
ಬಳ್ಳಾರಿ / ಕಂಪ್ಲಿ: ಹಿಂದಿನ ಸಭೆಯ ನಿರ್ಧಾರದಂತೆ ತುಂಗಭದ್ರಾ ಡ್ಯಾಂ ಬಳಿಯ ಮುನಿರಾದಾಬ್‌ನ ಕೆಂದ್ರ ಕಚೇರಿಯಲ್ಲಿ ಐಸಿಸಿ ಸಭೆ ಕರೆದು, ರೈತರ 2ನೇ ಬೆಳೆಗೆ ನೀರು ಒದಗಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ, ತಾಲೂಕು, ನಗರ ಘಟಕ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಬೆಂಬಲದೊಂದಿಗೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯೊಂದಿಗೆ ಕಂಪ್ಲಿ ತಾಲೂಕು ಬಂದ್ ಯಶಸ್ವಿಗೊಂಡಿತು.
ಕಂಪ್ಲಿ ತಾಲೂಕು ಬಂದ್‌ಗೆ ಉತ್ತಮ ಪ್ರಕ್ರಿಯೆ ವ್ಯಕ್ತವಾಯಿತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಒಟ್ಟಿನಲ್ಲಿ ಕಂಪ್ಲಿ ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ನೀಡಿದರು.
ಇಲ್ಲಿನ ಉದ್ಭವ ಗಣೇಶ ದೇವಸ್ಥಾನದಿಂದ ಆರಂಭಗೊಂಡ ಬೃಹತ್ ಕಾಲ್ನಡಿಗೆ ಪ್ರತಿಭಟನೆಯೊಂದಿಗೆ ಮುನಿರಾಬಾದ್‌ನಲ್ಲಿ ಅತಿ ಶೀಘ್ರದಲ್ಲೇ ಐಸಿಸಿ ಸಭೆ ಕರೆಯಬೇಕು. ಮತ್ತು ಎರಡನೇ ಬೆಳೆಗೆ ನೀರು ಹರಿಸಬೇಕೆಂಬ ಘೋಷಣೆ ವಾಕ್ಯದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಯಿತು. ಕೆಲ ಒತ್ತು ರಸ್ತೆ ಸಂಚಾರ ತಡೆದು ಪ್ರತಿಭಟನೆಯೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು. ತದನಂತರ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, ಈ ಬಾರಿ ಸಮೃದ್ಧ ಮಳೆಯಾದ ಹಿನ್ನಲೆ ಜಲಾಶಯ ಸುಮಾರು 80 ಟಿಎಂಸಿ ನೀರು ಸಂಗ್ರಹಿಸಲು ಕಾರಣವಾಗಿದೆ. ಇತ್ತೀಚೆಗೆ 19ನೇ ಕ್ರಸ್ಟ್ ಗೇಟ್ ಕಟ್ ಆಗಿ ಅಪಾರ ಪ್ರಮಾಣದ ನೀರು ಪೋಲಾಗಿ, ನಂತರ ನುರಿತ ಇಂಜಿನೀಯರ್‌ಗಳಿಂದ ತಾತ್ಕಾಲಿಕವಾಗಿ ಗೇಟ್ ಕೂರಿಸಲಾಗಿತ್ತು. ಆದರೆ, ಈಗ ಎಲ್ಲಾ ಹೊಸ ಗೇಟ್ ಕೂರಿಸುವ ನೆಪದಲ್ಲಿ ರೈತರ ಎರಡನೇ ಬೆಳೆಗೆ ನೀರು ಕೊಡಲು ಹಿಂದೇಟು ಹಾಕುವುದು ಸರಿಯಲ್ಲ. ಕಳೆದ ಜೂನ್-27ರಂದು ಬೆಂಗಳೂರಿನಲ್ಲಿ ನಡೆದ ಸಭೆಯ ತೀರ್ಮಾನದಂತೆ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಐಸಿಸಿ ಸಭೆ ಕರೆದು, ಗೇಟ್ ಅಳವಡಿಕೆ ಹಾಗೂ ಬೇಸಿಗೆ ನೀರು ಸಂಬಂದಿಸಿದಂತೆ ರೈತರೊಂದಿಗೆ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಲುವ ಭರವಸೆ ನೀಡಿದ್ದು, ಈ ಭರವಸೆ ಹುಸಿಯಾಗಿದೆ. ಇದರಿಂದ ರೈತರಲ್ಲಿ ಗೊಂದಲ ಮೂಡುವ ಜೊತೆಗೆ ಎರಡನೇ ಬೆಳೆಗೆ ನೀರು ಹರಿಸುವ ಸಂಬಂದ ಜನಪ್ರತಿನಿಧಿಗಳು, ಅಧಿಕಾರಿಗಳು ನೀಡುವ ಹೇಳಿಕೆಗಳು ರೈತರನ್ನು ಕೆರಳಿಸುವಂತೆ ಮಾಡಿದೆ. ಎರಡನೇ ಬೆಳೆ ತೆಗೆದುಕೊಂಡ ನಂತರದ ಮೂರು ತಿಂಗಳಲ್ಲಿ ಯಾವುದೇ ಬೆಳೆ ಇರುವುದಿಲ್ಲ. ಅಂತದರಲ್ಲಿ ಹೊಸ ಗೇಟ್ ಕೂರಿಸುವ ಕೆಲಸವಾಗಬೇಕು. ಅದನ್ನು ಬಿಟ್ಟು ನೀರಿದ್ದರೂ ಎರಡನೇ ಬೆಳೆಗೆ ನೀರು ಕೊಡಲು ಮುಂದಾಗದಿರುವುದು ಖಂಡನೀಯವಾಗಿದೆ. ಆದ್ದರಿಂದ ಕೂಡಲೇ ಸರ್ಕಾರ ಮತ್ತು ಅಧಿಕಾರಿಗಳು ಆದಷ್ಟು ಬೇಗ ಐಸಿಸಿ ಸಭೆ ಕರೆದು, 2ನೇ ಬೆಳೆಗೆ ನೀರು ಒದಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟಕ್ಕೆ ರೈತರು ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ವಿರೇಶ, ನಗರ ಘಟಕ ಅಧ್ಯಕ್ಷ ತಿಮ್ಮಪ್ಪನಾಯಕ, ರೈತ ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಎ.ಸಿ.ದಾನಪ್ಪ, ಕೊಟ್ಟೂರು ರಮೇಶ, ಆನಂದರೆಡ್ಡಿ ಅಳ್ಳಳ್ಳಿ ವಿರೇಶ, ಕಡೆಮನೆ ಪಂಪಾಪತಿ, ಇಟಗಿ ಬಸವರಾಜಗೌಡ, ಬಿ.ನಾರಾಯಣಪ್ಪ, ಎಂ.ಸುಧೀರ್, ಡಿ.ಮುರಾರಿ, ಸಿ.ಡಿ.ಮಹಾದೇವ, ಎನ್.ಗಂಗಣ್ಣ, ಜಡೆಪ್ಪ ಸೇರಿದಂತೆ ಅನೇಕರಿದ್ದರು. ಡಿವೈಎಸ್‌ಪಿ ಪ್ರಸಾದ್ ಗೋಖುಲೆ, ಪಿಐ ಕೆ. ಬಿ. ವಾಸುಕುಮಾರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವರದಿ : ಜಿಲಾನಸಾಬ್ ಬಡಿಗೇರ್



















