
ಎಸ್ ಎಸ್ ಕೆ ಸಮಾಜದಿಂದ ಭವ್ಯ ಶೋಭಾಯಾತ್ರೆ | ಸಾಧಕ ಮಕ್ಕಳಿಗೆ ಸನ್ಮಾನ.
ಗುರುಮಠಕಲ್: ಪ್ರತಿ ವರ್ಷದಂತೆ ಈ ವರ್ಷವೂ ಸಹ ಸೋಮವಂಶೀಯ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಜಯಂತಿ ಜರುಗಿತು.
ಪಟ್ಟಣದ ಅಂಕಮ್ಮ ದೇವಸ್ಥಾನದಲ್ಲಿ ಜಯಂತಿಯ ಪ್ರಯುಕ್ತ ದೇವಿ ಹಾಗೂ ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಜರುಗಿತು, ತದ ನಂತರ ತುಂತುರು ಮಳೆಯಲ್ಲಿಯೇ ಮುಖ್ಯ ಬೀದಿಗಳ ಮೂಲಕ ಭವ್ಯ ಶೋಭಾಯಾತ್ರೆ ನಡೆಯಿತು.
ಶೋಭಾಯಾತ್ರೆಯ ನಂತರ ಅಂಕಮ್ಮ ದೇವಸ್ಥಾನದಲ್ಲಿ ವೇದಿಕೆ ಕಾರ್ಯಕ್ರಮ ಮುಂದುವರೆಯಿತು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಖಾರಾಮ ಶ್ರೀನಿವಾಸಲು ಇಸ್ರೋ ಹಿರಿಯ ವಿಜ್ಞಾನಿ, ಪ್ರೊ. ಡಾ. ಯಶವಂತರಾವ ಮೇಂಗಜಿ, ರಾಮಕಿಶನರಾವ ಗೊಂಗಲೆ, ಡಾ. ನರಸಿಂಗರಾವ್ ಕಾಶಿಗಾವ್, ಬುಡ್ಡಪ್ಪ ಜನಾರ್ಧನ, ಹಣಮಂತರಾವ ಗೊಂಗಲೆ,ಅಂಬಾದಾಸ ಜೀತ್ರಿ, ಯಶವಂತರಾವ ಚೌಧರಿ, ವಿನಾಯಕ ಜನಾರ್ಧನ, ಭರತ ಜೀತ್ರಿ, ಶೋಭಾಬಾಯಿ ರಂಗಾಪುರ, ಜವಾಹರಲಾಲ್ ಮೇಂಗಜಿ, ಸುಷ್ಮಾ ಚೌಧರಿ, ಎಸ್ ಎಸ್ ಕೆ ಸಮಾಜದ ಅಧ್ಯಕ್ಷ ಚಂದೂಲಾಲ ಚೌಧರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಸ್ತಾವಿಕ ನುಡಿಗಳನ್ನು ಬುಡ್ಡಪ್ಪ ಜನಾರ್ಧನ ಮಾತನಾಡಿ, 55 ವರ್ಷಗಳಿಂದ ಜಯಂತಿ ಆಚರಣೆ ಮಾಡುತ್ತ ಬರಲಾಗುತ್ತಿದೆ, ಸಹಸ್ತ್ರಾರ್ಜುನ ಮಹಾರಾಜರ ವಂಶಸ್ಥರಾದ ನಮಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಎಸ್ ಎಸ್ ಎಲ್ ಸಿ, ಪಿಯುಸಿ, ಡಿಗ್ರಿ, ವೈದ್ಯಕೀಯ, ಇಂಜಿನಿಯರಿಂಗ್, ಎಲ್ಲಾ ರಂಗಗಳಲ್ಲಿ ಸಾಧನೆ ತೋರಿದ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸನ್ಮಾನಿಸಲಾಯಿತು.
ಅತಿಥಿಗಳಾಗಿ ಹಣಮಂತರಾವ ಗೊಂಗ್ಲೆ ಮಾತನಾಡಿ, ಭವ್ಯವಾಗಿ ಮಹಾರಾಜರ ಜಯಂತಿ ಸಂತಸ ತಂದಿದೆ ವ್ಯಾಪಾರವೇ ಪ್ರಮುಖ ಉದ್ಯೋಗ ಮಾಡಿಸಿಕೊಂಡಿದ್ದ ನಾವು, ನಮ್ಮ ಸಮಾಜದದಲ್ಲಿ ಶೈಕ್ಷಣಿಕವಾಗಿ ಮುಂದುವರೆದಿರುವದು ಖುಷಿ ತಂದಿದೆ, ಅಡಳಿತಾತ್ಮೀಕ ಉದ್ಯೋಗ ಪಡೆಯಲು ಯುಪಿಎಸ್ಸಿ ಪರೀಕ್ಷೆ ತರಬೇತಿ ಅವಶ್ಯವಿರುತ್ತದೆ, ಐಎಎಸ್, ಐಪಿಎಸ್ ತರಬೇತಿಗೆ ರಾಜ್ಯ ಸಮಾಜದಿಂದ ನೆರವು, ಮಾರ್ಗದರ್ಶನ ಸಹಕಾರ ನೀಡಲು ಚಿಂತನೆಯಾಗಬೇಕು ಎಂದು ಮನವಿ ಮಾಡಿದರು.
ಪ್ರೊ.ಡಾ.ಯಶವಂತರಾವ ಮೇಂಗಜಿ ಮಾತನಾಡಿ, ಕಾರ್ಯಕರ್ಮದ ಕೇಂದ್ರ ಬಿಂದು ವಿಶೇಷ ಆಹ್ವಾನಿತರಾದ ಅತಿಥಿ ಸಾಖಾರಾಮ ಶ್ರೀನಿವಾಸಲು ಆಧೋನಿ ಅವರ ಪರಿಚಯ ಹಾಗೂ ಇಸ್ರೋ ವಿಜ್ಞಾನಿಯಾಗಿ ಅವರ ಸೇವೆ ಚಂದ್ರಯಾನ 2, 3 ರ ಯಶಸ್ವಿಗೆ ಅವರ ಶ್ರಮದ ಕುರಿತು ತಿಳಿಸಿದರು.
ಇತಿಹಾಸದಲ್ಲಿನ ತಪ್ಪು ಕಲ್ಪನೆ ಕಾಮಧೇನು ವಿವಾದ ಕುರಿತು ಹೇಳಿದ ಅವರು, ಜನರು ಸಂಕಷ್ಟಕ್ಕೆ ಸಿಲುಕಿದಾಗ ಪ್ರಜೆಗಳ ಕಲ್ಯಾಣಕ್ಕೆ ಕಾಮಧೇನು ಒಂದು ಬ್ರಾಹ್ಮಣನ ಬಳಿ ಇದ್ದರೆ ಏನು ಪ್ರಯೋಜನ ಎಂದು ತಂದಿರಬಹುದು ಊಹಾಪೋಹಗಳು ಸೇರಿಕೊಂಡು ತಪ್ಪಾಗಿ ಹಾಗೆಯೇ ಉಳಿದಿದೆ ಎಂದು ಹೇಳಿದರು.
ಸಖಾರಾಮ ಶ್ರೀನಿವಾಸಲು ಇಸ್ರೋ ಹಿರಿಯ ವಿಜ್ಞಾನಿ ಮಾತನಾಡಿ, ಗುರುಮಠಕಲ್ ಸಮಾಜ ಸಾಕಷ್ಟು ಪ್ರಭಾವಶಾಲಿಯಾಗಿದೆ. ಶೈಕ್ಷಣಿಕವಾಗಿ ಸಾಕಷ್ಟು ಮುಂದುವರೆದಿದೆ, ಕೌಟುಂಬಿಕ ಜೀವನ ಸಹ ಉತ್ತಮ ಮಟ್ಟದಲ್ಲಿದೆ, ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪ್ರಥಮ ಬಂದಿದ್ದು ಹೆಮ್ಮೆ ತಂದಿದೆ, ಜೀವನ ಶೈಲಿ ಸಾಕಷ್ಟು ಬದಲಾಗಬೇಕಿದೆ. ಐಎಎಸ್, ಐಪಿಎಸ್ ಗುರಿ ಇಟ್ಟುಕೊಂಡು ಮುಂದೆ ಶ್ರಮಿಸಬೇಕು ಎಂದು ಕರೆ ನೀಡಿ, ಜಯಂತಿಯ ಶುಭ ಸಂದರ್ಭದಲ್ಲಿ ಉನ್ನತವಾದ ಆಶಯ ಮಾಡಲು ಕರೆ ನೀಡಿದರು.
ಕುಟುಂಬ ನಿರ್ವಹಣೆಯ ಜವಾಬ್ದಾರಿ ಜೊತೆ ಮಕ್ಕಳ ಶಿಕ್ಷಣದ ಜವಾಬ್ದಾರಿ, ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡುವ ಮೂಲಕ ಮಾತೆಯರು ಸಮಾಜದ ಕೀರ್ತಿ ಹೆಚ್ಚಿಸಬೇಕು ಎಂದು ಅಭಿಪ್ರಾಯ ಪಟ್ಟರು. ಸಹಸ್ರಾರ್ಜುನ ಮಹಾರಾಜರ ಜನ್ಮ ಸ್ಥಳ ಮಹೇಶ್ವರದಲ್ಲಿ 108 ಅಡಿ ಎತ್ತರದ ಪುತ್ಥಳಿ ನಿರ್ಮಾಣ ಮಾಡಲಿದೆ. ಇದರ ಬಗ್ಗೆ ಸರ್ಕಾರಕ್ಕೆ 100 ಎಕರೆಯಲ್ಲಿ ಚಿಂತನೆ ಮಾಡಿದೆ ಎಂದು ಶುಭ ಸಂದೇಶ ನೀಡಿದರು.
ಅಧ್ಯಕ್ಷ ಚಂದುಲಾಲ ಚೌಧರಿ ಮಾತನಾಡಿ, ಸಾಧನೆ ಸೋಮಾರಿಯ ಸ್ವತ್ತಲ್ಲ ಸಾಧಕನ ಸ್ವತ್ತು ಎನ್ನುವ ಮಾತು ಎಂದೆಂದಿಗೂ ಪ್ರಸ್ತುತ ಹಾಗಾಗಿ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಶಿಕಾಂತ ಜನಾರ್ಧನ, ಮಾಣಿಕಪ್ರಭು ಚೌಧರಿ, ಮೋಹನ್, ತುಕರಾಮ, ಮಹೇಶ್ ಚೌಧರಿ, ರವಿ ಗೊಂಗಲೆ, ಯಶ್ವಂತ, ನಿಖಿಲ್ ಭಾಗಿಯಾಗಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















