
ಬೀದರ್/ಬಸವಕಲ್ಯಾಣ : ಅತಿವೃಷ್ಟಿಯ ಕಾರಣದಿಂದಾಗಿ ಹಸಿ ಬರಗಾಲಿಗೆ ಪೀಡಿತರಾದ ಅನ್ನದಾತರ ಕೂಗಿಗೆ ಧ್ವನಿಯಾಗಿ ಬಸವಕಲ್ಯಾಣ ನಗರದಲ್ಲಿ ಗಾಂಧಿವೃತ್ತದವರೆಗೆ ಭಾರತೀಯ ಜನತಾ ಪಕ್ಷದ ರೈತಮೋರ್ಚಾ ವತಿಯಿಂದ ಶಾಸಕ ಶರಣಬಸಪ್ಪ ಸಲಗರ ನೇತೃತ್ವದ ಬೃಹತ್ ಪ್ರತಿಭಟನೆ ಅಚ್ಚರಿ ಮೂಡಿಸಿತು. ಬಸವಕಲ್ಯಾಣ ತಾಲೂಕಿನಲ್ಲಿ ಈ ವರ್ಷ ಆದಂತಹ ಅತಿ ವೃಷ್ಟಿಯಿಂದಾಗಿ ರೈತರ ಹೊಲ ಗದ್ದೆಗಳಲ್ಲಿ ಮೊಳಕಾಲಿನವರೆಗೆ ನೀರು ನಿಂತು ಕಟ್ಟೆ ಒಡೆದು ಮಣ್ಣು ಕೊಚ್ಚಿಕೊಂಡು ಹೋಗಿ ಮುಂಗಾರಿನ ಬೆಳೆಗಳಾದ ಸೋಯಾಬೀನ, ಹೆಸರು, ಉದ್ದು, ಎಳ್ಳು , ತೊಗರಿ ಎಲ್ಲವೂ ಹಾಳಾಗಿ ರೈತರು ಸಾಲ ಮಾಡಿ ಬೆಳೆದಂತಹ ಬೆಳೆ ಅಪಾರ ನಷ್ಟವಾಗಿ ರೈತರು ಸಂಕಷ್ಟಕ್ಕೆ ಈಡಾಗಿರುವದನ್ನು ಅರಿತು ಶಾಸಕರು ಸ್ವತಃ ತಾಲೂಕಿನಾದ್ಯಂತ ಹೊಲ ಗದ್ದೆಗಳಿಗೆ ತೆರಳಿ ಸ್ವಯಂ ವೀಕ್ಷಿಸಿ ರೈತರ ಬೆನ್ನಿಗೆ ನಿಂತು ಆಡಳಿತ ಕಾಂಗ್ರೇಸ್ ಸರಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮೂಲಕ ರೈತರ ನಿಮ್ಮ ಕೂಗು ಕೇಳದೇ ಹೋಯಿತೆ ಎಂದು ಪ್ರಶ್ನೆ ಮಾಡಿ ರೈತರ ಈ ಸಂಕಷ್ಟಕ್ಕೆ ತತ್ ಕ್ಷಣವೇ ಪರಿಹಾರ ಒದಗಿಸಿ ಎಕರೆಗೆ ಕನಿಷ್ಠ 25 ರಿಂದ 30 ಸಾವಿರ ರೂಪಾಯಿ ಮಹಾರಾಷ್ಟ್ರ ಮಾದರಿಯಲ್ಲಿ ಪರಿಹಾರ ಒದಗಿಸಬೇಕೆಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡು ರೈತರ ಜೊತೆಗೆ ನಾನೂ ಸಹ ಇದ್ದೇನೆ ನನಗೂ ನೋವಿದೆ ಎಂದು ಅಲ್ಲೇ ಇರುವ ಬಾರುಕೊಲಿನಿಂದ ಏಟು ತಿಂದು ನೋವು ನುಂಗಿದ್ದನ್ನು ಕಂಡು ಅಲ್ಲಿದ್ದ ರೈತರು ಭಾವುಕರಾಗಿ ಕಣ್ಣಿರು ಹಾಕುವ ಪ್ರಸಂಗ ನಡೆಯಿತು. ಇನ್ನಾದರೂ ರೈತರ ಸಂಕಷ್ಟಕ್ಕೆ ಜೊತೆಗೂಡಿ ಬೆಳೆ ಪರಿಹಾರ, ಬೆಳೆವಿಮೆ, ಕೃಷ್ಣಾದಂಡೆ ಮೇಲ್ದಂಡೆ ಯೋಜನೆ ತತಕ್ಷಣವೇ ಜಾರಿಗೊಳಿಸಬೇಕೆಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ವರದಿ: ಶ್ರೀನಿವಾಸ ಬಿರಾದಾರ



















