ಬಳ್ಳಾರಿ / ಕಂಪ್ಲಿ : ಮೇಲ್ಭಾಗದ ಕಾರ್ಖಾನೆ ಸೇರಿದಂತೆ ಇನ್ನಿತರ ಕಡೆಯಿಂದ ಬರುವ ಕಲುಷಿತ ನೀರಿನಿಂದಾಗಿ ತುಂಗಭದ್ರ ನದಿಯು ಮಲಿನವಾಗುತ್ತಿದ್ದು, ಈಗಲೇ ಜನರು ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನದಲ್ಲಿ ದೊಡ್ಡ ದೊಡ್ಡ ರೋಗ ರುಜಿನಗಳಿಗೆ ತುತ್ತಾಗಬೇಕಾಗುತ್ತದೆ. ಆದ್ದರಿಂದ ನದಿ ಉಳಿವಿಗೆ ಪ್ರತಿಯೊಬ್ಬರು ಬೆಂಬಲ ನೀಡುವ ಜೊತೆಗೆ ಕೈಜೋಡಿಸಬೇಕು ಎಂದು ನವದೆಹಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪುರ ಹೇಳಿದರು.
ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ನವದೆಹಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನಾ, ಪರ್ಯಾವರಣ ಟ್ರಸ್ಟ್ ಶಿವಮೊಗ್ಗ, ಬಳ್ಳಾರಿ ಮತ್ತು ಕೊಪ್ಪಳ ನಿರ್ಮೂಲನಾ ತುಂಗಭದ್ರ ಅಭಿಯಾನ ಸಮಿತಿಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ನಿರ್ಮೂಲನಾ ತುಂಗಭದ್ರ ಅಭಿಯಾನದ ಮೂರನೇ ಹಂತ ಪಾದಯಾತ್ರೆ (ಕಿಷ್ಕಿಂದಯಿಂದ ಮಂತ್ರಾಲಯವರೆಗಿನ) ಯ ಸಮಾಲೋಚನಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ತುಂಗಭದ್ರಾ ನದಿ ಸಂಪೂರ್ಣ ಕಲುಷಿತವಾಗುವ ಸಾಧ್ಯತೆಯಿದೆ. ತುಂಗಭದ್ರಾ ನದಿಯ ಮೂವರು ಭಾಗಗಳಲ್ಲಿ ಪ್ರತ್ಯೇಕ ತೊಂದರೆಗಳಿದ್ದು, ಶೃಂಗೇರಿಯಿಂದ ಹರಿಹರ, ಪರಿಹರದಿಂದ ತುಂಗಭದ್ರಾ ಮತ್ತು ತುಂಗಭದ್ರಾದಿಂದ ಕಂಪ್ಲಿ ಭಾಗದ ಮೂಲಕ ಕೆಳಭಾಗದ ರಾಯಚೂರುವರೆಗೆ ಬೇರೆಬೇರೆ ಸವಾಲುಗಳನ್ನು ಎದುರಿಸಲಾಗುತ್ತಿದೆ. ಮೇಲ್ಭಾಗದ ಕಾರ್ಖಾನೆಯಿಂದ ಬರುವ ವಿಷಪೂರಿತ ನೀರು, ಹೊಲಗಳಿಗೆ ರಾಸಾಯನಿಕ ಬಳಸುವುದರಿಂದ ನದಿ ನೀರು ಕಲುಷಿತಗೊಂಡು ಜನರಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಈಗಲೇ ನಾವು ಎಚ್ಚೆತ್ತುಗೊಳ್ಳದಿದ್ದರೆ, ಮುಂದಿನ ದಿನದಲ್ಲಿ ಬಹಳಷ್ಟು ಕಷ್ಟದ ದಿನಗಳನ್ನು ಅನುಭವಿಸುವ ಜೊತೆಗೆ ಇಲ್ಲಿನ ಕಲುಷಿತ ನೀರು ಸೇವನೆಗೆ ನಾನಾ ರೋಗ ರುಜಿನಗಳು ಮನುಷ್ಯನಲ್ಲಿ ನೆಲೆಸಲಿವೆ. ಆಗಾಗಿ ಜನರು ಈಗಲಿಂದಲೇ ನದಿಗೆ ಬರುವ ಕಲುಷಿತ ನೀರಿಗೆ ತಡೆವೊಡ್ಡಬೇಕಾಗಿದೆ. ಇದಕ್ಕೆ ಹೋರಾಟವೇ ಅತಿಮುಖ್ಯವಾಗಲಿದೆ. ಇದರಿಂದ ಕಿಷ್ಕಿಂದದಿಂದ ಮಂತ್ರಾಲಯದವರೆಗೆ ಮೂರನೇ ಹಂತದ ಪಾದಯಾತ್ರೆಯ ಮೂಲಕ ಸಭೆಗಳನ್ನು ಮಾಡಲಾಗುತ್ತಿದೆ. ಇಂತಹ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ, ನದಿ ಉಳಿವಿಗೆ ಮುಂದಾಗಬೇಕು ಎಂದರು.
ಇಲ್ಲಿನ ಸಭೆಯಲ್ಲಿ ನದಿ ಉಳಿಸುವ ಸಂಬಂದ ಕೆಲ ಕಾಲ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಭೆಯಲ್ಲಿ ರಾಷ್ಟ್ರೀಯ ಆಂದೋಲನದ ದಕ್ಷಿಣ ಭಾರತದ ಸಂಚಾಲಕ ಸಿ.ಪಿ ಮಾಧವನ್, ಮಾಜಿ ಶಾಸಕ ಮಹಿಮಾ ಪಟೇಲ್, ಆನೆಗುಂದಿ ಸಂಸ್ಥಾನದ ರಾಜಮಾತೆ ಶ್ರೀಲಲಿತಾರಾಣಿ ಶ್ರೀರಂಗದೇವರಾಯಲು, ಗಂಗಾವತಿಯ ಗ್ರಾಮೀಣ ಭಾರತಿ 9.4 ಎಫ್‌ಎಂ ನಿಲಯ ನಿರ್ದೇಶಕ ರಾಘವೇಂದ್ರ ತೋನಾ, ಚಲನಚಿತ್ರ ನಟ ಮತ್ತು ಕೊಪ್ಪಳ ನಿರ್ಮೂಲನಾ ತುಂಗಭದ್ರಾ ಅಭಿಯಾನದ ಸಂಚಾಲಕ ವಿಷ್ಣು ತೀರ್ಥ ಜ್ಯೋಷಿ, ಬಳ್ಳಾರಿ ಜಿಲ್ಲಾ ಸಂಚಾಲಕ ರಾಮಕೃಷ್ಣ, ಕರ್ನಾಟಕ ದೀಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ಪುರಸಭೆ ಸದಸ್ಯ ಎಸ್.ಎಂ.ನಾಗರಾಜ, ಮುಖಂಡರಾದ ಡಾ. ಜಂಬೂನಾಥಗೌಡ, ಡಾ.ಶ್ರೀನಿವಾಸರೆಡ್ಡಿ, ಚಂದ್ರಶೇಖರ್ ಬಣಗಾರ, ವಾಗೀಶ್, ಅಂಚೆ ಮಹಮ್ಮದ್ ಸಾಹೇಬ್, ರಂಗಪ್ಪ, ಆದೋನಿ ನಾಗರಾಜ, ಡಾ.ಶಿವಕುಮಾರ, ಡಾ.ಭಟ್ಟರಾಮ, ಕೆ.ತಿಮ್ಮಪ್ಪನಾಯಕ, ಕೆ.ಎಸ್.ದೊಡ್ಡಬಸಪ್ಪ, ಟಿ.ಗಂಗಣ್ಣ, ಕೆ.ಸುದರ್ಶನ, ರವೀಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















