ಚಿಂಚೋಳಿ: ಸೇಡಂ ಮತ್ತು ಚಿಂಚೋಳಿ ಮತಕ್ಷೇತ್ರಗಳ ವ್ಯಾಪ್ತಿಯ ಗ್ರಾಮಗಳ ಮುಖ್ಯ ರಸ್ತೆಗಳು ಸಂಪೂರ್ಣ ಹದಗೆಟ್ಟು, ವಾಹನ ಸವಾರರ ಪ್ರಾಣಕ್ಕೆ ಅಪಾಯ ತಂದೊಡ್ಡಿರುವ ಹಿನ್ನೆಲೆಯಲ್ಲಿ, ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕಾನೂನು ಸೂಚನಾ ಪತ್ರ ರವಾನಿಸಿದ್ದಾರೆ. ಹಲವು ಬಾರಿ ಪ್ರತಿಭಟನೆ, ರಸ್ತೆ ತಡೆ ಚಳುವಳಿಗಳ ಮೂಲಕ ಮನವಿ ಸಲ್ಲಿಸಿದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸುಲೇಪೇಟೆ-ಹೊಡೆಬೀರನಳ್ಳಿ, ಸುಲೇಪೇಟ ದಸ್ತಾಪೂರ (ಸೇಡಂ ಕ್ಷೇತ್ರ); ಕುಂಚಾವರಂ ಕ್ರಾಸ್- ಗಣಾಪೂರ, ಚಿಮ್ಮಾ ಇದ್ಲಾಯಿ-ಚಿಂಚೋಳಿ (ಚಿಂಚೋಳಿ ಕ್ಷೇತ್ರ) ಸೇರಿದಂತೆ ಹಲವು ರಸ್ತೆಗಳು ಗುಂಡಿಗಳಿಂದ ತುಂಬಿವೆ. ನೋಟಿಸ್ ತಲುಪಿದ 30 ದಿನಗಳೊಳಗಾಗಿ ಎಲ್ಲಾ ರಸ್ತೆಗಳ ದುರಸ್ತಿ ಕಾರ್ಯ ಕೈಗೊಂಡು ಡಾಂಬರೀಕರಣ ಮಾಡಬೇಕು. ತಪ್ಪಿದಲ್ಲಿ, ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮತ್ತು ತಹಸೀಲ್ದಾರರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಿಮಿನಲ್ ದಾವೆ ಹೂಡುವುದಾಗಿ ವಕೀಲ ಶ್ರೀಮಂತ ಕಟ್ಟಿಮನಿ ಅವರು ಎಚ್ಚರಿಕೆ ನೀಡಿದ್ದಾರೆ.
ವರದಿ ಎಸ್ ವಿ ಗಂಗಾಣಿ.




















