
ಬೆಳಗಾವಿ: ಬೆಳಗಾವಿ ಜಿಲ್ಲೆಯ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಚುನಾವಣಾ ಪ್ರಕ್ರಿಯೆ ಜೋರಾಗಿ ಸಾಗುತ್ತಿದೆ. ಇಂದು ಜೋಡೆತ್ತುಗಳಾದ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಜನಪ್ರಿಯ ಶಾಸಕರಾದ ರಾಜು ಕಾಗೆ ಅವರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಎರಡೂ ನಾಯಕರ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.
ಮಧ್ಯವರ್ತಿ ಬ್ಯಾಂಕ್ ಚುನಾವಣೆಯಲ್ಲಿ ಈ ಬಾರಿ ತೀವ್ರ ಸ್ಪರ್ಧೆ ನಿರೀಕ್ಷೆಯಾಗಿದೆ. ಮುಂದಿನ ದಿನಗಳಲ್ಲಿ ಪ್ರಚಾರ ಚಟುವಟಿಕೆಗಳು ಚುರುಕಾಗುವ ಸಾಧ್ಯತೆಯಿದೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರು ನಂದು ಮತ್ತು ರಾಜು ಕಾಗೆಯವರದು ಒಂದೇ ಬಣ ನಾವು ಯಾರ ಜೊತೆ ಗುರುತಿಸಿಕೊಂಡಿಲ್ಲ ನಮ್ಮದು ಸ್ವತಂತ್ರ ಬಣ ಎಂದು ಹೇಳಿದರು, ಅದಲ್ಲದೆ ಸುಮಾರು 1995 ರಿಂದ ನಿರಂತರವಾಗಿ 30 ವರ್ಷಗಳ ಕಾಲ ಈ ಬ್ಯಾಂಕಿನ ಸೇವೆಯನ್ನು ಮಾಡಿಕೊಳ್ಳುತ್ತಾ ಬಂದಿದ್ದೇನೆ.
1995 ರಲ್ಲಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ ನನ್ನನ್ನು ಕಳಿಸಲು ರಾಜು ಕಾಗೆಯವರು ಒಂದು ಶಕ್ತಿಯಾಗಿ ನಿಂತಿದ್ದರು. ಅವಾಗ ಮಧ್ಯವರ್ತಿ ಬ್ಯಾಂಕಿಗೆ ನಿರ್ದೇಶಕರನ್ನಾಗಿ ಮಾಡತಕ್ಕಂಥ ಸಂದರ್ಭದಲ್ಲಿ ಸಿಂಹ ಪಾಲವನ್ನು ರಾಜು ಕಾಗೆ ಅವರು ಪಡೆದುಕೊಂಡಿದ್ದರು ಎಂದು ಲಕ್ಷ್ಮಣ ಸವದಿ ಅವರು ಹೇಳಿದರು. ಈಗ ಡಿಸಿಸಿ ಬ್ಯಾಂಕ್ ಚುನಾವಣೆಗೆ ಕಾಗವಾಡ ಕ್ಷೇತ್ರವು ವಿಂಗಡಿನೆಯಾಗಿದ್ದರಿಂದ ರಾಜು ಕಾಗೆಯವರು ಕಾಗವಾಡ ಕ್ಷೇತ್ರದಿಂದ ಹಾಗೂ ನಾನು ಅಥಣಿ ಕ್ಷೇತ್ರದಿಂದ ಜೊತೆಯಾಗಿ ನಾಮಪತ್ರ ಸಲ್ಲಿಸಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜು ಕಾಗೆಯವರು ಮಾತನಾಡಿ ನಾನು ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಇದೇ ಮೊದಲು ಬಾರಿ ಸಹಕಾರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಇಲ್ಲಿಯವರೆಗೆ ಕಾಗವಾಡ ಮತ್ತು ಅಥಣಿ ಒಂದೇ ಕ್ಷೇತ್ರವಾಗಿದ್ದವು ಆದುದರಿಂದ ಲಕ್ಷ್ಮಣ ಸವದಿಯವರನ್ನು ಬೆಂಬಲಿಸಿ ಅವರನ್ನೇ ಆಯ್ಕೆ ಮಾಡುತ್ತ ಬಂದಿದ್ದೇವೆ. ಈಗ ಕ್ಷೇತ್ರಗಳು ಎರಡು ಆಗಿವೆ. ಆದ್ದರಿಂದ ನಾವು ಇಬ್ಬರು ಸ್ಪರ್ಧೆ ಮಾಡುತ್ತಿದ್ದೇವೆ. ಸಹಕಾರಿ ಸಂಘಗಳ ಮತದಾರರು ನಮ್ಮ ಮೇಲೆ ವಿಶ್ವಾಸ ಹೊಂದಿದ್ದಾರೆ ನಾವು ಇಬ್ಬರೂ ಕೂಡ ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾಗಲಿದ್ದೇವೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.
ವರದಿ. ವಿಠ್ಠಲ ಖೋಕಾಟೆ




















