ಶಾಸಕರಿಂದ ಪರಿಹಾರದ ಭರವಸೆ
ಯಾದಗಿರಿ/ಗುರುಮಠಕಲ್: ಪಟ್ಟಣದ ಹೊರವಲಯದಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿನ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸುವ ನಿಟ್ಟಿನಲ್ಲಿ ಅಧ್ಯತೆಯ ಕ್ರಮ ವಹಿಸುವದಾಗಿ ಶಾಸಕರಾದ ಶರಣಗೌಡ ಕಂದಕೂರು ಭರವಸೆ ನೀಡಿದರು.
ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಶಾಸಕ ಶರಣಗೌಡ ಕಂದಕೂರು ಅವರನ್ನು ಭೇಟಿಯಾದ ಐಟಿಐ ಪ್ರಶಿಕ್ಷಣಾರ್ಥಿಗಳು ತಮ್ಮ ಕಾಲೇಜಿನ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.
ಕಾಲೇಜಿನಲ್ಲಿನ ಮೂಲ ಸೌಕರ್ಯಗಳ ಕೊರತೆ, ವಿದ್ಯುತ್ ಸಮಸ್ಯೆ, ಸಿಬ್ಬಂದಿ ಕೊರತೆ ಸೇರಿದಂತೆ ಸಂಸ್ಥೆಯಲ್ಲಿನ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದು ಪರಿಹಾರಕ್ಕಾಗಿ ಪ್ರಶಿಕ್ಷಣಾರ್ಥಿಗಳು ಕೋರಿದರು.
ಪ್ರಶಿಕ್ಷಣಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಶಾಸಕರು ಸ್ಥಳದಿಂದಲೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾತನಾಡಿ, ಕೂಡಲೇ ಕಾಲೇಜಿಗೆ ಭೇಟಿ ನೀಡಿ ಸಮಸ್ಯೆಗಳ ಕುರಿತು ಪರಿಶೀಲಿಸಿ ಬಗೆಹರಿಸುವಂತೆ ಸೂಚಿಸಿದರು.
ಅವಶ್ಯವಾದಲ್ಲಿ ಸಂಸ್ಥೆಯ ಅನುಕೂಲಕ್ಕೆ ಶಾಸಕರ ಅನುದಾನವನ್ನು ಒದಗಿಸಲು ಸಿದ್ದವಿದ್ದು ಕೂಡಲೇ ಐಟಿಐ ಪ್ರಶಿಕ್ಷಣಾರ್ಥಿಗಳ ಸಮಸ್ಯೆ ಬಗೆಹರಿಸಿ ಎಂದು ತಾಕೀತು ಮಾಡಿದರು.
ವರದಿ: ಜಗದೀಶ್ ಕುಮಾರ್ ಭೂಮಾ




















