೊಳ್ಳಲು ಸಮಗ್ರ ಸಮುದಾಯದ ಸಂಘಟಿತ ಹೋರಾಟವನ್ನು ಶಾಂತಿಯುತವಾಗಿ, ಅಹಿಂಸಾತ್ಮಕವಾಗಿ, ಕಾನೂನಿಗೆ ಭಂಗ ಬಾರದಂತೆ ನಡೆಸುವುದು ಆಗಬೇಕು.
*ಬೇರೆ ಬೇರೆ ರಾಜ್ಯಗಳಲ್ಲಿ ಲಿಂಗಾಯತರ ಧಾರ್ಮಿಕ ಆಚಾರ, ವಿಚಾರ, ಸಂಪ್ರದಾಯಗಳಲ್ಲಿ ಅನೇಕ ಭಿನ್ನತೆಗಳಿವೆ. ಭಿನ್ನತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದು.
*ಸಮಾವೇಶಗಳನ್ನು, ವಿಚಾರ ಸಂಕಿರಣಗಳನ್ನು, ತರಬೇತಿ ಶಿಬಿರಗಳನ್ನು ಏರ್ಪಡಿಸಿ ಸಮಸ್ತ ಲಿಂಗಾಯತ ಸಮುದಾಯಗಳಲ್ಲಿ ಏಕತೆ ಮೂಡಿಸುವುದು. ವಿಚಾರ ವಿನಿಮಯ ಮತ್ತು ನಿರಂತರ ಬೆಳವಣಿಗೆಗಳನ್ನು ಇತರೆ ರಾಜ್ಯಗಳ ಲಿಂಗಾಯತರಿಗೆ ತಿಳಿಸಲು ಒಂದು ಮಾಸಿಕ ಪತ್ರಿಕೆಯನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಮತ್ತು ಇಂಗ್ಲೀಷ್‍ನಲ್ಲಿ ಪ್ರಕಟಿಸುವುದು ಸೇರಿದಂತೆ ಲಿಂಗಾಯತ ಸಮುದಾಯದ ಏಳಿಗೆ, ಏಕತೆ, ರಕ್ಷಣೆಗೆ ಸಂಬಂಧಿಸಿದ ರಾಷ್ಟ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಯಾವುದೇ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಕೊನೆಯ ಮಾತು – ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಆಯೋಜಿಸಿದ್ದ ಬಸವ ಸಂಸ್ಕೃತಿ ಅಭಿಯಾನ ಸಮಾರೋಪ ಸಮಾರಂಭ ಇದೇ ತಿಂಗಳ 5 ರಂದು ಬೆಂಗಳೂರಿನಲ್ಲಿ ಜರುಗಲಿದೆ. ಈ ಮೂಲಕ ಸಮಸ್ತ ಲಿಂಗಾಯತ ಬಂಧುಗಳಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ತಾವೆಲ್ಲರೂ ಈ ಮಹಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಬೇಕಾಗಿ ವಿನಂತಿ.

- ಸಂಗಮೇಶ ಎನ್ ಜವಾದಿ.
ಶರಣ ತತ್ವ ಚಿಂತಕರು, ಬೀದರ್ ಜಿಲ್ಲೆ.




















