ಶ್ರೇಷ್ಠ ಲಿಂಗಾಯತ ಧರ್ಮ ಅರಿಯದೇ ಹೋದಿರಲ್ಲಾ…ಆತ್ಮ ವಂಚನೆಗೆ ಇಳಿದಿರಲ್ಲಾ…!!!
ಈ ಭಾರತ ದೇಶದಲ್ಲಿ ಪ್ರಬಲ ಮತಗಳೆಂದರೆ ಒಂದು ಶೈವ ಇನ್ನೊಂದು ವೈಷ್ಣವ. ಭಾರತದ ದ್ರಾವಿಡ ಪರಂಪರೆಯ ಮೊದಲ ಯೋಗಿ, ಶಿವ.
ಈ ಶಿವನಿಂದಲೇ ಹುಟ್ಟಿದ್ದು ಶೈವ ಮತ. ಇಂಡೋನೇಷಿಯಾದಿಂದ ಭಾರತಕ್ಕೆ ಬಂದ ಆರ್ಯನ್ನರ ಮತವೇ ವೈಷ್ಣವ ಮತ. ಇದುವೇ ವೈದಿಕ ಧರ್ಮವಾಗಿ ಇಂದು ಹಿಂದೂ ಧರ್ಮವೆಂದು ಕರೆಯಲ್ಪಡುತ್ತದೆ. ಮೊದ ಮೊದಲು ವೈಷ್ಣವರು ತಮ್ಮ ಮತ ಸ್ಥಾಪನೆಗಾಗಿ ಶೈವರ ಮೇಲೆ ಮತ್ತು ಶೈವ ಸಿದ್ಧಾಂತದ ಮೇಲೆ ದಾಳಿ ನಡೆಸಿದಾಗ ಶೈವರು ಸೋಲಲಿಲ್ಲ; ಬದಲಿಗೆ ವೈಷ್ಣವರನ್ನು ಸೋಲಿಸಿದರು. ವೈಷ್ಣವರು ನಿಧಾನಕ್ಕೆ ಶೈವರ ಧಾರ್ಮಿಕ ಆಚರಣೆಯನ್ನು ರೂಢಿಸಿಕೊಂಡು ಮುಂದೆ ತಮ್ಮ ವೈಷ್ಣವ ಸಿದ್ಧಾಂತವನ್ನು ಹೇರಲ್ಪಟ್ಟು ನಾವು ನೀವು ಬೇರೆಯಲ್ಲ ಎಂದು ಹೇಳುತ್ತಲೇ ತಮ್ಮ ವೈದಿಕ ಆಚರಣೆಯನ್ನು ಶೈವರ ಮನ ಮತ್ತು ಮನೆಗಳಲ್ಲಿ ಬಿತ್ತಿದರಲ್ಲದೆ ಶೈವರ ಸಿದ್ಧಾಂತ ಒಳಗೊಳಗೆ ಗೌಣ ಮಾಡಲು ಪ್ರಾರಂಭಿಸಿದರು. ನಿಧಾನಕ್ಕೆ ಧಾರ್ಮಿಕವಾಗಿ ಶೈವ ಮತ್ತು ವೈಷ್ಣವರ ಆಚರಣೆಗಳು ಕೂಡಿಕೊಂಡು ಹಿಂದೂ ಜನಾಂಗದ ನಾಗರಿಕತೆ ಹುಟ್ಟಿಕೊಂಡಿತು.
ಸಿಂಧೂ ನಾಗರಿಕತೆಯಲ್ಲಿ ವಾಸ ಮಾಡುವವರನ್ನು ಸಿಂಧೂ ಜನಾಂಗವೆಂದು (ಶೈವ ಮತ್ತು ವೈಷ್ಣವರನ್ನು) ಕರೆಯುತ್ತಿದ್ದರು. ಸಿಂಧೂ ನಾಗರಿಕತೆಯ ಮೇಲೆ ದಂಡೆತ್ತ ಬಂದ ಮೊಗಲರ ಬಾಯಲ್ಲಿ ‘ಸ’ ಕಾರವು ‘ಹ’ ಕಾರವಾಗಿ ಉಚ್ಛರಿಸಲ್ಪಡುತ್ತಿತ್ತು. ಆದ್ದರಿಂದ ಅವರು ‘ಸಿ’ ಕಾರವನ್ನು ‘ಹಿ’ ಕಾರ ಬಳಸಿ ಸಿಂದು ಎಂಬ ಪದ ಗೌಣವಾಗಿ ಹಿಂದು ಎಂದು ಉಚ್ಛಾರವಾಯಿತು. ಆಗಿನಿಂದ ಹಿಂದೂಗಳೆಂದು ಕರೆಯಲ್ಪಟ್ಟಿತು ಎಂದು ವಿವೇಕಾನಂದರು ಉಲ್ಲೇಖಿಸುತ್ತಾರೆ. ಒಟ್ಟಾರೆ ಸಿಂಧೂ ನಾಗರಿಕತೆಯಲ್ಲಿ ವಾಸಿಸಲ್ಪಡುತ್ತಿರುವ ಶೈವರನ್ನು ವೈಷ್ಣವರನ್ನು ಇನ್ನಿತರ ಧರ್ಮದವರನ್ನು ಹಿಂದುಗಳೆಂದು ಕರೆಯಲ್ಪಡುವುದು ವಾಡಿಕೆಯೇ ಹೊರತು ಧರ್ಮದ ಆಚರಣೆಗಳು ಬೇರೆ ಬೇರೆಯಾಗಿವೆ.
ವಿಶ್ವಗುರು ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಕಲಸು ಮೇಲೋಗರವಾದ ವೈದಿಕ ಧರ್ಮದ, ಬ್ರಾಹ್ಮಣ ಕುಲದ, ಶೈವ ಸ್ಮಾರ್ಥ ಸಂಪ್ರದಾಯದ ಮನೆತನದಲ್ಲಿ ಹುಟ್ಟಿದ ಕಾರಣ ಅವರ ತಂದೆ ತಾಯಿಗಳು ವೈದಿಕ ಮತ್ತು ಶೈವ ಆಚರಣೆಗಳನ್ನು ಒಟ್ಟೊಟ್ಟಿಗೆ ಆಚರಣೆ ಮಾಡುತ್ತಿದ್ದರು. ಎಂಟು ವರ್ಷದ ಬಾಲಕ ಬಸವರಸರಿಗೆ ಯೋಗಿ ಶಿವನ ಮೇಲೆ ಅಪಾರ ಪೂಜ್ಯಭಾವ ಇರುವ ಕಾರಣ ವೈದಿಕತೆಯನ್ನು ದಿಕ್ಕರಿಸಿ ಶೈವ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಪ್ರಾರಂಭಿಸಿದರು. ವೈದಿಕ ಧರ್ಮದಲ್ಲಿನ ಹೆಣ್ಣು, ಗಂಡು, ಹೊಲೆಯ ಬೇಧಗಳ ಅಸಮಾನತೆ ಕಾರಣವಾಗಿ ಮನೆ ಬಿಟ್ಟು ಕೂಡಲ ಸಂಗಮಕ್ಕೆ ಬಂದು ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿದರು. ವೇದ, ಶಾಸ್ತ್ರ, ಉಪನಿಷತ್, ಆಗಮ, ಭರತ, ಛಂದಸ್ಸು, ವ್ಯಾಕರಣ ಎಲ್ಲವನ್ನು ಆಧ್ಯಯನ ಮಾಡಿದ ಮೇಲೆ ಶೈವ ಧರ್ಮದಲ್ಲಿಯೂ ವೈದಿಕದಲ್ಲಿರುವಂತೆ ಅಸಮಾನತೆಗಳನ್ನು ಕಂಡು ಶೈವದಿಂದಲೂ ಹೊರ ಬಂದು ಎಲ್ಲಾ ಮಾನವರು ಯಾವುದೇ ಬೇಧವಿಲ್ಲದೆ ಆಚರಿಸಲ್ಪಡುವಂತಹ ಧರ್ಮವನ್ನು ಸ್ಥಾಪಿಸಬೇಕೆಂದು ಸಂಕಲ್ಪಿಸಿದರು. ತಮ್ಮ ಇಪ್ಪತ್ತೊಂದನೆ ವರ್ಷದಲ್ಲಿ ಪರಶಿವನ ಕುರುಹಾದ ಇಷ್ಟಲಿಂಗವನ್ನು ಕಂಡುಹಿಡಿದು, ವೈದಿಕರು ಪರಬ್ರಹ್ಮ ಎನ್ನುವರು, ಆಗಮಿಕರು ಪರಮಶಿವ ಎನ್ನುವರು, ಯಹೋದಿಗಳು ಯಹೋವಾ ಎನ್ನುವರು, ಇಸ್ಲಾಮಿಕರು ಅಲ್ಲಾಹ್ ಎನ್ನುವರು ಹಾಗೆ ಅಂತಹ ದೇವನನ್ನು ‘ಲಿಂಗದೇವಾ’ ಎಂದು ಹೆಸರಿಟ್ಟು ಸ್ವತಂತ್ರ ಲಿಂಗಾಯತ ಧರ್ಮವನ್ನು ಹುಟ್ಟು ಹಾಕಿದರು. ವೈದಿಕ ಮತ್ತು ಶೈವರಿಂದ ತುಳಿತಕ್ಕೊಳಗಾದ, ಶೂದ್ರರೆಂದು ಕರೆಯಲ್ಪಡುತ್ತಿದ್ದ ಹೆಣ್ಣುಮಕ್ಕಳಿಗೆ ಮತ್ತು ನಿಮ್ನ ವರ್ಗದವರಿಗೆ ಮೊದಲು ಈ ಧರ್ಮದ ದೀಕ್ಷೆಯನ್ನು ನೀಡಿದರು. ಅಂದು ಕಲ್ಯಾಣದಲ್ಲಿ ಏಳು ನೂರಾ ಎಪ್ಪತ್ತು ಕಾಯಕ ಜಾತಿ ಮೂಲದಿಂದ ಬಂದವರಿಗೆಲ್ಲಾ ಈ ಧರ್ಮದೊಳಗೆ ಕರೆದುಕೊಂಡು ಇಷ್ಟಲಿಂಗ ದೀಕ್ಷೆ ಸಂಸ್ಕಾರ ನೀಡಿ ಅವರೆಲ್ಲನ್ನೂ ಅರಿವಿನ ಮಹಾಂತರನ್ನಾಗಿಸಿ, ಲಿಂಗಾಯತರನ್ನಾಗಿಸಿದರು. ಲಿಂಗಾಯತ ಧರ್ಮ ಸ್ವತಂತ್ರ, ಪರಿಪೂರ್ಣ ಧರ್ಮವೇ ಹೊರತು ಯಾವುದೇ ಧರ್ಮದ ವಿಚಾರವನ್ನು ಎರವಲು ಪಡೆದ ಧರ್ಮವಲ್ಲ.
ಬಸವಣ್ಣನವರ ಸಮತಾ ತತ್ವನ್ನು ಒಪ್ಪದೇ ಕರಕಟ ಕಾಡಿದ ಅಂದಿನ ಶೈವ ವೈಷ್ಣವ ಕಲಸು ಮೇಲೋಗರ ಆಷಾಢಭೂತಿಗಳೇ ಇಂದು ಲಿಂಗಾಯತ ಧರ್ಮಕ್ಕೆ ಅಡ್ಡಿಯನ್ನುಂಟು ಮಾಡುವ ಪ್ರಬಲ ಶಕ್ತಿಯಾಗಿ ಬೆಳೆದಿರುವರು. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧ ಮಾಡುವವರಿಗೆ ನೂರಾರು ಪ್ರಶ್ನೆಗಳಿವೆ. ಬಸವಣ್ಣನವರು ಶೈವಧರ್ಮವನ್ನು ಉದ್ಧಾರ ಮಾಡಿದರೆಂದು ಹೇಳುವ ನೀವು; ಉದ್ಧರಿಸಿದ ವಿಚಾರವನ್ನು ನೀವೇಕೆ ಅಳವಡಿಸಿಕೊಂಡು ಬಸವಣ್ಣನವರ ಹಾಗೆ ಜನ ಸಾಮಾನ್ಯರಿಗೆ ಸಮತಾ ತತ್ವವನ್ನು ಜಾರಿಗೆ ತರಲಿಲ್ಲ?. ಜಂಗಮ ಜಾತಿಯನ್ನು ಪೋಷಿಸುತ್ತಾ ಬ್ರಾಹ್ಮಣ ನೀತಿಯನ್ನು ಅನುಸರಿಸುತ್ತಾ ಶೈವ ವೈದಿಕತೆಯನ್ನೇ ಜೀವಾಳವಾಗಿಸಿಕೊಂಡಿರೇಕೆ?. ಈವರೆಗೂ ಬಸವಣ್ಣನವರಂತೆ ಹೆಣ್ಣುಮಕ್ಕಳಿಗೆ ಯಾವ ಸ್ಥಾನಮಾನ, ಜಗದ್ಗುರು ಪೀಠ ಕೊಟ್ಟಿರುವಿರಿ?. ವೀರಶೈವ ಲಿಂಗಾಯತ ಒಂದು ಎನ್ನುವ ನೀವು ನಿಮ್ಮನ್ನು ಹೊತ್ತು ಮೆರೆಸಿದ ವೀರಶೈವ ಲಿಂಗಾಯತರಿಗೆ ಯಾವ ಪೀಠ ನೀಡಿರುವಿರಿ? ಪೀಠ ಕೇಳಿದ ಪಂಚಮಸಾಲಿ ಸಮುದಾಯಕ್ಕೆ ನಾಯಿ, ನರಿ, ಹಂದಿಯಾಗಿ ಹುಟ್ಟುವಿರಿ ಎಂದು ಶಾಪ ಏಕೆ ಕೊಟ್ಟಿರಿ?. (ನಿಮ್ಮಿಂದ ಅವರು ಹೊರ ಬಂದು ಪೀಠ ಸ್ಥಾಪನೆ ಮಾಡಿಕೊಂಡಿದ್ದು ಇತಿಹಾಸವಿದೆ) ಇಂದು ಜಾತಿಗೊಂದು ಪೀಠವಾಗಲು ಕಾರಣವೇನು? ಇದಕ್ಕೆಲ್ಲಾ ಉತ್ತರ ನಿಮ್ಮಿಂದ ಸಾಧ್ಯವೆ? ಸಾಧ್ಯವಿಲ್ಲ. ಆದ್ದರಿಂದ ನಿಮ್ಮ ಆಚಾರ ವಿಚಾರಕ್ಕೂ ಬಸವಣ್ಣನವರ ಸಮತಾ ವಿಚಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ನಿಮ್ಮ ಧರ್ಮ ಪರಂಪರೆ, ನಿಮ್ಮ ಪೂರ್ವ ಇತಿಹಾಸ ಏನೇ ಇರಲಿ ಅದನ್ನು ಪಾಲಿಸಿಕೊಂಡು ಹೋಗಿ ಆದರೆ ಬಸವಣ್ಣನವರು ಸಂಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ವಿರೋಧಿಸಿ ಪಾಪಕ್ಕೆ ಗುರಿಯಾಗದಿರಿ. ಬಸವಣ್ಣನವರ ಸಮತಾ ತತ್ವ ನಿಮಗೆ ಒಪ್ಪಲು ಸಾಧ್ಯವಾಗದಿದ್ದರೆ ಬಸವಣ್ಣನವರನ್ನು ಬಿಟ್ಟುಬಿಡಿ, ವೋಟಿಗಾಗಿ ತಮ್ಮ ಅಸ್ಮಿತೆಯನ್ನು ಮಾರಿಕೊಳ್ಳುವ ಹಾಳಾದ ರಾಜಕಾರಣಿಗಳನ್ನು ಮುಂದು ಮಾಡಿಕೊಂಡು ಲಿಂಗಾಯತ ಧರ್ಮದ ದಿಕ್ಕು ತಪ್ಪಿಸುವಿರೇಕೆ?. ಲಿಂಗಾಯತ ಧರ್ಮದ ಸ್ವತಂತ್ರ ಮಾನ್ಯತೆಯನ್ನು ತಪ್ಪಿಸಿ ಇಡೀ ಲಿಂಗಾಯತ ಧರ್ಮಿಯರಿಗೆ ಸಿಗುವ ಅಲ್ಪಸಂಖ್ಯಾತ ಹಕ್ಕುಗಳಿಂದ ವಂಚಿಸುವಿರೇಕೆ?.
ನಿಮ್ಮ ಕಾಗಕ್ಕ ಗುಬ್ಬಕ್ಕನ ಕಥೆ ಕೇವಲ ನಿಮ್ಮ ಭಕ್ತರಿಗೆ ಮಾತ್ರ ಹೇಳಿ. ಈಗ ಕಾಲ ಬದಲಾಗಿದೆ ಲಿಂಗಾಯತ ಧರ್ಮೀಯರು ಜಾಗೃತರಾಗಿದ್ದಾರೆ ಮತ್ತು ತಮ್ಮ ಆಸ್ಮಿತೆಗಾಗಿ ನಿರಂತರ ಹೋರಾಡುತ್ತಾರೆ. ವೈದಿಕ ಧರ್ಮದ ಗುಲಾಮರಾಗಿ ಇನ್ನೆಷ್ಟು ದಿನ ಬದುಕುವಿರಿ. ಧರ್ಮಗುರು ಬಸವಣ್ಣ, ವಚನ ಸಾಹಿತ್ಯ ಧರ್ಮ ಸಂವಿಧಾನ ಎಂದು ಒಪ್ಪಿಕೊಂಡು ಬರಲು ಇನ್ನೂ ಕಾಲ ಮಿಂಚಿಲ್ಲ ಬನ್ನಿ. ಈಗಾಗಲೇ ಕನ್ನಡದ ನೆಲದಿಂದ ಅಧಿಕೃತವಾಗಿ ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕಿದೆ. ಸತತ ಹೋರಾಟ ಫಲವಾಗಿ ಕೇಂದ್ರದಿಂದಲೂ ಇಂದಲ್ಲ ನಾಳೆ ಸಿಗುತ್ತದೆ ಎಂಬ ಅಪಾರ ಭರವಸೆ ಇದೆ. ಬಸವತತ್ವ ಒಪ್ಪುವ ಲಿಂಗಾಯತ ಧರ್ಮೀಯರು ಅಸಂಖ್ಯಾತರಿದ್ದಾರೆ. ಶ್ರೇಷ್ಠ ಲಿಂಗಾಯತ ಧರ್ಮ ಅರಿಯದೇ…ಆತ್ಮ ವಂಚನೆ ಮಾಡಿಕೊಳ್ಳದಿರಿ. ನಿಮಗೆ ಬಿನ್ನಕ್ಕೆ ಕರೆದು ಪಾದ ಪೂಜೆ ಮಾಡಿ ಲಿಂಗಾಯತರು ಹೋಳಿಗೆ ತುಪ್ಪ ಉಣ್ಣಿಸಿ-ಬೆಳೆಸಿ, ಐಷರಾಮಿ ಮಠ ಕಟ್ಟಿಕೊಟ್ಟು, ಹವಾ ನಿಯಂತ್ರಣ ವಾಹನ ಕೊಡಿಸಿ ನಿಮ್ಮ ಸೇವೆ ಹಗಲಿರುಳು ಮಾಡಿರುವರು ಅದರ ಋಣಕ್ಕಾದರೂ ಅವರ ಈ ಕಷ್ಟ ಕಾಲದಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ಜೊತೆ ಕೈಜೋಡಿಸಿ, ಸ್ವತಂತ್ರ ಧರ್ಮ ಮಾನ್ಯತೆ ಕೊಡಿಸಿ ಅವರ ಕುಟುಂಬದ ನೆಮ್ಮದಿ ಜೀವನಕ್ಕೆ ಸಹಕರಿಸಿರಿ. ನಿಮ್ಮ ಸಣ್ಣತನ ಅದೆಷ್ಟು ಬೇಗ ಬಿಡುವಿರೋ ಅಷ್ಟು ಒಳ್ಳೆಯದು ಇಲ್ಲವಾದರೆ ಆಗ ಕಲ್ಯಾಣ ಕ್ರಾಂತಿಯಲ್ಲಿ ಸನಾತನಿಗಳು ಸೋತು ಸುಣ್ಣವಾದಂತೆ ಈಗ ಲಿಂಗಾಯತ ಕ್ರಾಂತಿಯಲ್ಲಿ ಸುಟ್ಟು ಭಸ್ಮವಾಗಿ ನಿಮ್ಮ ನಿಮ್ಮ ಮಠವನ್ನು ಕಳೆದುಕೊಳ್ಳುವ ದಿನಗಳು ದೂರವಿಲ್ಲ.
- ಬಸವ ಧರ್ಮ ಚಿಂತಕರು,
ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ.




















