ಬಹುಶಃ ಸಾವೇ ಇರಬೇಕು ಎಲ್ಲದಕ್ಕೂ ಮುಕ್ತಿ.
ನಿಜ ಕೆಲವೊಮ್ಮೆ ಏನೋ ಕಂಡಾಗ ನೋಡಿದಾಗ ಎದುರಾಗುವ ಪ್ರತಿ ಪ್ರಶ್ನೆಗೆ ಉತ್ತರ ಅಂತ ಕಂಡಿದ್ದು ಸಾವಿನಲ್ಲಿ ಮಾತ್ರ ಎಂದೆನಿಸಿದಾಗ, ನಾಳೆಯೆಂಬುದೇ ಒಂದು ಭರವಸೆ ಅನ್ನೋದನ್ನು ಮರೀಬೇಡಿ,
ನಾನು ತರಗತಿ ಮುಗಿಸಿಕೊಂಡು ಆಫೀಸಿನಲ್ಲಿ ಬಂದು ಕುಳಿತಾಗ, ಒಬ್ಬ ಹುಡುಗ ಏನೋ ಪ್ರಶ್ನೆ ಕೇಳುತ್ತಾ ಬಂದ, ಉತ್ತರ ಸಿಕ್ಕ ನಂತರ ಹೊರಡಲು ಸಿದ್ಧನಾದ, ಅವನನ್ನು ಕರೆದು, ಹೆಸರೇನು , ಅಪ್ಪ ಅಮ್ಮನ ಬಗ್ಗೆ ಕೇಳಿದೆ ? ಅವನು ಹೆಸರು ಹೇಳದೆ ಮನದಾಳದ ದುಃಖ ಮೊದಲು ಹೇಳಲು ಮುಂದಾದ, ನಾನು ಮೂರು ವರ್ಷದವನಿರುವಾಗಲೇ , ಅಪ್ಪ ಅಮ್ಮ ಇಬ್ಬರೂ ತೀರಿಕೊಂಡಿದ್ದಾರೆ ಸಾರ್ ಎಂದ, ನನಗೆ ದುಃಖ ಒಮ್ಮೆಲೇ ಉಮ್ಮಳಿಸಿ ಬಂತು, ಮತ್ತೆ ನಿನ್ ಜೊತೆ ಯಾರಿದ್ದಾರೆ ಎಂದು ಪುನಃ ಪ್ರಶ್ನಿಸಿದಾಗ , ಅಜ್ಜಿ ಜೊತೆ ಇರ್ತೀನಿ ಸಾರ್ ತುಂಬಾ ಕಷ್ಟ ಆಗ್ತದೆ, ಕಾಣದ ದುಃಖವೊಂದು ಸದಾ ಕಾಡುತ್ತಲೇ ಇರುತ್ತದೆ, ಮಮತೆಗೆ ಅಮ್ಮನ ಮಡಿಲು ಲೋಕದ ಜ್ಞಾನಕ್ಕೆ ಅಪ್ಪನ ಹೆಗಲು ಸಿಗಲೇ ಇಲ್ಲ ಸಾರ್ , ಅಜ್ಜಿ ಒಬ್ಬರೇ ಇರೋದು ಅವರ ಜೊತೇನೆ ಕಾಲ ಕಳೀತೀನಿ ಅವರೇ ಸರ್ವಸ್ವ ಸಾರ್, ಜಾತ್ರೇಲಿ ಸಂತೇಲಿ ಮಕ್ಕಳನ್ನು ಅವರ ತಾಯಿ ಜೊತೇನೋ , ಅಪ್ಪನ ಹೆಗಲ ಮೇಲೇನೋ ಕೂತುಕೊಂಡು ಬರುವಾಗ, ಮನೆಗೆ ಹೋಗಿ ನೆನಪಿಸಿಕೊಂಡು ಒಬ್ಬನೇ ಅಳ್ತೀನಿ ಎಂದ.
ಅವನು, ಆ ಕಷ್ಟದಲ್ಲಿ ಬೆಳೆದು ಬದುಕು ಅರಿತಷ್ಟು ಜ್ಞಾನಕ್ಕೆ ಅವನ್ನನ್ನು ಸಮಾಧಾನ ಮಾಡಲು ನನ್ನ ಜ್ಞಾನ ಯೋಗ್ಯವೇ ಇಲ್ಲ ಎಂದೆನಿಸಿತು,
ಮಾತಿಗಾದರೂ ಮುಂದೆ ಒಂದು ದಿನ ಒಳ್ಳೇದ್ ಆಗುತ್ತೆ ಬಿಡು ಎಂದೆ, ಆ ಒಳ್ಳೇತನ ನೋಡಲು ನಂಗೆ ಯಾರು ಇರಲ್ಲ ಅನ್ನೋದೆ ಬೆಜಾರು ಎಂದ.
ಸಾವು ಸಹಜ, ಪ್ರಕೃತಿದತ್ತವಾದದ್ದು, ಅದರ ಹೊರತಾಗಿಯೂ ಇದೆಲ್ಲ ನಮ್ಮ ಬಾಹ್ಯ ಮತ್ತು ಅಂತರ್ದೃಷ್ಟಿಯಿಂದ ಕಂಡಾಗ ಬದುಕು ನಿಜಕ್ಕೂ ಕ್ಷಣಿಕ ಎಂದೆನಿಸುತ್ತೆ, ನಿತ್ಯ ಬದುಕಿನ ಹೋರಾಟದಲ್ಲಿ ಜಯಿಸುವವರೆಷ್ಟೋ ಸೋಲುವವರೆಷ್ಟೋ, ಸೋತು ಶರಣಾಗಿ ಸಾಯುವವರ ಲೆಕ್ಕ ಕಣ್ಮರೆ ಆಗಿದ್ದೇಷ್ಟೋ.
ನನಗೆ ಎದುರಾಗಿದ್ದು ಆ ಹುಡುಗನೊಬ್ಬನೆ, ಆದರೆ ನಿತ್ಯದ ಬದುಕಿನಲ್ಲಿ ಆ ಹುಡುಗನಂತೆಯೇ ಕಣ್ಮರೆಯಾಗಿ ಹೋರಾಟ ಮಾಡುವವರು ಸುಮಾರಿದ್ದಾರೆ, ನಿರೀಕ್ಷೆ ಒಂದೇ ಮುಂದೆ ಒಂದು ದಿನ ಒಳ್ಳೇದಾಗ್ತದೆ ಅಂತ.
ನಿಜ ಈ ಸಾವು ಎಷ್ಟೊಂದು ಕಠೋರ ಅಲ್ವಾ, ಅದಕ್ಕಿಂತ ಮೀರಿದ್ದು ಏನಿರಬಹುದು , ಅದರ ಸೆಳೆತ ಎಷ್ಟೊಂದು ಗಾಢ ಒಮ್ಮೆ ಸಿಕ್ಕಿಕೊಂಡರೆ ಸಾಕು ತನ್ನತ್ತ ಸೆಳೆದು ವಿಲೀನ ಮಾಡಿಕೊಳ್ಳುತ್ತೆ, ನಮ್ಮ ಬದುಕಿನ ಕಾಣದೆ ಕಣ್ಮರೆಯಾಗಿರೊ ಗುರಿಯೂ ಅದು ಸೇರುವುದೇ ಆಗಿರಬೇಕು , ಅದಕ್ಕಾಗಿಯೇ ಈ ಹೋರಾಟ ನಾ ..? ನೋಡು ನೋಡುತ್ತಾ ಬಹು ದೊಡ್ಡ ಬದುಕನ್ನೇ ತನ್ನ ಎರಡಕ್ಷರದ ಸಾವಿನ ಆಳಾಗಿಸುತ್ತೆ, ಅದರ ಸೆಳೆತಕ್ಕೆ ಬಲಿಯಾದವರು ನಮ್ಮವರು, ಅವರ ನೆನಪಲ್ಲಿ ಕೂತು ಸಾವನ್ನು ಶಪಿಸುತ್ತಿರುವವರು ನಾವು , ನಮ್ಮನ್ನೂ ಬಿಡದು ಅದು, ಆದರೂ ಅದರ ನಿರೀಕ್ಷೆಯಿಲ್ಲದೆ ಬದುಕುತ್ತಿರುವವರು ನಾವು ಅಮಾಯಕರಲ್ಲವೇ ..?
ಈ ಸಾವು ಬದುಕಿನಾಟದಿ ಒಂದು ಸಣ್ಣ ಭರವಸೆ ಸಾಕು ಬದುಕಲಿಕ್ಕೆ ಒಂದು ದಿನ ಎಲ್ಲಾ ಸರಿ ಹೋಗುತ್ತೆ ಎನ್ನುವುದು.
- ಆನಂದಿ ರಾಜಶೇಖರ




















