ಧರ್ಮಸಭೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಮಾತೆಯ ಋಣ ತೀರಿಸಲಾಗದ ಋಣ:ಭರತನೂರ ಶ್ರೀ
ಚಿಂಚೋಳಿ: ಜಗತ್ತಿಗೆ ತಾಯಿ ತ್ಯಾಗದ ಗುಣ ಬಹುದೊಡ್ಡದು. ತಾಯಿಯು ಅನೇಕ ನೋವು ನಲಿವಿನಲ್ಲಿ ಮಗುವಿಗೆ ಬೆಳೆಸಿ ಉತ್ತಮ ಸಂಸ್ಕಾರವಂತಳಾಗಿ ಮಾಡುತ್ತಾಳೆ ತಾಯಿ ಋಣ ತೀರಸಲಾಗದ ಋಣವಾಗಿದ್ದು ಜನ್ಮದಾತರ ಋಣ ನಾವು ಮರೆಯಬಾರದೆಂದು ಭರತನೂರನ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.
ಅವರು ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದ ಶ್ರೀ ಅಮರೇಶ್ವರ ಹಿರೇಮಠದ ಆವರಣದಲ್ಲಿ ಗುರುವಾರ ಹಮ್ಮಿಕೊಂಡ ಮಹಾತಪಸ್ವಿ ಶಾಂತಲಿಂಗ ಶಿವಯೋಗಿಗಳ 49 ನೇ ಪುಣ್ಯ ಸ್ಮರಣೋತ್ಸವ ನಿಮಿತ್ತವಾಗಿ ಹಮ್ಮಿಕೊಂಡ ಧರ್ಮಸಭೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ತಂದೆ-ತಾಯಿಯವರ ತ್ಯಾಗ ದೊಡ್ಡದು. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದರಿಂದ ಮಕ್ಕಳ ಬದುಕು ಬದಲಾಯಿಸುವ ಮಾತೆಯ ಪ್ರೀತಿ, ಮಾರ್ಗದರ್ಶನ ಮಕ್ಕಳಿಗೆ ಬಹುಮುಖ್ಯವಾಗಿದೆ. ಪ್ರತಿಯೊಬ್ಬರೂ ಶುದ್ಧ ಕಾಯಕ ಮಾಡಬೇಕು, ಹೆತ್ತವರ ಹಾಗೂ ಗುರುಗಳ ಸೇವೆ ಮಾಡಬೇಕು, ಯುವಕರು ದುಶ್ಚಟಗಳನ್ನು ಬಿಟ್ಟು ಒಳ್ಳೆಯ ಧರ್ಮದ ಹಾದಿಯಲ್ಲಿ ನಡೆದು ನೆಮ್ಮದಿಯ ಜೀವನ ನಡೆಸಬೇಕೆಂದರು.
ಈ ವೇಳೆ ಅಮರಶ್ರೀ ಪ್ರಶಸ್ತಿ ಸ್ವೀಕರಿಸಿ ಮಳಖೇಡ ಮೂಲಾಧಾರ ಬೃಹನ್ಮಠದ ಅಭಿನವ ಕಾರ್ತೀಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಪ್ರತಿಯೊಬ್ಬರೂ ಪುಣ್ಯ ಕರ್ಮ ಮಾಡಬೇಕು. ಹೆತ್ತವರ ಉಪಕಾರ ನಾವು ಮಾಡಬೇಕು. ಅವರ ಸ್ಮರಣೆ ಬಹಳ ಬಹುಮುಖ್ಯವಾಗಿದೆ. ಗುರುಗಳ ಸೇವೆ ಕಾರ್ಯದಲ್ಲಿ ತೊಡಗಬೇಕು. ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗುರುಗಳ ಸ್ಮರಣೆ ಮಾಡುವದರಿಂದ ದೋಷ ಮುಕ್ತರಾಗಿ ಉತ್ತಮ ಬದುಕು ಕಂಡುಕೊಳ್ಳಬಹುದು. ಕೆಟ್ಟ ಕರ್ಮ ಮಾಡಿದರೆ ಮನುಷ್ಯನಿಗೆ ದುಃಖ ಉಂಟಾಗಲಿದೆ. ಹೀಗಾಗಿ ನಾವೆಲ್ಲರೂ ಪುಣ್ಯ ಕಾರ್ಯ ಮಾಡಬೇಕೆಂದರು.
ಶ್ರೀ ಶಾಂತಲಿಂಗ ಶಿವಯೋಗಿ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿ, ಕಲಬುರಗಿ ಜಿಲ್ಲೆಯ ನ್ಯಾಯವಾದಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್.ವಿ.ಪಸಾರ್ ಅವರು ಮಾತನಾಡಿ, ಯಲಕಪಳ್ಳಿ ಗ್ರಾಮದಲ್ಲಿ ಧರ್ಮದ ಕಾರ್ಯ ಮಾಡಿಕೊಂಡು ಬರುತ್ತಿರುವದು ಗ್ರಾಮಸ್ಥರ ಭಕ್ತಿ ಎತ್ತಿತೋರಿಸುತ್ತದೆ. ಸಮಾಜದಲ್ಲಿ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ. ಮಠ ಮಾನ್ಯಗಳು ಅನೇಕ ಸೇವೆ ಕಾರ್ಯ ಮಾಡಿಕೊಂಡು ಬರುತ್ತಿದ್ದು ಯಲಕಪಳ್ಳಿ ಗ್ರಾಮದ ಶ್ರೀ ಮಠದಲ್ಲಿ ಧಾರ್ಮಿಕ ಕಾರ್ಯ ಮಾಡಿ ಗ್ರಾಮದ ಜನರಿಗೆ ಉತ್ತಮ ಸಂಸ್ಕಾರವಂತರನ್ನಾಗಿ ಮಾಡುವ ಸೇವೆ ಮಾಡಿಕೊಂಡು ಬರುತ್ತಿದೆ. ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿದ ತೊಟ್ನಳ್ಳಿಯ ಮಹಾಂತೇಶ್ವರ ಹಿರೇಮಠದ ಡಾ.ತ್ರಿಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಬಣಮಿಯ ರಾಚೋಟೇಶ್ವರ ಶಿವಾಚಾರ್ಯರು, ಸುಲೇಪೇಟನ ಟೆಂಗಿನಮಠದ ಸಿದ್ಧರಾಮ ಶಿವಾಚಾರ್ಯರು ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಅಮರೇಶ್ವರ ಹಿರೇಮಠ ಒಡೆಯರಾದ ಶಾಂತಲಿಂಗಯ್ಯ ಸ್ವಾಮೀಜಿ ,ಹಿರಿಯ ಸಾಹಿತಿ ಮಲ್ಲಿಕಾರ್ಜುನ ಪಾಲಮೂರು, ಚಿಂಚೋಳಿ ಹಾಗೂ ಕಾಳಗಿ ರೈತ ಸಂಘ ಹಾಗೂ ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ಹಣಮಂತರಾಯ ತಿಪ್ಪಾ, ಬಸವರಾಜ ಮಠಪತಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ವರದಿ ಎಸ್ ವಿ ಗಂಗಾಣಿ.




















